ADVERTISEMENT

ಪರರ ಬಾಳಿಗೆ ಪ್ರೇರಣೆ ನೀಡಿ

ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ವಿಶ್ವ ಯುವಜನ ಮೇಳದಲ್ಲಿ ಆಧ್ಯಾತ್ಮಿಕ ಗುರು ನಿತ್ಯಶಾಂತಿ ನೀತಿಬೋಧೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 12:10 IST
Last Updated 20 ನವೆಂಬರ್ 2019, 12:10 IST
ಯುವ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಿಂಗಾಪುರದ ಯುವ ಪ್ರತಿನಿಧಿಗಳು ಹಿರಿಯ ಭಕ್ತರ ಬಾಳಿನ ಯಶೋಗಾಥೆಯ ಸಂದೇಶವುಳ್ಳ ‘ಬಿ ಯಾನ್ ಇನ್ಪಿರೇಷನ್ ಲೆಟ್ ಗೋ ಯಾಂಡ್ ಲೆಟ್ ಗಾಡ್’ ರೂಪಕ ಪ್ರಸ್ತುತ ಪಡಿಸಿದರು.
ಯುವ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಿಂಗಾಪುರದ ಯುವ ಪ್ರತಿನಿಧಿಗಳು ಹಿರಿಯ ಭಕ್ತರ ಬಾಳಿನ ಯಶೋಗಾಥೆಯ ಸಂದೇಶವುಳ್ಳ ‘ಬಿ ಯಾನ್ ಇನ್ಪಿರೇಷನ್ ಲೆಟ್ ಗೋ ಯಾಂಡ್ ಲೆಟ್ ಗಾಡ್’ ರೂಪಕ ಪ್ರಸ್ತುತ ಪಡಿಸಿದರು.   

ಚಿಕ್ಕಬಳ್ಳಾಪುರ: ‘ನಮ್ಮ ಮಾತು ಮತ್ತು ಕೃತಿಗಳು ಪರರ ಬಾಳಿನಲ್ಲಿ ಪ್ರೇರಣೆ ನೀಡುವಂತಾಗಬೇಕು. ಹೃದಯಕ್ಕೆ ತಟ್ಟುವ ಒಂದೇ ಒಂದು ಅಪ್ಯಾಯಮಾನವಾದ ಮಾತು ನಮ್ಮಲ್ಲಿ ಮಧುರ ಬಾಂಧವ್ಯವನ್ನು ಬೆಳೆಸುತ್ತದೆ. ಆ ಬಾಂಧವ್ಯವೇ ನಮ್ಮನ್ನು ನಮ್ಮ ಕಠಿಣ ಕಾಲದಲ್ಲಿ ಕಾಪಾಡುತ್ತದೆ’ ಎಂದು ಆಧ್ಯಾತ್ಮಿಕ ಗುರು ನಿತ್ಯಶಾಂತಿ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ವಿಶ್ವ ಯುವಜನ ಮೇಳದಲ್ಲಿ ಬುಧವಾರ ಅವರ ಮಾತನಾಡಿದರು.

‘ನಮ್ಮ ಮುಖವನ್ನು ನೋಡಿಕೊಂಡು ಸಂತೋಷ ಪಡಲು ನಮ್ಮಿಂದ ಸಾಧ್ಯವಿಲ್ಲ. ಅದೇ ಸಂತೋಷವನ್ನು ನಾವು ನೋಡಿ ಆನಂದಿಸಬೇಕಾದರೆ ಅದು ಪರರ ಮುಖದಲ್ಲಿ ಪ್ರತಿಬಿಂಬಿಸಬೇಕು. ನಾವು ಕೈಗೊಳ್ಳುವ ಕಾರ್ಯಗಳು ಇತರರ ಬಾಳಿನಲ್ಲಿ ಬೆಳಕಾಗಿ ಅವರು ಸಂತೋಷದ ಪ್ರತಿಕ್ರಿಯೆಯನ್ನು ತೋರಿದಲ್ಲಿ ನಮ್ಮ ಅಂತರಂಗದ ಮುಖವನ್ನು ಪರರ ಬಹಿರಂಗದ ಮುಖದಲ್ಲಿ ಕಾಣಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

ದೆಹಲಿಯ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಚಂದ್ರಶೇಖರ ಬಿ.ಶರ್ಮಾ ಮಾತನಾಡಿ, ‘ಯಾರೇ ಆದರೂ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸಬೇಕು. ಅಗತ್ಯಗಳನ್ನು ಅರಿತು ಅದಕ್ಕೆ ತಕ್ಕ ತಯಾರಿಯನ್ನು ನಡೆಸಿ ಕಾರ್ಯಪ್ರವೃತ್ತರಾದರೆ ಸಮಾಜಕ್ಕೆ ಏನನ್ನಾದರೂ ಕೊಡಬೇಕೆನ್ನುವ ನಮ್ಮ ಕಳಕಳಿ ಅರ್ಥಪೂರ್ಣವಾಗುತ್ತದೆ’ ಎಂದು ತಿಳಿಸಿದರು.

‘ಕಲಿಕಾ ಕ್ಷೇತ್ರದಲ್ಲಿ ಕಲಿಕಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಪೂರಕ ವಾತಾವರಣ ಕಲ್ಪಿಸಿದಾಗ ಪ್ರತಿಭೆಯೂ ವಿಕಸನಗೊಳ್ಳುತ್ತದೆ. ಶ್ರಮವೂ ಸಾರ್ಥಕವಾಗುತ್ತದೆ. ಆದ್ದರಿಂದ ಯುವಜನತೆ ಜಗದ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಪಂದಿಸಬೇಕು’ ಎಂದರು.

ಸತ್ಯಸಾಯಿ ಬಾಬಾ ಅವರ ಸಂದೇಶ ವಾಹಕ ಮಧುಸೂಧನ್ ನಾಯ್ಡು ಮಾತನಾಡಿ, ‘ಪ್ರತಿಯೊಬ್ಬರೂ ತಾವು ಕೈಗೊಳ್ಳುವ ಸದಾಚಾರಗಳು ಪರರಿಗೆ ಪ್ರೇರೇಪಣೆದಾಯಕವಾಗಿ ಇರಬೇಕು. ನಾವು, ನಮ್ಮ ಕಾಯಗಳು ಅಳಿಯಬಹುದು, ಆದರೆ ಸತ್ಕಾರ್ಯಗಳು ಪೀಳಿಗೆಯಿಂದ ಪೀಳಿಗೆಗೆ ಪ್ರೇರೇಪಣೆಯ ವಾಹಿನಿಯಾಗಿ ಪ್ರವಹಿಸುತ್ತಲೇ ಇರುತ್ತವೆ’ ಎಂದು ಹೇಳಿದರು.

‘ಹಿರಿಯರ ಆದರ್ಶದ ಅನುಕರಣೆ ಕಿರಿಯರ ಪರಿವರ್ತನೆಗೆ ಅವಕಾಶ ಮಾಡಿಕೊಡುತ್ತದೆ. ಎಲ್ಲಿ ಸತ್ಕಾರ್ಯಗಳು ಇರುತ್ತವೋ ಅಲ್ಲಿ ಕೈಜೋಡಿಸಬೇಕು. ಆಗ ಪ್ರೇಮ ಮತ್ತು ಸೇವೆಗಳು ಸಮಾಗಮವಾಗಿ ಸಂಸ್ಕಾರ, ಸಂಸ್ಕೃತಿ ಬೆಳೆದು ಉಳಿಯುತ್ತದೆ’ ಎಂದು ತಿಳಿಸಿದರು.

ಉತ್ತರ ಅಮೇರಿಕಾ ಬಾಬಾ ಬ್ಯಾಂಡ್ ತಂಡದ ಹವ್ಯಾಸಿ ಕಲಾವಿದರು ಸಂಗೀತಗೋಷ್ಠಿ ನಡೆಸಿಕೊಟ್ಟರು. ಕಲಬುರ್ಗಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ, ಅಮೆರಿಕದ ಉದ್ಯಮಿ ಐಸಾಕ್ ಟೈಗ್ರೆಟ್, ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆ ಟ್ರಸ್ಟಿಗಳಾದ ಬಿ.ನಾರಾಯಣರಾವ್, ಕರಾಯ ಸಂಜೀವ ಶೆಟ್ಟಿ, ಮಹೇಂದ್ರ ಹೆಗಡೆ, ಕಾನ ಸುಂದರಭಟ್, ಕಬೀರ್ ಅಡ್ಕಸ್ಥಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.