ADVERTISEMENT

ಕಸಾಪ; ಹೆಚ್ಚಿದ ಆಂತರಿಕ ಕಾವು

ಪ್ರೊ.ಕೋಡಿ ರಂಗಪ್ಪ ಸ್ಪರ್ಧೆ ಖಚಿತ; ಗೆಳೆಯರ ಜತೆ ಚರ್ಚಿಸಿ ತೀರ್ಮಾನ ಎಂದ ಕೈವಾರ ಶ್ರೀನಿವಾಸ್

ಡಿ.ಎಂ.ಕುರ್ಕೆ ಪ್ರಶಾಂತ
Published 4 ಮಾರ್ಚ್ 2021, 2:28 IST
Last Updated 4 ಮಾರ್ಚ್ 2021, 2:28 IST
ಕೋಡಿ ರಂಗಪ್ಪ
ಕೋಡಿ ರಂಗಪ್ಪ   

ಚಿಕ್ಕಬಳ್ಳಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಕಣ ಈಗಲೇ ರಂಗೇರಿದೆ. ‌ಮೇ 9ಕ್ಕೆ ಕಸಾಪ ಕೇಂದ್ರ ಸಮಿತಿ ಸೇರಿದಂತೆ ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯಲಿದೆ.

ಮಾ.2ಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಕೈವಾರ ಶ್ರೀನಿವಾಸ್ ಅವರ ಅಧಿಕಾರದ ಅವಧಿ ಪೂರ್ಣವಾಗಿದೆ. ಜಿಲ್ಲೆಯಲ್ಲಿ ಮತದಾನಕ್ಕೆ ಅರ್ಹರಾದ ಒಟ್ಟು 6,894 ಮಂದಿ ಕಸಾಪ ಸದಸ್ಯರು ಇದ್ದಾರೆ. ಮೇಲ್ನೋಟಕ್ಕೆ ಕಸಾಪ ಚುನಾವಣೆಯ ಭರಾಟೆ ಕಾಣುತ್ತಿಲ್ಲ. ಆದರೆ ಆಂತರಿಕ ಸಭೆಗಳು ನಡೆಯುತ್ತಿದ್ದು ಚುನಾವಣೆಯ ಕಾವು ಹೆಚ್ಚುತ್ತಿದೆ.

ಕಳೆದ ಬಾರಿ ಕೈವಾರ ಶ್ರೀನಿವಾಸ್ ಸೇರಿದಂತೆ ಐದು ಮಂದಿ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ಶಿಕ್ಷಣ ತಜ್ಞ ಪ್ರೊ.ಕೋಡಿ ರಂಗಪ್ಪ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಕಸಾಪ ಅಧ್ಯಕ್ಷ ಕೈವಾರ ಶ್ರೀನಿವಾಸ್ ನಾಲ್ಕೈದು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ADVERTISEMENT

ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಕೆಲಸ ಮಾಡುವವರಷ್ಟೇ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ನಿಯಮವೇನೂ ಇಲ್ಲ. ಪರಿಷತ್ ಸದಸ್ಯರಾಗಿರುವ ಕನ್ನಡಿಗರಾದ ಯಾರಾದರೂ ಸ್ಪರ್ಧೆ ಮಾಡಬಹುದು. ಮುಕ್ತ ಸ್ಪರ್ಧೆ ಕಾರಣದಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವವರೂ ಅಧ್ಯಕ್ಷ ಸ್ಥಾನದ ಮೇಲೆ ದೃಷ್ಟಿ ಹರಿಸುವ ಸಾಧ್ಯತೆ ಇದೆ. ಸ್ಪರ್ಧಿಗಳ ಸಂಖ್ಯೆ ಬೆಳೆಯಲೂಬಹುದು.

ಜಿಲ್ಲಾ ಕಸಾಪ ಚುನಾವಣೆಯಲ್ಲಿಯೂ ಜಾತಿ ಆಧಾರಿತ ಮತಗಳ ವಿಭಜನೆ, ಕ್ರೋಡೀಕರಣ ನಡೆಯುತ್ತದೆ. ಹಣ ಬಲ, ಜಾತಿ ಪ್ರಭಾವ, ತಮ್ಮದೇ ಆದ ವೈಯಕ್ತಿಕ ಸಂಪರ್ಕ, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹೀಗೆ ವಿವಿಧ ವಿಚಾರಗಳು ಪ್ರಮುಖವಾಗುತ್ತವೆ. ಚುನಾವಣೆ ಅಧಿಕೃತವಾಗಿ ಘೋಷಣೆಯಾದ ತರುವಾಯ ಈ ಚರ್ಚೆಗಳು ಮತ್ತಷ್ಟು ಗರಿಗೆದರುತ್ತವೆ ಎನ್ನಲಾಗುತ್ತಿದೆ.

ಕೋಡಿ ರಂಗಪ್ಪ ಅವರನ್ನು ಬೆಂಬಲಿಸಿ ಸಮಾನ ಮನಸ್ಕರು ಈಗಾಗಲೇ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಈಗಾಗಲೇ ಆರು ಸಭೆಗಳನ್ನು ನಡೆಸಿದ್ದಾರೆ. ಕೋಡಿ ರಂಗಪ್ಪ ಅವರ ಪ್ರವೇಶ ಕಸಾಪ ಚುನಾವಣಾ ಕಣಕ್ಕೆ ತೀವ್ರ ಹುರು‍ಪು ತಂದಿದೆ.

’ಈ ಹಿಂದೆ ಮೂರು ಸಾವಿರ ಸದಸ್ಯರು ಇದ್ದರು. ನನ್ನ ಅಧಿಕಾರದ ಅವಧಿಯಲ್ಲಿ ಸದಸ್ಯರ ಸಂಖ್ಯೆ 7 ಸಾವಿರಕ್ಕೆ ಹೆಚ್ಚಿದೆ. ನನ್ನ ಅವಧಿಯಲ್ಲಿ 500ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದೇನೆ. ಅನುದಾನ ಪಡೆಯದೆಯೇ ಬಹಳಷ್ಟು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿರುವ ತೃಪ್ತಿ ಇದೆ‘ ಎಂದು ಕೈವಾರ ಶ್ರೀನಿವಾಸ್ ’ಪ್ರಜಾವಾಣಿ‘ಗೆ ತಿಳಿಸಿದರು.

’ಚುನಾವಣೆ ನಡೆಯುವ ಸಾಧ್ಯತೆ ಇದೆ. ಯಾರು ಯಾರು ಸ್ಪರ್ಧೆ ಮಾಡುವರು ಎನ್ನುವುದು ಇನ್ನೂ ನಿಖರವಾಗಿಲ್ಲ. ನನ್ನ ಅವಧಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ಸಾಧ್ಯವಿಲ್ಲ. ಈ ಬಾರಿ ಅದನ್ನು ಈಡೇರಿಸಬೇಕು ಎನ್ನುವ ಆಸೆ ನನಗೆ ಇದೆ‘ ಎಂದರು.

’ನಾನು ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಇದ್ದೇನೆ. ಎಲ್ಲ ತಾಲ್ಲೂಕಿನ ಸಮಾನ ಮನಸ್ಕರು, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಬೆಂಬಲಿಸಿದ್ದಾರೆ‘ ಎಂದು ಶಿಕ್ಷಣ ತಜ್ಞ ಪ್ರೊ.ಕೋಡಿ ರಂಗಪ್ಪ ತಿಳಿಸಿದರು.

’ನಿಮ್ಮ ಕೆಲಸಗಳ ಹಿಂದಿರುತ್ತೇನೆ. ಸ್ಪರ್ಧೆ ಬೇಡ ಎಂದಿದ್ದೆ. ಆದರೆ ನಿಮಗೆ ಇದು ಕಡೆಯ ಅವಕಾಶವಾಗಿದೆ. ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಬೇಕಾಗಿದೆ ಎಂದರು. ನಾನೂ ಕೂಡ ಕನ್ನಡದ ಕೆಲಸ ಮಾಡಬೇಕು ಎಂದುಕೊಂಡೆ. ಈ ಎಲ್ಲ ಕಾರಣದಿಂದ ಸ್ಪರ್ಧಿಸುತ್ತಿದ್ದೇನೆ‘ ಎಂದು ಹೇಳಿದರು.

’ಯಾವುದೇ ವ್ಯಕ್ತಿಗತ ಪ್ರತಿಷ್ಠೆ, ಜಾತಿ, ಧರ್ಮ, ಆಮಿಷ ಇದ್ಯಾವುದೂ ನಮ್ಮ ತಂಡದ ಚುನಾವಣೆಯ ನೀತಿಗಳಲ್ಲಿ ಇಲ್ಲ. ಪ್ರಜಾಸತ್ತಾತ್ಮಕವಾಗಿ ಮಾನವೀಯವಾಗಿ ಕೆಲಸ ಮಾಡುವುದು ನಮ್ಮ ‌ಉದ್ದೇಶ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.