ADVERTISEMENT

ರಕ್ತ ಕೊಟ್ಟೆವು, ಭೂಮಿ ಕೊಡುವ ಪ್ರಶ್ನೆಯೇ ಇಲ್ಲ:ಕೆಐಎಡಿಬಿ ಭೂವಿರೋಧಿ ಹೋರಾಟ ಸಮಿತಿ

ಕೆಐಎಡಿಬಿ ಭೂ ವಿರೋಧಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:59 IST
Last Updated 5 ಮೇ 2025, 13:59 IST
ಶಿಡ್ಲಘಟ್ಟದಲ್ಲಿ ಹಸಿರು ಸೇನೆ ರೈತ ಸಂಘ, ಕೆಐಎಡಿಬಿ ಭೂ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು
ಶಿಡ್ಲಘಟ್ಟದಲ್ಲಿ ಹಸಿರು ಸೇನೆ ರೈತ ಸಂಘ, ಕೆಐಎಡಿಬಿ ಭೂ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು   

ಶಿಡ್ಲಘಟ್ಟ: ಕೆಐಎಡಿಬಿಯು ಫಲವತ್ತಾದ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆ ಕೈ ಬಿಡಲು ಏಪ್ರಿಲ್ 25 ರಂದು ನಡೆಸಿದ ರೈತರಿಂದ ಅಭಿಪ್ರಾಯ ಸಂಗ್ರಹವು ಪಾರದರ್ಶಕವಾಗಿ ನಡೆದಿಲ್ಲ. ಜೊತೆಗೆ ರೈತರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಲಘುವಾದ ಹೇಳಿಕೆ ವಿರುದ್ಧ ಹಸಿರು ಸೇನೆ ರೈತ ಸಂಘ, ಕೆಐಎಡಿಬಿ ಭೂ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಶಿಡ್ಲಘಟ್ಟ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಾವು ಕೈಗಾರಿಕೆಗಳ ವಿರೋಧಿಗಳಲ್ಲ. ಆದರೆ, ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳುವುದನ್ನು ಬಲವಾಗಿ ವಿರೋಧಿಸುತ್ತೇವೆ ಎಂದರು.

ರೈತರು ಭೂಮಿಯನ್ನು ನೀಡಲು ಒಪ್ಪಿದರೆ ಮಾತ್ರವೇ ರಾಜ್ಯ ಸರ್ಕಾರ, ಕೆಐಎಡಿಬಿಯು ಕೈಗಾರಿಕೆಗಳ ಸ್ಥಾಪನೆಗೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಿ. ಅದು ಬಿಟ್ಟು ರೈತರ ವಿರೋಧದ ನಡುವೆಯೂ ಹಠಕ್ಕೆ ಬಿದ್ದಂತೆ ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತವು ಫಲವತ್ತಾದ ಕೃಷಿ ಭೂಮಿಯನ್ನು ಏಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆಯೋ ಅರ್ಥವಾಗುತ್ತಿಲ್ಲ ಎಂದರು.

ADVERTISEMENT

ರೈತರ ಪರ ಎಂದು ಹೇಳಿಕೊಳ್ಳುವ ಸರ್ಕಾರ, ಜನಪ್ರತಿನಿಧಿಗಳು ಬಂಡವಾಳಶಾಯಿಗಳ ಮರ್ಜಿಗೆ ಬಿದ್ದು ಫಲವತ್ತಾದ ಕೃಷಿ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೆ ಬಲವಂತಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ. ರಕ್ತ ಕೊಡುತ್ತೇವೆ ಜೀವವನ್ನಾದರೂ ಕೊಡುತ್ತೇವೆ ಆದರೆ ಭೂಮಿಯನ್ನ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದು ಹೇಳಿದರು.

ಏ.25 ರಂದು ಕೆಐಎಡಿಬಿಗೆ ಜಮೀನು ನೀಡುವ ಮತ್ತು ನೀಡದಿರುವ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ರೈತರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದು ಸರಿ. ಜಮೀನು ನೀಡುವ ರೈತರು ಬಿಳಿ ಚೀಟಿಯಲ್ಲೂ, ನೀಡದಿರುವ ರೈತರು ಪಿಂಕ್ ಚೀಟಿಯಲ್ಲೂ ತಮ್ಮ ಅಭಿಪ್ರಾಯವನ್ನು ಬರೆದುಕೊಟ್ಟರು.

ಆದರೆ ಬಿಳಿ ಚೀಟಿ ಹಾಗೂ ಪಿಂಕ್ ಚೀಟಿ ಎಣಿಕೆ ವೇಳೆ ಯಾವೊಬ್ಬ ರೈತರನ್ನು ಬಿಟ್ಟುಕೊಳ್ಳದೆ ಸಚಿವರು, ಅಧಿಕಾರಿಗಳು ಕೊಠಡಿಯಲ್ಲಿ ಕುಳಿತು ಮತ ಎಣಿಕೆ ಮಾಡಿ ಪ್ರಕಟಿಸಿದ ಅಂಕಿ ಅಂಶಗಳ ಬಗ್ಗೆ ನಮಗೆ ಅನುಮಾನ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಪಾರದರ್ಶಕವಾಗಿ ಎಣಿಕೆ ಕಾರ್ಯ ಆಗಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಎಣಿಕೆ ಕಾರ್ಯ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಹಸಿರು ಶಾಲು ಹಾಕಿಕೊಂಡ ಎಲ್ಲರೂ ರೈತರಲ್ಲ ಎಂದೆಲ್ಲಾ ಮಾತನಾಡಿದ್ದೀರಿ, ಕೆಐಎಡಿಬಿಗೆ ಏಕೆ ವಿರೋಧಿಸುತ್ತೀರಿ, ಡ್ರೀಮ್ಡ್ ಫಾರೆಸ್ಟ್ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ್ದೀರಿ.

ನಾವು ಡೀಮ್ಡ್ ಫಾರೆಸ್ಟ್ ಬಗ್ಗೆ ಧ್ವನಿ ಎತ್ತಿದ್ದೇವೆ, ಹೋರಾಟವನ್ನೂ ಮಾಡಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ರೈತರನ್ನು ಗುಳೆ ಎಬ್ಬಿಸದಂತೆ ತಡೆದಿದ್ದೇವೆ. ಹಸಿರು ಶಾಲು ಹಾಕಿರುವುದು ರೈತರ ಕಷ್ಟಗಳಿಗೆ ಸ್ಪಂದಿಸಲು. ಹಾಗಾಗಿಯೇ ಕೆಐಎಡಿಬಿಗೆ ಜಮೀನನ್ನು ನೀಡುವುದನ್ನು ವಿರೋಧಿಸುತ್ತಿದ್ದೇವೆ. ಹಸಿರು ಶಾಲು ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ಇತರರು ಮಾತನಾಡಿದರು.

ಕೆಐಎಡಿಬಿ ಭೂ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಸೀಕಲ್ ಆನಂದಗೌಡ, ರೈತ ಸಂಘದ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ವೇಣುಗೋಪಾಲ್, ಅಜಿತ್ ಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.