ADVERTISEMENT

ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣಾ ಶಕ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 11:09 IST
Last Updated 12 ಸೆಪ್ಟೆಂಬರ್ 2020, 11:09 IST
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಶಿಕ್ಷಕರು ಕಲಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು ಮಕ್ಕಳ ಕಲಿಕೆಗೆ ಉತ್ಸಾಹ ತುಂಬಿ ಆ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣಾ ಶಕ್ತಿಯಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಜಿಲ್ಲಾಡಳಿ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರಾದವರು ಎಂದಿಗೂ ಕಲಿಕೆ ನಿಲ್ಲಿಸಬಾರದು. ಹುಟ್ಟಿನಿಂದ ಸಾವಿನ ವರೆಗೂ ಕಲಿಕೆ ಬಹಳ ಮುಖ್ಯ. ಪ್ರತಿಯೊಬ್ಬ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಆವಿಷ್ಕಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಹೊಸ ಪೀಳಿಗೆಗೆ ತಕ್ಕಂತೆ ಶಿಕ್ಷಣದ ಪದ್ಧತಿ ಬದಲಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಶಿಕ್ಷಕನಿಗೆ ನಿವೃತ್ತಿ ಇರುವುದಿಲ್ಲ. ಕಲಿಕೆಯಲ್ಲಿ ಶಿಕ್ಷಕರು ಉತ್ಸಾಹದಿಂದ ತೊಡಗಿಕೊಂಡು, ಮಕ್ಕಳಿಗೆ ಪ್ರೀತಿ ವಾತ್ಸಲ್ಯದಿಂದ ಪಾಠ ಮಾಡಬೇಕು. ಸಮಾಜದಲ್ಲಿರುವ ಜಾತಿ ಪದ್ದತಿ, ಅಜ್ಞಾನ, ಭ್ರಷ್ಟಾಚಾರ ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ’ ಎಂದು ಅಭಿಪ್ರಾಯಪಟ್ಟರು. ‌

‘ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಸಾಧಾರಣ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 20ನೇ ಸ್ಥಾನದಲ್ಲಿದ್ದ ನಮ್ಮ‌ ಜಿಲ್ಲೆಯನ್ನು ಶಿಕ್ಷಕರ ಶ್ರಮದಿಂದ ಈ ವರ್ಷ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ. ಈ ಸಾಧನೆ ಪ್ರತಿವರ್ಷ ಮರುಕಳಿಸಬೇಕು’ ಎಂದರು.

2020-21ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಜಿಲ್ಲಾಧಿಕಾರಿ ಆರ್ ಲತಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ ರಾಜಾಕಾಂತ್, ಮುನಿಯಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ನಾಗೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.