ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ

ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಂದ ನಗರದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 9:53 IST
Last Updated 8 ಆಗಸ್ಟ್ 2019, 9:53 IST
ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಶಿಕ್ಷಣ ನೀತಿ 2019 (ಎನ್ಇಪಿ) ಕರಡಿನ ಬಗೆಗೆ ವ್ಯಾಪಕವಾಗಿ ಚರ್ಚೆ ನಡೆಸಲು ಅನುಕೂಲವಾಗುವಂತೆ ಕನಿಷ್ಠ ಎರಡರಿಂದ ಮೂರು ತಿಂಗಳು ಕಾಲ ವಿಸ್ತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ವಾಪಸಂದ್ರದಿಂದ ಅಂಬೇಡ್ಕರ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನೂತನ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ವಿ.ಅಂಬರೀಶ್, ‘ಕೇಂದ್ರ ಸರ್ಕಾರ ಜಾರಿ ತರಲು ಮುಂದಾಗಿರುವ ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವಂತಿದೆ. ಹೀಗಾಗಿ ಅದನ್ನು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನೂತನ ಶಿಕ್ಷಣ ನೀತಿ ಕರಡು ವರದಿ ಕುರಿತಂತೆ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ವ್ಯಾಪಕವಾಗಿ ಚರ್ಚೆ ಆಗಲು ಅನುಕೂಲವಾಗುವಂತೆ ಎರಡು ತಿಂಗಳು ಕಾಲಾವಧಿಯನ್ನು ವಿಸ್ತರಿಸಬೇಕು. ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೇ 10 ರಷ್ಟು ಹಣವನ್ನು ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

‘ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರುವ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ರದ್ಧತಿ ಮಾಡಬಾರದು. ರಾಷ್ಟ್ರೀಯ ಶಿಕ್ಷಣ ಆಯೋಗ ರಚನೆ ಮಾಡಬಾರದು. ಸ್ವಯಂ ಸೇವೆಯ ಆಧಾರದಲ್ಲಿ ಬೋಧನೆಗೆ ಅವಕಾಶ ನೀಡುವ ಅಂಶವನ್ನು ಕರಡಿನಿಂದ ಕೈ ಬಿಡಬೇಕು. ಪ್ರತಿ ಶಾಲೆಗೂ ಅಗತ್ಯಕ್ಕೆ ತಕ್ಕಂತೆ ಬೋಧಕೇತರ ಹಾಗೂ ಡಿ.ಗ್ರೂಪ್ ನೌಕರರನ್ನು ಕಾಯಂ ಆಗಿ ನೇಮಕ ಮಾಡಬೇಕು’ ಎಂದು ಹೇಳಿದರು.

ಎಸ್‌ಎಫ್ಐ ರಾಜ್ಯ ಸಮಿತಿ ಸದಸ್ಯ ಎ.ಸೋಮಶೇಖರ್ ಮಾತನಾಡಿ, ‘ನೂತನ ಶಿಕ್ಷಣ ನೀತಿ ಸಂವಿಧಾನದ ವಿರೋಧಿಯಾಗಿದೆ. ಇದು ಜಾರಿಯಾದರೆ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಪರಿಣಾಮ, ಖಾಸಗಿ ಶಾಲೆಗಳು ಪೋಷಕರಿಂದ ಮನಸೋಇಚ್ಛೆ ಶುಲ್ಕ ವಸೂಲಿ ಮಾಡುತ್ತಿವೆ’ ಎಂದರು.

‘ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳನ್ನು ಹಾಗೂ ಕೋಠಾರಿ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು. ಸಮಾನ ಶಿಕ್ಷಣ ನೀಡುವ ಹೊಸ ವರದಿಯನ್ನು ತಯಾರಿಸಲು ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಪೋಷಕರ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಮುಖಂಡರನ್ನು ಸೇರಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಎಲ್ಲ ಸರ್ಕಾರಿ ಶಾಲೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಪಡಿಸಬೇಕು. ಗುಣಾತ್ಮಕ ಶಿಕ್ಷಣ ಸಾಧಿಸಲು ಖಾಲಿ ಇರುವ ಎಲ್ಲ ಹಂತಗಳ ಹುದ್ದೆಗಳಿಗೆ ಕಾಯಂ ಆಗಿ ಶಿಕ್ಷಕರನ್ನು ಭರ್ತಿ ಮಾಡಬೇಕು. ಶಿಕ್ಷಕರನ್ನು ಬೋಧನಾ ಕಾರ್ಯಕ್ಕೆ ಮಾತ್ರ ಸೀಮಿತಗೊಳಿಸಬೇಕು’ ಎಂದು ಹೇಳಿದರು.

ವಿದ್ಯಾರ್ಥಿ ಮುಖಂಡರಾದ ಲಕ್ಷ್ಮೀ, ವಿನುತಾ, ಕಾವೇರಿ, ಗೌತಮಿ, ಭಾಸ್ಕರ್, ನವೀನ್‌ಕುಮಾರ್, ಆದಿತ್ಯ, ಸಂತೋಷಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.