ADVERTISEMENT

ಗೌರಿಬಿದನೂರು: ತೊಂಡೇಬಾವಿ ರೈತರಿಗೆ ಖುಷಿ ತಂದ ‘ಪಿಎಂ–ಕುಸುಮ್‌’

ರಾಜ್ಯದಲ್ಲಿ ಮೊದಲ ಸೌರ ವಿದ್ಯುತ್ ಘಟಕಕ್ಕೆ ಚಾಲನೆ ನಾಳೆ

ಡಿ.ಎಂ.ಕುರ್ಕೆ ಪ್ರಶಾಂತ
Published 10 ಜೂನ್ 2025, 6:38 IST
Last Updated 10 ಜೂನ್ 2025, 6:38 IST
<div class="paragraphs"><p>ಗೌರಿಬಿದನೂರು ತಾಲ್ಲೂಕಿನ ಹನುಮೇನಹಳ್ಳಿ ಬಳಿ ಉದ್ಘಾಟನೆಗೆ ಸಿದ್ಧವಾಗಿರುವ ಸೋಲಾರ್ ಘಟಕ</p></div>

ಗೌರಿಬಿದನೂರು ತಾಲ್ಲೂಕಿನ ಹನುಮೇನಹಳ್ಳಿ ಬಳಿ ಉದ್ಘಾಟನೆಗೆ ಸಿದ್ಧವಾಗಿರುವ ಸೋಲಾರ್ ಘಟಕ

   

ಚಿಕ್ಕಬಳ್ಳಾಪುರ: ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಪಿಎಂ–ಕುಸುಮ್‌’ ಯೋಜನೆ ರೂಪಿಸಿದೆ. ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಹಾಗೂ ಕೃಷಿಯನ್ನು ಲಾಭದಾಯಕವಾಗಿಸುವುದು ಯೋಜನೆಯ ಗುರಿ.

ಇಂತಹ ಮಹತ್ವದ ಯೋಜನೆಗೆ ಜಿಲ್ಲೆಯಲ್ಲಿ ಬುಧವಾರ (ಜೂ.11) ಚಾಲನೆ ನೀಡಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಕಾರ್ಯಾರಂಭ ಮಾಡುತ್ತಿರುವ ಮೊದಲ ಪಿ.ಎಂ ಕುಸುಮ್–ಬಿ (‌ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾ ಅಭಿಯಾನ್) ಕಾಂಪೊನೆಂಟ್ ‘ಸಿ’ ಸೌರವಿದ್ಯುತ್ ಯೋಜನೆ ಇದಾಗಿದೆ.

ADVERTISEMENT

ತೊಂಡೇಬಾವಿ ಸಜ್ಜು: ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಪಿ.ಎಂ ಕುಸುಮ್–ಬಿ ಕಾಂಪೊನೆಂಟ್ ‘ಸಿ’ ಸೌರವಿದ್ಯುತ್ ಯೋಜನೆಯು 13.3 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸಲಿದೆ. ಈ ಮೂಲಕ ತೊಂಡೇಬಾವಿ ಹಾಗೂ ಸುತ್ತಮುತ್ತಲಿನ ಎರಡು ಸಾವಿರ ರೈತರಿಗೆ ಅನುಕೂಲವಾಗಲಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸುವ ಉದ್ದೇಶದಿಂದ ‘ಪಿಎಂ –ಕುಸುಮ್‌ (ಸಿ)’ ಯೋಜನೆ ಜಾರಿಗೊಳಿಸಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಸ್ಥಳೀಯ ಗ್ರಿಡ್‌ಗಳಿಗೆ ಪೂರೈಕೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 18 ಸ್ಥಳಗಳಲ್ಲಿ ಸೌರ ವಿದ್ಯುತ್ ಘಟಕಗಳಿಗೆ ಯೋಜಿಸಲಾಗಿದೆ. ಈ ಎಲ್ಲ ವಿದ್ಯುತ್ ಘಟಕಗಳು ಪೂರ್ಣಗೊಂಡು ಕಾರ್ಯಾರಂಭ ಮಾಡಿದರೆ 136 ಮೆಗಾ ವಾಟ್ ಸೌರವಿದ್ಯುತ್ ಉತ್ಪಾದನೆ ಆಗಲಿದೆ.

ಎರಡು ಸಾವಿರ ರೈತರಿಗೆ ಅನುಕೂಲ: ‘ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಬೆಳಿಗ್ಗೆ ನಾಲ್ಕು ಮತ್ತು ರಾತ್ರಿ ನಾಲ್ಕು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಈ ಯೋಜನೆಯಿಂದ ಬೆಳಿಗ್ಗೆಯೇ 7 ತಾಸು ವಿದ್ಯುತ್ ನೀಡಲು ಸಾಧ್ಯವಾಗುತ್ತದೆ’ ಎಂದು ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್‌ ಕುಮಾರ್ ಪಿ.ಜಿ. ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ ಜಾರಿ ಆಗುತ್ತಿರುವ ಮೊದಲ ಯೋಜನೆ ಇದಾಗಿದೆ. ರಾಜ್ಯದಾದ್ಯಂತ ಈ ಯೋಜನೆ ಜಾರಿಯಲ್ಲಿದೆ. ಕೆಲವು ಯೋಜನೆಗಳು ಪೂರ್ಣವಾಗಿದ್ದರೆ, ಕೆಲವು ಯೋಜನೆಗಳು ಪ್ರಗತಿಯಲ್ಲಿವೆ. ಮತ್ತಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ತೊಂಡೇಬಾವಿ ಹಾಗೂ ಸುತ್ತಮುತ್ತಲಿನ ಎರಡು ಸಾವಿರ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸೌರ ವಿದ್ಯುತ್ ನೀಡಲಾಗುತ್ತದೆ ಎಂದರು. 

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವಿದ್ಯುತ್ ನೀಡಿದಾಗ ಕೆಲವು ಕಡೆಗಳಲ್ಲಿ ಅವಘಡಗಳು ಸಂಭವಿಸಿದ್ದವು. ರಾತ್ರಿ ತೋಟಗಳಿಗೆ ಭೇಟಿ ನೀಡಿದಾಗ ರೈತರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿದ್ದವು. ಈ ಎಲ್ಲದಕ್ಕೂ ಈ ಯೋಜನೆ ಇತಿಶ್ರೀ ಹಾಡಲಿದೆ ಎಂದು ಹೇಳಿದರು.

ಒಂದು ಯುನಿಟ್ ವಿದ್ಯುತ್ ಉತ್ಪಾದನೆಗೆ ಸರ್ಕಾರಕ್ಕೆ ₹ 5ರಿಂದ ₹ 6 ವೆಚ್ಚವಾಗುತ್ತಿದೆ. ಆದರೆ ಸೋಲಾರ್ ವಿದ್ಯುತ್ ಉ‍ತ್ಪಾದನೆಗೆ ₹ 2.50ಯಿಂದ ₹ 3 ವೆಚ್ಚವಾಗುತ್ತದೆ. ಸರ್ಕಾರಕ್ಕೆ ವಿದ್ಯುತ್ ಉತ್ಪಾದನೆಯ ವೆಚ್ಚವೂ ತಗ್ಗುತ್ತದೆ. ಜಿಲ್ಲೆಯಲ್ಲಿ ಎಲ್ಲ ಘಟಕಗಳು ಕಾರ್ಯಾರಂಭ ಮಾಡಿದರೆ ದೊಡ್ಡ ಸಂಖ್ಯೆಯಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಯಾವ ಹಂತದಲ್ಲಿದೆ ಕುಸುಮ್: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾರಿಯಲ್ಲಿರುವ 18 ಕಾಮಗಾರಿಗಳಲ್ಲಿ 9 ಕಾಮಗಾರಿಗಳನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ಖಾಸಗಿ ಜಮೀನುಗಳಲ್ಲಿ ಯೋಜನೆ ಅನುಷ್ಠಾನವಾಗಬೇಕಾಗಿದೆ. ಇಲ್ಲಿ  ಜಮೀನಿನ ಸಮಸ್ಯೆಗಳ ಕಾರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಚಿಂತಾಮಣಿ ತಾಲ್ಲೂಕಿನ ಬೊಮ್ಮೇಪಲ್ಲಿ, ಗೌರಿಬಿದನೂರಿನ ಮಲ್ಲೇನಹಳ್ಳಿಯಲ್ಲಿ ಮಾತ್ರ ಕಾಮಗಾರಿಗಳು ಪೂರ್ಣವಾಗಿವೆ. ಉಳಿದ ಕಡೆಗಳಲ್ಲಿ ಪ್ರಗತಿಯಲ್ಲಿವೆ.

ಉದ್ಘಾಟಿಸಲಿರುವ ಸಿ.ಎಂ

ಇಂಧನ ಇಲಾಖೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಪಿ ಎಂ-ಕುಸುಮ್ ಕಾಂಪೊನೆಂಟ್-ಸಿ ಅಡಿಯಲ್ಲಿ ಸೌರೀಕರಣ ಯೋಜನೆಗೆ ಜೂ.11 ರಂದು ಬೆಳಗ್ಗೆ 10.30ಕ್ಕೆ ಚಾಲನೆ ದೊರೆಯಲಿದೆ. ಗೌರಿಬಿದನೂರಿನ ನೇತಾಜಿ ತಾಲ್ಲೂಕು ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು.  ಕೇಂದ್ರ ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರ ಆಹಾರ ಮತ್ತು ಪಡಿತರ ವಿತರಣೆ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸಚಿವ ಶ್ರೀಪಾದ್ ಯೇಸೊ ನಾಯಕ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂಧನ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ವಿವಿಧ ಇಲಾಖೆಗಳ ಸಚಿವರು ಅಧಿಕಾರಿಗಳು ಭಾಗವಹಿಸುವರು. ಶಾಸಕ ಕೆ.ಎಚ್.‍ಪುಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.