ADVERTISEMENT

ಬೆರಗು ಮೂಡಿಸಿದ ವಿಜ್ಞಾನ ಲೋಕ

ಜಿಲ್ಲಾ ಮಟ್ಟದ ಇನ್‍ಸ್ಪೈರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಅವಳಿ ಜಿಲ್ಲೆಗಳಿಂದ 262 ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 16:03 IST
Last Updated 23 ಜನವರಿ 2020, 16:03 IST
ಸ್ಪರ್ಧೆಯಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಸದ್ದುಪಲ್ಲಿಯ ವಿದ್ಯಾರ್ಥಿನಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ಮಾದರಿಯ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದಳು.
ಸ್ಪರ್ಧೆಯಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಸದ್ದುಪಲ್ಲಿಯ ವಿದ್ಯಾರ್ಥಿನಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ಮಾದರಿಯ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದಳು.   

ಚಿಕ್ಕಬಳ್ಳಾಪುರ: ನಗರದ ಸಂತ ಜೋಸೆಫ್ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಇನ್‍ಸ್ಪೈರ್ ಪ್ರಶಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು.

ಇದರಿಂದಾಗಿ ಶಾಲೆಯ ಆವರಣದಲ್ಲಿ ಪುಟಾಣಿ ವಿಜ್ಞಾನಗಳ ಲೋಕ ಅನಾವರಣಗೊಂಡಿತ್ತು. ಒಂದಕ್ಕಿಂತಲೂ ಒಂದು ವೈಶಿಷ್ಟ್ಯಪೂರ್ಣ ಮಾದರಿಗಳು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದವು. ಸ್ಪರ್ಧೆಯಲ್ಲಿ ಅವಳಿ ಜಿಲ್ಲೆಗಳಿಂದ 262 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ತೀರ್ಪುಗಾರರು ವಿವಿಧ ಮಾನದಂಡಗಳ ಅಡಿ ಶೇ10 ರಷ್ಟು ವಿದ್ಯಾರ್ಥಿಗಳ ಮಾದರಿಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಿದರು.

ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್, ಸ್ಕಿಲ್ ಇಂಡಿಯಾ ಯೋಜನೆಗಳ ಕಲ್ಪನೆ ಆಧರಿಸಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳು ವಿಸ್ಮಯ ಮೂಡಿಸಿದವು.

ADVERTISEMENT

ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ, ನೀರಿನ ಸಂರಕ್ಷಣಾ ಘಟಕ, ಪೆಟ್ರೋಲ್ ಕಳವು ತಡೆಗಟ್ಟುವಿಕೆ, ಬಿಸಿಲಿನಿಂದ ಅನಿಲ ಗ್ಯಾಸ್ ಉತ್ಪಾದನೆ, ಸೌರಶಕ್ತಿಯ ಶೇಖರಣೆ, ಕೃಷಿಯಲ್ಲಿ ತಂತ್ರಜ್ಞಾನ, ನೀರಿನಲ್ಲಿ ಬೆಳೆ ತೆಗೆಯುವಿಕೆ, ಸಮಗ್ರ ಕೃಷಿ, ಸೌರ ಬೇಲಿ, ತ್ಯಾಜ್ಯ ವಸ್ತುಗಳಿಂದ ಗೊಬ್ಬರ ತಯಾರಿಸುವಿಕೆ, ಕೃಷಿಯಲ್ಲಿ ತಂತ್ರಜ್ಞಾನ ಹೀಗೆ ಹಲವಾರು ಮಾದರಿಗಳು ವಿದ್ಯಾರ್ಥಿಗಳ ಆಂತರ್ಯದ ಪ್ರತಿಭೆಗೆ ಕೈಗನ್ನಡಿಯಂತೆ ಗೋಚರಿಸಿದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್ ಮಾತನಾಡಿ, ‘ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಪರಿಚಯ ಮಾಡುವ ಈ ಕಾರ್ಯಕ್ರಮ ಕೇವಲ ಮಕ್ಕಳ ಭವಿಷ್ಯವನ್ನಷ್ಟೇ ಅಲ್ಲದೆ, ಇಡೀ ದೇಶದ ಭವಿಷ್ಯವನ್ನೇ ಬರೆಯುವಂತಿದೆ. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಿ ಅವರ ಆವಿಷ್ಕಾರ, ಪ್ರಯೋಗಗಳಿಗೆ ಪ್ರೋತ್ಸಾಹ ನೀಡಬೇಕು. ವೈಜ್ಞಾನಿಕ ಕ್ಷೇತ್ರದತ್ತ ಮುಖ ಮಾಡುವ ನಿಟ್ಟಿನಲ್ಲಿ ಬೋಧನೆ ಮಾಡಬೇಕು’ ಎಂದು ಹೇಳಿದರು.

‘ಶಿಕ್ಷಣ ಎಂಬುದು ನಿಂತ ನೀರಲ್ಲ. ಅದು ಪ್ರತಿನಿತ್ಯ ನಮಗೆ ಒಂದಲ್ಲ ಒಂದು ವಿಷಯವನ್ನು ಕಲಿಸುತ್ತಲ್ಲೇ ಇರುತ್ತದೆ. ಸರ್‌.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್, ಎಚ್‌.ನರಸಿಂಹಯ್ಯ ಅವರಂತಹ ಮೇಧಾವಿಗಳು ಜನಿಸಿದ ಜಿಲ್ಲೆಯನ್ನು ಸ್ಪರ್ಧೆಗೆ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ಸ್ಪರ್ಧೆಯಲ್ಲಿ 500ಕ್ಕೂ ಅಧಿಕ ಮಕ್ಕಳು ಭಾಗವಹಿಸುವ ರೀತಿಯಲ್ಲಿ ಶಿಕ್ಷಕರು ಶಾಲೆಗಳಲ್ಲಿ ಆನ್‌ಲೈನ್‌ ನೋಂದಣಿ ಕಾರ್ಯಕ್ಕೆ ಒತ್ತು ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎಸ್.ರಘುನಾಥರೆಡ್ಡಿ, ವೀಕ್ಷಕ ಮನಿಷ್.ಎಚ್. ಬೊಯರ್, ನೋಡಲ್ ಅಧಿಕಾರಿ ಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.