ADVERTISEMENT

ಕಾಲುವೆ ಕಾಮಗಾರಿ ಕಳಪೆ: ತರಾಟೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:10 IST
Last Updated 17 ಅಕ್ಟೋಬರ್ 2021, 4:10 IST
ಸೋಮೇಶ್ವರ ಕೆರೆಗೆ ಎಚ್.ಎನ್.ವ್ಯಾಲಿ ಮೂಲಕ ನೀರು ಹರಿಸುವ ಸಲುವಾಗಿ ಕೈಗೊಂಡ ಕಾಲುವೆ ಕಾಮಗಾರಿಯನ್ನು ಶಾಸಕ ಸುಬ್ಬಾರೆಡ್ಡಿ ವೀಕ್ಷಿಸಿದರು
ಸೋಮೇಶ್ವರ ಕೆರೆಗೆ ಎಚ್.ಎನ್.ವ್ಯಾಲಿ ಮೂಲಕ ನೀರು ಹರಿಸುವ ಸಲುವಾಗಿ ಕೈಗೊಂಡ ಕಾಲುವೆ ಕಾಮಗಾರಿಯನ್ನು ಶಾಸಕ ಸುಬ್ಬಾರೆಡ್ಡಿ ವೀಕ್ಷಿಸಿದರು   

ಗುಡಿಬಂಡೆ: ಕೆ.ಸಿ.ವ್ಯಾಲಿ ಯೋಜನೆಯಡಿ ತಾಲ್ಲೂಕಿನ ಸೋಮೇಶ್ವರ ಕೆರೆಗೆ ನೀರು ಹರಿಸುವ ಸಂಬಂಧ ಮಾಡಲಾದ ಕಾಲುವೆ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಸರಿಪಡಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಸುಮಾರು ₹1.20 ಕೋಟಿ ವೆಚ್ಚದಲ್ಲಿ ಸೋಮೇಶ್ವರ ಕೆರೆಗೆ ಎಚ್.ಎನ್.ವ್ಯಾಲಿ ನೀರು ಹರಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ನಾನು ಈ ಕಾಲುವೆ ಕಾಮಗಾರಿ ನಡೆಯುವುದಕ್ಕೂ ಮುನ್ನವೇ ಅಧಿಕಾರಿಗಳಿಗೆ ಕಾಮಗಾರಿ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಿದ್ದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಾಲುವೆ ಕಾಮಗಾರಿ ಕಳಪೆಯಾಗಿದೆ. ಕೂಡಲೇ ಕಾಲುವೆ ಕಾಮಗಾರಿಯನ್ನು ಸರಿಪಡಿಸಿ, ನೀರು ಸರಾಗವಾಗಿ ಹರಿಯಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಸೋಮೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದೆಗಟ್ಟಿರುವ ಕಾರಣ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಭರವಸೆ ನೀಡಿದರು.

ADVERTISEMENT

ಮುಖಂಡ ಕೃಷ್ಣೇಗೌಡ ಮಾತನಾಡಿ, ಎಚ್.ಎನ್.ವ್ಯಾಲಿ ರೈತರಿಗೆ ಅನುಕೂಲವಾಗಲಿದೆ. ಆದರೆ ನೀರು ಹರಿಯಲು ಮಾಡಿರುವ ಕಾಲುವೆ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಕಳಪೆಯಾಗಿದ್ದರಿಂದ ಕಾಲುವೆ ಮೂಲಕ ನೀರು ಹರಿಸಿದಾಗ ಅಕ್ಕಪಕ್ಕದ ಜಮೀನುಗಳ ಒಳಗೆ ನುಗ್ಗುತ್ತದೆ. ಲಕ್ಷ್ಮೀಸಾಗರ ಕೆರೆ ಕಟ್ಟೆ ಕಟ್ಟುವಾಗ ಸೋಮೇಶ್ವರ ಕೆರೆಗೆ ಸೇರಬೇಕಾದ ನೀರಿನ ಪಾಲು ನೀಡುವುದಾಗಿ ಒಪ್ಪಂದವಾಗಿತ್ತು. ಅದರಂತೆ ಈಗ ಹಳೇಯ ತೂಬಿನ ಮೂಲಕ ನೀರು ಹರಿಸಲಾಗಿದೆ ಎಂದರು.

ಎಚ್.ಎನ್ ವ್ಯಾಲಿ ಯೋಜನೆಯ ಅಧಿಕಾರಿ ರವೀಂದ್ರ, ಮುಖಂಡ ಕೃಷ್ಣಪ್ಪ, ಚನ್ನರಾಯಪ್ಪ, ಅಶ್ವತ್ಥಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.