ADVERTISEMENT

ಅಕ್ರಮ ಮರಳು ಗಣಿಗಾರಿಕೆ; ಪರಿಸರಕ್ಕಾದ ಹಾನಿ ಅಗಾಧ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 9:45 IST
Last Updated 9 ಏಪ್ರಿಲ್ 2012, 9:45 IST
ಅಕ್ರಮ ಮರಳು ಗಣಿಗಾರಿಕೆ; ಪರಿಸರಕ್ಕಾದ ಹಾನಿ ಅಗಾಧ
ಅಕ್ರಮ ಮರಳು ಗಣಿಗಾರಿಕೆ; ಪರಿಸರಕ್ಕಾದ ಹಾನಿ ಅಗಾಧ   

ಚಿಕ್ಕಮಗಳೂರು: ಜಿಲ್ಲೆಯ ನದಿ, ಹಳ್ಳಗಳಲ್ಲಿ ನಡೆದಿರುವ ಅಕ್ರಮ ಮತ್ತು ಸಕ್ರಮ ಮರಳು ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಹಾನಿ ಸರಿಪಡಿಸಲು ಕನಿಷ್ಠ ನಾಲ್ಕೈದು ವರ್ಷಗಳಾದರೂ ಮರಳುಗಣಿಗಾರಿಕೆ ಸಂಪೂರ್ಣ ನಿಷೇಧಿಸಬೇಕು!

ಇದು ಯಾವುದೋ ಪರಿಸರ ಸಂಘಟನೆ ಅಥವಾ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹೇಳುತ್ತಿರುವ ಮಾತಲ್ಲ. ಈ ಮಾತನ್ನು ಮರಳು ಗಣಿಗಾರಿಕೆ ಅಧಿಕೃತವಾಗಿ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೇ ಹೇಳುತ್ತಿರುವ ಮಾತು. 

`ಪರಿಸರ ಹಾನಿಯನ್ನು ಸರ್ಕಾರೇತರ ಪರಿಸರ ಸಂಬಂಧಿ ಸಂಸ್ಥೆ ಅಥವಾ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಖುದ್ದು ಜಿಲ್ಲೆಯ ನದಿ ಪಾತ್ರಗಳಲ್ಲಿ ಪರಿಶೀಲನೆ ನಡೆಸಿದ್ದರೆ ಜಿಲ್ಲೆಯಲ್ಲಿ ಕನಿಷ್ಠ ಒಂದು ದಶಕವಾದರೂ ಮರಳುಗಣಿಗಾರಿಕೆ ನಿಷೇಧಿಸಬೇಕಾಗಬಹುದು~ ಎನ್ನುತ್ತಾರೆ ಪರಿಸರ ಮತ್ತು ವನ್ಯಜೀವಿ ಸಂಘಟನೆ ಕಾರ್ಯಕರ್ತರೊಬ್ಬರು.

ಹೈಕೋರ್ಟ್ ಆದೇಶ ನೋಡಿಕೊಂಡು ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಷೇಧಿಸುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡುವ ಆಲೋಚನೆಯಲ್ಲಿ ಲೋಕೋಪಯೋಗಿ ಇಲಾಖೆ ಇದೆ ಎಂದು ಮೂಲಗಳು ಹೇಳುತ್ತವೆ. ಇದು ಏನೇ ಇರಲಿ; ಅಕ್ರಮ ಮರಳು ಗಣಿಗಾರಿಕೆಯಿಂದ ಅಂತರ್ಜಲ ಕುಸಿಯುತ್ತಿರುವುದು; ಪರಿಸರಕ್ಕೆ ಹಾಗೂ ಜೀವ ಸಂಕುಲಕ್ಕೆ ಹಾನಿಯಾಗುತ್ತಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧ ಆಗಬೇಕು; ಮರಳು ಮಾಫಿಯಾದಲ್ಲಿರುವ ಬಲಾಢ್ಯರಿಗೆ ಶಿಕ್ಷೆಯಾಗಬೇಕು ಎನ್ನುವ ಧ್ವನಿ ಈಗ ಕೇಳಲಾರಂಭಿಸಿದೆ.

`ಜಿಲ್ಲೆಯಲ್ಲಿ ಮರಳು ಮಾಫಿಯಾ ಅತ್ಯಂತ ಬಲಾಢ್ಯವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮರಳು ಮಾಫಿಯಾಕ್ಕೆ ಮಣಿದು ಮೌನ ವಹಿಸುವಂತಾಗಿದೆ. ಮರಳು ಗಣಿಕಾರಿಕೆ ನಿಯಂತ್ರಣ ಮತ್ತು ಉಸ್ತುವಾರಿ ಸಮಿತಿಯಲ್ಲಿರುವ ಇಲಾಖೆಗಳ ಮುಖ್ಯಸ್ಥರ ಧೋರಣೆ ಎತ್ತು ಏರಿಗೆ, ಕೋಣ ನೀರಿಗೆ ಎನ್ನುವಂತಾಗಿದೆ.

ಇದೇ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಆರಂಭದಲ್ಲೇ ಮರಳು ಗಣಿಗಾರಿಕೆ ಉಸ್ತುವಾರಿ ಹೊಣೆಯಿಂದ ಮುಕ್ತಗೊಳಿಸುವಂತೆ ಸರ್ಕಾರಕ್ಕೆ ಪತ್ರ ನೀಡಿರಬಹುದು.
 
2006ರಿಂದ 2008ರವರೆಗೆ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಷೇಧ ಮಾಡಿದಂತೆಯೇ ಈಗ ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, 2011ರ ಹೊಸ ಮರಳು ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣ ತಹಬದಿಗೆ ತರಬಹುದು~ ಎನ್ನುತ್ತಾರೆ ಹೆಸರು ಬಯಸದ ಇಲಾಖೆ ಅಧಿಕಾರಿಯೊಬ್ಬರು.

`ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಸರದ ಮೇಲೆ ನಿಜವಾದ ಕಾಳಜಿ ವಹಿಸಿ, ಯಾವುದೇ ಒತ್ತಡಕ್ಕೆ ಮಣಿಯದೆ ಇರುವ ಕಾನೂನುಗಳನ್ನು ಸರಿಯಾಗಿ ಜಾರಿಗೊಳಿಸಿದರೆ ಕೇವಲ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆ~ ಎನ್ನುತ್ತಾರೆ ಯುವಶಕ್ತಿ ಮಾನವತಾ ವೇದಿಕೆ ಅಧ್ಯಕ್ಷ ಸತೀಶ್.


ಮರಳು ಫಿಲ್ಟರ್ ದಂಧೆ
ಚಿಕ್ಕಮಗಳೂರು: ಜಿಲ್ಲೆಯ ನದಿ ಮತ್ತು ನದಿಪಾತ್ರ ಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೆ, ಕೆರೆಕಟ್ಟೆ, ಅರಣ್ಯ ಭೂಮಿಯಲ್ಲಿ ಮರಳು ಫಿಲ್ಟರ್ ದಂದೆ ನಿರಾತಂಕವಾಗಿ ನಡೆಯುತ್ತಿದೆ.

ಕಳಸಾಪುರ, ಮರ್ಲೆ, ಹೊಸಕೋಟೆ ರಾಮನಹಳ್ಳಿ, ಕೆ.ಆರ್.ಪೇಟೆ ಕೆರೆಗಳಲ್ಲಿ ಮರಳು ಫಿಲ್ಟರ್ ದಂದೆ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಚಿಕ್ಕಮಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಆದಿಶಕ್ತಿನಗರ ಬಳಿಯ ಸಾಮಾಜಿಕ ಅರಣ್ಯ ಭೂಮಿಯಲ್ಲಿ ಮರಳು ಫಿಲ್ಟರ್ ದಂಧೆ ವರ್ಷಗಳಿಂದ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಕಡಿವಾಣ ಹಾಕಿಲ್ಲ ಎನ್ನುತ್ತಾರೆ ರೈತ ಮುಖಂಡರೊಬ್ಬರು.

 ಫಿಲ್ಟರ್ ಮರಳು ಹೇಗೆ?:  ಸವಳು ಮಣ್ಣನ್ನು ರಾಶಿ ಹಾಕಿ, 5 ಅಶ್ವಶಕ್ತಿ ಅಥವಾ 10 ಅಶ್ವಶಕ್ತಿ ಮೋಟರ್‌ನಿಂದ ನೀರನ್ನು ಸವಳು ಮಣ್ಣಿನ ರಾಶಿಗೆ ರಭಸವಾಗಿ ಹಾಯಿಸಲಾಗುತ್ತದೆ. ನೀರಿನ ರಭಸಕ್ಕೆ ಮಣ್ಣು ತೊಳೆದು ಮರಳಿನಂತಾಗುತ್ತದೆ.

ಇದೇ ಮರಳನ್ನು ಲೋಡು ಮಾಡಿಕೊಂಡು ತಂದು, ಹಳ್ಳದಿಂದ ತೆಗೆದ ತಾಜಾ ಮರಳು ಎಂದು ನಂಬಿಸಿ ಮಾರಿ ಹೋಗುತ್ತಾರೆ. ಇಂತಹ ಫಿಲ್ಟರ್ ಮರಳಿಂದ ಕಟ್ಟಿದ `ಕನಸಿನ ಮನೆ~ಗಳು, ಕಟ್ಟಡಗಳು, ಕಾಂಪ್ಲೆಕ್ಸ್‌ಗಳು, ಮೋರಿಗಳು, ಸೇತುವೆಗಳು, ಬಾಕ್ಸ್ ಚರಂಡಿಗಳು ಅದೆಷ್ಟು ಕಾಲ ಬಾಳಿಕೆ ಬಂದಾವು ಊಹಿಸಿಕೊಳ್ಳಿ.


ಎಚ್ಚೆತ್ತ ಜಿಲ್ಲಾಡಳಿತ: ದಂಡ ಒಂದು ಲಕ್ಷಕ್ಕೆ ಏರಿಕೆ!
ಮರಳು ಮಾಫಿಯಾ ಸರಣಿ ಲೇಖನ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮರಳು ಉಸ್ತುವಾರಿ/ ಮರಳುಗಣಿಗಾರಿಕೆ ಸಮಿತಿ ಈಗ 2011ರ ಹೊಸ ಮರಳು ನೀತಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಮೊದಲ ಹೆಜ್ಜೆ ಇಟ್ಟಿದೆ.

ಕಳೆದ ಎರಡು ದಿನಗಳಿಂದ ಅಕ್ರಮ ಮರಳು ಗಣಿಗಾಣಿಕೆ ನಡೆಯುತ್ತಿರುವ ಭಾಗಗಳಲ್ಲಿ ದಾಳಿ ನಡೆಸಿ, ಪ್ರಕರಣ ದಾಖಲಿಸಿದೆ. ಕಾಫಿ ಡೇ ಮತ್ತು ಹಿರೇಮಗಳೂರು ಬಳಿ ಚೆಕ್‌ಪೋಸ್ಟ್ ಸ್ಥಾಪಿಸಲು ಕ್ರಮ ಕೈಗೊಂಡಿದೆ. ಕೈಗಾರಿಕಾ ಪ್ರದೇಶದ ಮಾರ್ಗದ ಮೂಲಕ ನಗರ ಪ್ರವೇಶಿಸುವ ಮಾರ್ಗದಲ್ಲೂ ಮೊಬೈಲ್ ಸ್ಕ್ವಾಡ್ ಕಾರ್ಯಾಚರಿಸಲಿದೆ ಎಂದು ಜಿಲ್ಲಾಡಳಿತದ ಮೂಲಗಳು ಹೇಳಿವೆ.

ಪರ್ಮಿಟ್ ಇಲ್ಲದೆ ಮರಳು ಸಾಗಿಸುವುದು ಕಂಡುಬಂದರೆ ಒಂದು ಟ್ರ್ಯಾಕ್ಟರ್‌ಗೆ 5 ಸಾವಿರ ರೂಪಾಯಿ ಮತ್ತು ಒಂದು ಲಾರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಶನಿವಾರದಿಂದ ದಂಡ ಪ್ರಮಾಣವನ್ನು ಒಂದು ಲಕ್ಷ ರೂಪಾಯಿಗೆ ಏರಿಸಲಾಗಿದೆ.
 
ಕಾಫಿ ಡೇ ಸಮೀಪ ದಾಸ್ತಾನು ಮಾಡಿದ್ದ 75 ಲೋಡ್ ಮತ್ತು ಹಲಸುಮನೆ ಬಳಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 110 ಲೋಡು ಮರಳು ವಶಪಡಿಸಿಕೊಂಡು, ದಂಡ ವಿಧಿಸಲಾಗಿದೆ. ಈವರೆಗೆ ಒಟ್ಟು 268 ಲಾರಿ, ಟ್ರ್ಯಾಕ್ಟರ್‌ಗಳಿಗೆ ದಂಡ ಹಾಕಲಾಗಿದೆ. ಒಟ್ಟು 17 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.