ADVERTISEMENT

`ಅನ್ಯ ವ್ಯವಹಾರ- ಶಿಕ್ಷಕರ ವಿರುದ್ಧ ಕ್ರಮ'

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 10:52 IST
Last Updated 11 ಜುಲೈ 2013, 10:52 IST

ತರೀಕೆರೆ: ಶಾಲಾ ಸಮಯದಲ್ಲಿ ಮದ್ಯಪಾನ ಮಾಡಿ ಶಾಲೆಗೆ ಬರುವ ಹಾಗೂ ಶಾಲೆ ಬಿಟ್ಟು ಅನ್ಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಶಾಂತಾ ಗುರುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಇರುವ ಕಡೆ ತಕ್ಷಣದಿಂದಲೇ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಗಮನಹರಿಸುವಂತೆ ತಿಳಿಸಿದರು. ಆರನೇ ಮತ್ತು ಒಂಬತ್ತನೇ ತರಗತಿಗಳ ವಿದ್ಯಾರ್ಥಿಗಳಿಗೆ ಭಾಷಾ ಪಠ್ಯ ಪುಸ್ತಕ ಹೊರತು ಬೇರೆ ಪುಸ್ತಕಗಳು ಇನ್ನೂ ಸರ್ಕಾರದಿಂದ ಸರಬರಾಜು ಆಗಿರುವುದಿಲ್ಲ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ, ಬೀರೂರು ವಲಯ ಕ್ಷೇತ್ರಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಈ ಎರಡು ತರಗತಿಗಳ ಪಠ್ಯಗಳನ್ನು ಬದಲಾವಣೆ ಮಾಡಿ ಕೇಂದ್ರಿಯ ಶಿಕ್ಷಣ ಮಾದರಿಯಲ್ಲಿ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ಪುಸ್ತಕ ನೀಡುವ ಭರವಸೆ ಮೇಲಾಧಿಕಾರಿಗಳಿಂದ ಬಂದಿದೆ ಎಂದು ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ  ಬಿಸಿ ಊಟ ಬಡಿಸುವಾಗ ಶಿಕ್ಷಕರು ಮತ್ತು ಸಿಬ್ಬಂದಿಗಳು ಚಪ್ಪಲಿ ಧರಿಸಿ ಮತ್ತು ಬಾಯಿಯಲ್ಲಿ ಎಲೆ ಅಡಿಕೆ ಹಾಕಿಕೊಂಡು  ಮಕ್ಕಳಿಗೆ ಊಟ ನೀಡುತ್ತಿರುವುದು ಹಾಗೂ ಶುದ್ದೀಕರಿಸದ ನೀರನ್ನು ನೀಡುತ್ತಿದ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಗಮನ ಸೆಳೆದಾಗ, ಎಲ್ಲಾ ಶಾಲೆಗೂ, ಚಪ್ಪಲಿ ಧರಿಸಿ, ಬಾಯಿಗೆ ಎಲೆ ಅಡಿಕೆ ಹಾಕಿಕೊಂಡು ಊಟ ಬಡಿಸದಂತೆ  ಹಾಗೂ ಶುದ್ಧೀಕರಿಸಿದ ನೀರನ್ನೇ ನೀಡುವ ಕುರಿತು ಎಚ್ಚರಿಕೆ ಪತ್ರ ರವಾನಿಸುವಂತೆ ತಾಲ್ಲೂಕು ಪಂಚಾಯಿತಿ  ಕಾರ್ಯನಿರ್ವಾಹಣಾಧಿಕಾರಿ ದೇವರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ನೌಕರರು ತಮ್ಮ  ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಸಭೆ ನಿರ್ಣಯ ಕೈಗೊಳ್ಳಬೇಕೆಂದು  ಜಗದೀಶ್ ಹೇಳಿದರು.

ಶಾಸಕ ಜಿ.ಹೆಚ್. ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಗುಣಮಟ್ಟವನ್ನು ಕಾಪಾಡಲು ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಒದಗಿಸಲು ಮೊದಲ ಆದ್ಯತೆ ನೀಡುವಂತೆ ತಿಳಿಸಿದರು.

ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆ ಮತ್ತು ಪಡಿತರ ಚೀಟಿ ವಿತರಣೆ ಕುರಿತಂತೆ ಆಗುತ್ತಿರುವ ಗೊಂದಲದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ಸಿಬ್ಬಂದಿ ಮತ್ತು ಗಣಕ ಯಂತ್ರದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಲು ಸಭೆ ನಿರ್ಧರಿಸಿತು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮನಾಗರಾಜ್ ಮಾತನಾಡಿದರು.

ತಡವಾಗಿ ಆರಂಭಗೊಂಡ ಸಭೆ:  ಸಭೆ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿದ್ದರೂ, ಶಾಸಕರು ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಿಂದ ಸುಮಾರು 1 ಗಂಟೆ ತಡವಾಗಿ ಶಾಸಕರ ಅನುಪಸ್ಥಿತಿಯಲ್ಲಿ ಸಭೆ ಪ್ರಾರಂಭವಾಯಿತು. ಮಧ್ಯದಲ್ಲಿ ಶಾಸಕರು ಆಗಮಿಸಿ ಸಭೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.