ADVERTISEMENT

ಅಮೆರಿಕಕ್ಕಿಂತ ಭಾರತವೇ ಶ್ರೀಮಂತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:00 IST
Last Updated 15 ಅಕ್ಟೋಬರ್ 2012, 8:00 IST
ಅಮೆರಿಕಕ್ಕಿಂತ ಭಾರತವೇ ಶ್ರೀಮಂತ
ಅಮೆರಿಕಕ್ಕಿಂತ ಭಾರತವೇ ಶ್ರೀಮಂತ   

ಕಳಸ: ಪ್ರಪಂಚದಲ್ಲೇ ಅಮೆರಿಕ ಅತ್ಯಂತ ಸಿರಿವಂತ ದೇಶ ಎಂದು ತಿಳಿಯಲಾಗಿದೆ. ಭಾರತದಲ್ಲಿ ನಡೆದಿರುವ ಭ್ರಷ್ಟಾಚಾರದಿಂದಾಗಿ ಜಗತ್ತಿಗೆ ತಪ್ಪು ಸಂದೇಶ ಹೋಗಿದೆ. ಆದರೆ ವಾಸ್ತವದಲ್ಲಿ ಭಾರತ ಜಗತ್ತಿನಲ್ಲೇ ಸಿರಿವಂತ ದೇಶ ಮತ್ತು ಅಮೆರಿಕ ದಿವಾಳಿ ದೇಶವಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಅಭಿಪ್ರಾಪಟ್ಟರು.

ಪಟ್ಟಣದ ಜೆ.ಇ.ಎಂ.ಶಾಲಾ ಆವರಣಲ್ಲಿ ಭಾನುವಾರ ಸಂಜೆ ನಡೆದ ಆರ್.ಎಸ್.ಎಸ್. ಜಿಲ್ಲಾ ಮಟ್ಟದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.  ಭಾರತದಲ್ಲಿ 3 ಲಕ್ಷ ಟನ್ ಚಿನ್ನ ಇದೆ. ಕಳೆದ ವರ್ಷ ಭಾರತ 2500 ಟನ್ ಚಿನ್ನ ಖರೀದಿಸಿದೆ. ಭಾರತದಲ್ಲಿ ಕೋಟಿಗಟ್ಟಲೆ ಉಳಿತಾಯದ ಹಣ ಇದ್ದರೆ ಅಮೆರಿಕದಲ್ಲಿ ಕೋಟಿಗಟ್ಟಲೆ ಕ್ರೆಡಿಟ್ ಕಾರ್ಡುಗಳು ಇವೆ. ಭಾರತದ ಸಮಸ್ಯೆ ಎಂದರೆ ಕೆಲವೇ ವ್ಯಕ್ತಿಗಳ ಬಳಿ ದೇಶದ ಬಹುಪಾಲು ಸಂಪತ್ತು ಇರುವುದು ಎಂದು ಅವರು ವಿಶ್ಲೇಷಿಸಿದರು.

ಭಾರತದ ಆಯುರ್ವೇದ ವೈದ್ಯ ಪದ್ಧತಿಯೊಂದೇ ರೋಗ ತಡೆಯುವ ಗುಣ ಹೊಂದಿದೆ. ಇಲ್ಲಿನ ಜೀವವೈವಿಧ್ಯ, ಜ್ಞಾನ -ವಿಜ್ಞಾನ ಜಗತ್ತಿಗೇ ಬೆರುಗು ಮೂಡಿಸಿದೆ. ಸ್ವದೇಶಿ ಮಂತ್ರವೇ ಭಾರತೀಯರ ಎಲ್ಲ ಸಮಸ್ಯೆಗೆ ಪರಿಹಾರ. ಭಾರತೀಯ ಕುಟುಂಬ ವ್ಯವಸ್ಥೆಯು  ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದೂ ಅವರು ಹೇಳಿದರು.

ಅಧ್ಯಕ್ಷತೆ  ವಹಿಸಿದ್ದ ಹೊರನಾಡಿನ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಆರ್‌ಎಸ್‌ಎಸ್ ದೇಶಭಕ್ತ ಯುವ ಪಡೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಸ್ವಯಂಸೇವಕರು ತಾವು ಶಿಬಿರದಲ್ಲಿ ಕಲಿತ ಅನೇಕ ಬಗೆಯ ತಾಲೀಮು ಮತ್ತು ಕ್ರೆಡೆಗಳ ಪ್ರದರ್ಶನ ನೀಡಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಪಥಸಂಚಲನ ಜನರ ಗಮನ ಸೆಳೆದಿತ್ತು. ಹೆಡಗೆವಾರ್ ಮತ್ತು ಗುರೂಜಿಯವರ ಭಾವಚಿತ್ರಗಳಿದ್ದ ತೆರೆದ ವಾಹನಕ್ಕೆ ಜನರು ಹೂಗಳನ್ನು ಎರಚಿ ಗೌರವ ತೋರಿದರು. ಮನೆಗಳ ಎದುರು ರಂಗೋಲಿ ಹಾಕಿ ಮೆರವಣಿಗೆಗೆ ಸ್ವಾಗತ ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT