ADVERTISEMENT

`ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 7:53 IST
Last Updated 4 ಸೆಪ್ಟೆಂಬರ್ 2013, 7:53 IST

ಅಜ್ಜಂಪುರ: ಗ್ರಾಮೀಣ ಪ್ರದೇಶದ ಜನರೂ ಸೇರಿದಂತೆ ಬಹುತೇಕ ಜನರು, ಆಂಗ್ಲ ಮಾಧ್ಯಮ ಮತ್ತು ಪಾಶ್ಚಾತ್ಯ ಶಿಕ್ಷಣದ ಬಗೆಗೆ ಹೊಂದಿರುವ ಅತಿಯಾದ ವ್ಯಾಮೋಹ, ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಹಣ್ಣೆ ಶಾಖಾ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಅಂಬೇಡ್ಕರ್ ಬಡಾವಣೆಯ ಶಿಕ್ಷಕ ಅಶೋಕ್ ಮನೆಯಲ್ಲಿ ಸೋಮವಾರ ಸಂಜೆ ನಡೆದ `ಮನೆಯಂಗಳದಿ ಶ್ರಾವಣ ಸಂಜೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೋಬಳಿ ಕಸಾಪ ಘಟಕದ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಸ್ಥಳೀಯ ಕಸಾಪ ಹೋಬಳಿ ಘಟಕ, ಕನ್ನಡ ಕಟ್ಟುವ ಕೆಲಸದ ಜತೆಜತೆಯಲ್ಲಿ ಉಚಿತ ಆರೋಗ್ಯ ಶಿಬಿರ, ನಾಟಕೋತ್ಸವ, ಮಕ್ಕಳ ಬೇಸಿಗೆ ಶಿಬಿರ, ಹಾಸ್ಯ ಸಂಜೆಯಂತಹ ಕಾರ್ಯಕ್ರಮಗಳ ಆಯೋಜಿಸುವಲ್ಲಿ ಸಹಕರಿಸುವ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಎಂದರು.

ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಲೀಲಾವತಿ, ಕನ್ನಡದ ಬಗೆಗೆ ಕನ್ನಡಿಗರು ಹೊಂದಿರುವ ಕೀಳಿರಿಮೆ ಕಳೆಯಬೇಕು. ಈ ನಿಟ್ಟಿನಲ್ಲಿ ಕನ್ನಡದ ಪಂಪ, ಪೊನ್ನ, ರನ್ನ, ಜನ್ನರಂತಹ ಕವಿಗಳೂ ಸೇರಿದಂತೆ ಹಲವರ ಸಾಹಿತ್ಯದ ಮಹತ್ವ ತಿಳಿದು, ಪ್ರಚಾರ, ಪ್ರಸಾರ ಮಾಡಬೇಕು. ಆ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಕಟ್ಟಿಬೆಳೆಸಬೇಕು. ಇಂತಹ ಕೆಲಸದಲ್ಲಿ ಎಲ್ಲ ಕನ್ನಡಿಗರು ಹೆಚ್ಚಿನ ಉದಾರತೆ, ಬದ್ದತೆ, ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ, ಕಸಾಪ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ರಂಗ ಕಲಾವಿದ, ನಿರ್ದೇಶಕ ಕೃಷ್ಣಮೂರ್ತಿ, ಶಂಕರಪ್ಪ, ಕಾಂತರಾಜ್, ಕೃಷ್ಣಮೂರ್ತಿ, ಶಾರದಮ್ಮ, ಗೀತಾ, ನಾಗರತ್ನ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.