ADVERTISEMENT

ಇನಾಂ, ಒತ್ತುವರಿ ತೆರವು ಖಂಡಿಸಿ 16ಕ್ಕೆ ಕಾಂಗ್ರೆಸ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:48 IST
Last Updated 6 ಡಿಸೆಂಬರ್ 2012, 6:48 IST

ಕಳಸ: ಹೋಬಳಿಯ ಕೃಷಿಕರನ್ನು ಬಾಧಿಸುತ್ತಿರುವ ಇನಾಂ ಭೂಮಿ ಸಮಸ್ಯೆ ಮತ್ತು ಒತ್ತುವರಿ ಖುಲ್ಲಾ ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕಾಂಗ್ರೆಸ್ ಪಕ್ಷವು ಇದೇ 16ರಂದು ಕಳಸದಲ್ಲಿ ಸಮಾವೇಶ ನಡೆಸಲಿದೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಈ ಬಗ್ಗೆ ಮಂಗಳವಾರ ನಡೆದ ಸಭೆಯ ನಂತರ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಬಿ.ಎನ್.ಚಂದ್ರಪ್ಪ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು.

ಇನಾಂ ಸಮಸ್ಯೆಯ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳದಿರುವುದರಿಂದ ಜನರಲ್ಲಿ ಅಸ್ಥಿರತೆ ಮತ್ತು ಆತಂಕ ಮೂಡಿದೆ. ಸಂಸದ ಜಯಪ್ರಕಾಶ್  ಹೆಗ್ಡೆ ಆಸಕ್ತಿಯ ಫಲವಾಗಿ ಕಾಂಗ್ರೆಸ್ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ನೆರವಾಗಿದೆ. ಪಕ್ಷದ ಮುಖಂಡರಾದ ಆಸ್ಕರ್ ಫರ್ನಾಂಡಿಸ್ ಮತ್ತು ಕೇಂದ್ರ ಸಚಿವ ಮುನಿಯಪ್ಪ ಕೂಡ ಕೇಂದ್ರದಲ್ಲಿ ಈ ಬಗ್ಗೆ ಸಕಾರಾತ್ಮಕ ಕೆಲಸ ಮಾಡುವ ಭರವಸೆ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರವೇ ಕೇಂದ್ರಕ್ಕೆ ಈವರೆಗೆ ಅಗತ್ಯ ಮಾಹಿತಿ ನೀಡಿಲ್ಲ ಎಂದು ಚಂದ್ರಪ್ಪ ವಿವರಿಸಿದರು.

  ಬಾಲಸಬ್ರಮಣ್ಯಂ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿರುವುದರಿಂದ ಒತ್ತುವರಿ ಮಾಡಿದ ಅತಿ ಸಣ್ಣ ಕೃಷಿಕರಿಗೂ ಜೈಲು ವಾಸದಂತಹ ಶಿಕ್ಷೆ ಕಾದಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಲು ಪಕ್ಷ ಕೇಂದ್ರದಲ್ಲಿ ಪ್ರಯತ್ನಿಸುತ್ತಿದೆ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆದ ಚಂದ್ರಪ್ಪ ಹೇಳಿದರು.

ಹೋಬಳಿ ಮಟ್ಟದಲ್ಲಿ ನಡೆಯುತ್ತಿದ್ದ  ಅಕ್ರಮ ಸಕ್ರಮ ಸಮಿತಿ ಸಭೆಯನ್ನು ನಡೆಸದೆ ನಕಲಿ ಸಾಗುವಳಿ ಚೀಟಿ ಜಾಲಕ್ಕೆ ರಾಜ್ಯ ಸರ್ಕಾರ ಕಾರಣವಾಗಿದೆ ಎಂದು ಕೆ.ಸಿ. ಧರಣೇಂದ್ರ ದೂರಿದರು. ಸಣ್ಣ ಹಿಡುವಳಿದಾರರಿಗೆ ಯಾವುದೇ ಆಪತ್ತು ಒದಗದಂತೆ ಕಾಯುವುದು ಕಾಂಗ್ರೆಸ್ ಕೆಲಸ ಎಂದು ಮಹಾಬಲೇಶ್ವರ ಶಾಸ್ತ್ರಿ ಹೇಳಿದರು. ಮುಖಂಡರಾದ ಪ್ರಭಾಕರ್, ವರ್ಧಮಾನಯ್ಯ, ಗಣೇಶ್,ಮನೋಜ್, ಸೋಮು, ಕುಮಾರ್, ರಾಮಚಂದ್ರಯ್ಯ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.