ADVERTISEMENT

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮುಚ್ಚುವಿಕೆಗೆ ಎಬಿವಿಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 6:38 IST
Last Updated 15 ಅಕ್ಟೋಬರ್ 2017, 6:38 IST

ಮೂಡಿಗೆರೆ: ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರವು ಮುಚ್ಚಲು ಮುಂದಾಗಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವಿರೋಧಿಸುತ್ತದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸಂದೇಶ್‌ ತಿಳಿಸಿದರು.

ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಲು ಮುಂದಾಗಿರುವುದನ್ನು ಹಾಗೂ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪಟ್ಟಣದಲ್ಲಿ ಶನಿವಾರ ಪೊಲೀಸ್‌ ಇಲಾಖೆ ಹಾಗೂ ತಹಶೀಲ್ದಾರರಿಗೆ ಮನವಿ ಪತ್ರ ನೀಡಿ ಅವರು ಮಾತನಾಡಿದರು.

ಲಕ್ಷಾಂತರ ಮಂದಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಇದೀಗ ಮುಚ್ಚುವ ಸ್ಥಿತಿಗೆ ತಲುಪಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸರ್ಕಾರವು ಒಂದು ವೇಳೆ ವಿಶ್ವವಿದ್ಯಾಲಯವನ್ನು ಮುಚ್ಚಿದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪುವುದಲ್ಲದೇ, ವಿದ್ಯಾರ್ಥಿಗಳ ಕಲಿಕೆಗೆ ಅವಕಾಶವಿಲ್ಲದಂತಾಗುತ್ತದೆ. ಕೂಡಲೇ ರಾಜ್ಯ ಸರ್ಕಾರವು ತನ್ನ ನಿಲುವನ್ನು ಬದಲಾಯಿಸಿ, ವಿವಿಯಲ್ಲಿ ಸೂಕ್ತ ಆಡಳಿತಕ್ಕೆ ವ್ಯವಸ್ಥೆಗೊಳಿಸಿ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಈ ವಿಚಾರವಾಗಿ ಶುಕ್ರವಾರ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ಬಂದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಎತ್ತಿದ್ದು, ಇದರ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ. ಯಾವುದೇ ಸರ್ಕಾರವಾದರೂ ವಿದ್ಯಾರ್ಥಿ ಶಕ್ತಿಯ ಮೇಲೆ ಹಲ್ಲೆ ನಡೆಸುವುದನ್ನು ಎಬಿವಿಪಿ ಖಂಡಿಸುತ್ತದೆ. ಇಂತಹ ಘಟನೆಗಳು ಮರು ಕಳುಹಿಸಿದರೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಎಬಿವಿಪಿ ತಾಲ್ಲೂಕು ಸಂಚಾಲಕ ಅಭಿಜಿತ್‌ ಗುತ್ತಿ ಪದಾಧಿಕಾರಿಗಳಾದ ದರ್ಶನ್‌ ತೊಳಲು, ಸಚ್ಚಿನ್‌, ವೈಭವ್‌, ಪ್ರೀತಮ್‌, ಅಭಿಜಿತ್‌, ಅನಿಲ್‌ಕುಮಾರ್‌, ಸಾಧನ್‌, ಯಶ್ವಂತ್, ಸುರೇಶ್‌, ಶಾಶ್ವತ್‌, ಜೀವನ್‌, ಸುನೀಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.