ADVERTISEMENT

ಕಲ್ಲತ್ತಿಗಿರಿ ನಿಸರ್ಗ ಸೊಬಗಿನ ಸಿರಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 6:10 IST
Last Updated 12 ಆಗಸ್ಟ್ 2012, 6:10 IST

ತರೀಕೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೆಮ್ಮಣ್ಣುಗುಂಡಿಗೆ ಹೋಗುವ ಮಾರ್ಗದ ಮಧ್ಯದಲ್ಲಿ ಸಿಗುವ ಐತಿಹಾಸಿಕ ಪುಣ್ಯಕ್ಷೇತ್ರ `ಕಲ್ಲತ್ತಿಗಿರಿ~ ಜಲಪಾತ ತನ್ನ ನೈಸರ್ಗಿಕ ವೈಭವದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆದರೆ, ಅಲ್ಲಿ ನೆಲೆಸಿರುವ ವೀರಭದ್ರೇಶ್ವರ ಸ್ವಾಮಿ ಮತ್ತು ಕಟ್ಟಿನ ಚೌಡಮ್ಮ ದೈವಗಳು ಧಾರ್ಮಿಕ ತಳಹದಿಯ ಮೇಲೆ ಜಿಲ್ಲೆಯ ಬಯಲುನಾಡಿನ ಎಲ್ಲ ಸಮುದಾಯದ  ಭಕ್ತರನ್ನು ತನ್ನತ್ತ ಬರಮಾಡಿಕೊಳ್ಳುತ್ತಿದೆ.

ಕಲ್ಲತ್ತಿಜಲಪಾತಕ್ಕೆ ಕಲ್ಲತ್ತಿಗಿರಿ, ಚಂದ್ರದ್ರೋಣ ಪರ್ವತ, ಜಲಮೇಗಲಗಿರಿ ಮತ್ತು ಜಲಮೇಗಳಗಿರಿ ಎಂದೂ ಕರೆಯಲಾಗುತ್ತದೆ.

ಇದಕ್ಕೆ ಇತಿಹಾಸದ ಪುರಾವೆಗಳು ಇವೆ. ಅವೆಂದರೆ `ರಾಮಾಯಣ~ ಕಥಾನಕದಲ್ಲಿ ಬರುವ ಒಂದು ಪ್ರಸಂಗದಲ್ಲಿ ಶ್ರೀರಾಮನ ಸಹೋದರ ಲಕ್ಷ್ಮಣನಿಗೆ ಜೀವ ಉಳಿಸಲು ಸಂಜೀವಿನಿಯ ಅಗತ್ಯವನ್ನು ತಿಳಿಸಿದಾಗ ಶ್ರೀರಾಮನು ತನ್ನ ಪರಮಭಕ್ತ ಆಂಜನೇಯನಿಗೆ ಚಂದ್ರದ್ರೋಣ ಪರ್ವತದಲ್ಲಿರುವ ಸಂಜೀವಿನಿಯನ್ನು ತರುವಂತೆ ಆದೇಶಿಸುತ್ತಾನೆ.  ಶ್ರೀರಾಮನ ಕೋರಿಕೆಯನ್ನು ಪೂರೈಸಲು ಚಂದ್ರದ್ರೋಣ ಪರ್ವತಕ್ಕೆ ಬಂದ ಆಂಜನೇಯನಿಗೆ ಯಾವುದು ಸಂಜೀವಿನಿ ಎಂದು ತಿಳಿಯದಿದ್ದಾಗ ಒಟ್ಟು ಪರ್ವತವನ್ನೆ ಅಂಗೈಲಿ ಎತ್ತಿ ಹಿಡಿದು ತಂದು ಸಂಜೀವಿನಿಯಿಂದ ಲಕ್ಷ್ಮಣನನ್ನು  ಬದುಕಿಸಿದ್ದು, ನಂತರದಲ್ಲಿ ಚಂದ್ರದ್ರೋಣ ಪರ್ವತವನ್ನು ತಂದಲ್ಲಿಗೆ ಇಡುವಂತೆ ಶ್ರೀರಾಮನ ಸೂಚನೆಯ ಮೇರೆಗೆ ಬಂದ ಆಂಜನೇಯ ಪರ್ವತವನ್ನು ಬುಡಮೇಲು ಮಾಡಿ ಇರಿಸಿದ್ದರಿಂದ ಈ ಪ್ರದೇಶಕ್ಕೆ `ಜಲಮೇಗಲಗಿರಿ~ ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.

ಈ ಬೆಟ್ಟದ ತುತ್ತುತುದಿಯಿಂದ ಜಲಪಾತದ ನೀರು ದುಮ್ಮಿಕ್ಕುವುದನ್ನು ನಾವು ಕಾಣಬಹುದಾಗಿದ್ದು, ಬೆಟ್ಟದ ತುದಿಯಲ್ಲಿ ಆಂಜನೇಯ `ವಾಯು~ ಪುತ್ರನಾಗಿರುವ ಕಾರಣ ಅಲ್ಲಿರುವ ಕೆರೆಗೆ `ಗಾಳಿಕೆರೆ~ ಎಂದು ಕರೆಯಲಾಗುತ್ತಿದೆ.

ಜಿಲ್ಲೆಯ ಬಯಲು ನಾಡಿನ ಆಸ್ತಿಕರು ವರ್ಷಕ್ಕೊಮ್ಮೆ ತಾವು ಪೂಜಿಸುವ ದೇವರ ಉತ್ಸವ ಮೂರ್ತಿಗಳನ್ನು ಇಲ್ಲಿಗೆ ತಂದು ಜಲಕನ್ನಿಕೆಯರು ನೆಲಸಿದ್ದಾರೆಂದು ಹೇಳುವ ವೀರಭದ್ರೇಶ್ವರ ಸ್ವಾಮಿ ದೇವರ ಮುಂಭಾಗದಲ್ಲಿನ ಕೊಳದಲ್ಲಿ ಜಳಕ ಮಾಡಿಸಿ, ಪೂಜಿಸಿ ಕರೆದ್ಯೊಯ್ಯುತ್ತಾರೆ.

ಹೆಣ್ಣು ದೈವವಾದ ಕಟ್ಟಿನ ಚೌಡಮ್ಮ ದೇವಿಯು ಇಷ್ಟಾರ್ಥ ಪೂರೈಸುವಲ್ಲಿ ಸಿದ್ಧಹಸ್ತಳಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಹರಕೆ ಮಾಡಿಕೊಂಡ ಭಕ್ತರು ಇಲ್ಲಿಗೆ ಆಗಮಿಸಿ `ಬಲಿ~ ಅರ್ಪಿಸಿ ಹರಕೆ ತೀರಿಸುವುದು ಸಂಪ್ರದಾಯ.
ಬೆಟ್ಟದ ತಪ್ಪಲಲ್ಲಿ ನೆಲೆಸಿರುವ ವೀರಭದ್ರೇಶ್ವರ ಸ್ವಾಮಿಯ ಬಳಿ ಇಷ್ಟಾರ್ಥ ನೆರವೇರಿಸಿಕೊಳ್ಳಲು ಬರುವವರು ಮತ್ತು ಕಟ್ಟಿನಚೌಡಮ್ಮ ದೇವಿಯ ಬಳಿ ಹರಕೆ ತೀರಿಸಲು ಬರುವ ನೂರಾರು ಸಂಖ್ಯೆಯ ಭಕ್ತರಿಗೆ ಉಳಿದುಕೊಳ್ಳಲು ದೊಡ್ಡ ಸಮುದಾಯಭವನ ಮತ್ತು ಬೆರಳೆಣಿಕೆಯ ಕೊಠಡಿಗಳ ಸೌಕರ್ಯ ಹಾಗೂ ಊಟ, ತಿಂಡಿ ವ್ಯವಸ್ಥೆ  ಲಭ್ಯವಿದೆ. 

ತರೀಕೆರೆಯಿಂದ ಮತ್ತು ಬೀರೂರಿನಿಂದ ಲಿಂಗದಹಳ್ಳಿ ಮೂಲಕ ಕಲ್ಲತ್ತಿಗಿರಿ ತಲುಪಲು ನಿಗದಿತ ಸಮಯದಲ್ಲಿ ಬಸ್ ವ್ಯವಸ್ಥೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.