ADVERTISEMENT

`ಕೃಷ್ಣನಂತೆ ಕನಕದಾಸರಿಗೂ ನ್ಯಾಯ ನೀಡಿ'

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:33 IST
Last Updated 3 ಡಿಸೆಂಬರ್ 2012, 8:33 IST

ಕಡೂರು: ಉಡುಪಿಯ ಶ್ರೀಕೃಷ್ಣನಿಗೆ ಇರುವಷ್ಟೇ ಗೌರವ ದಾಸ ಶ್ರೇಷ್ಠ ಕನಕದಾಸರಿಗೂ ನೀಡಬೇಕು. ಹಾಗೆಯೇ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ  ಸೇರಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ ದತ್ತ ಆಗ್ರಹಿಸಿದರು.

ಕಡೂರು ತಾಲ್ಲೂಕು ಕುರುಬ ಸಮಾಜವು ಪಟ್ಟಣದಲ್ಲಿ ಶನಿವಾರ ಸಂಗೊಳ್ಳಿರಾಯಣ್ಣ ವೇದಿಕೆಯಲ್ಲಿ  ಏರ್ಪಡಿಸಿದ್ದ ಕನಕದಾಸರ 524 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರ ಅನಾವರಣ ಮಾಡಿ  ಅವರು ಮಾತನಾಡಿದರು.

ಉಡುಪಿಯ ಶ್ರೀಕೃಷ್ಣನೇ ತಿರುಗಿ ಭಕ್ತ ಕನಕದಾಸರಿಗೆ ದರ್ಶನ ನೀಡಿ ಸಾಮಾಜಿಕ ನ್ಯಾಯ ನೀಡಿದ ಕೃಷ್ಣಕ್ಷೇತ್ರವನ್ನು, ಶ್ರೀಕೃಷ್ಣ-ಕನಕದಾಸರ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸಿ ಯಾತ್ರಾಸ್ಥಳವೆಂದು ಘೋಷಿಸಬೇಕು ಆಗ ಮಾತ್ರ ಕನಕದಾಸರಿಗೆ ನ್ಯಾಯ ದೊರಕುತ್ತದೆ ಎಂದರು.

ಸಮಾಜದಲ್ಲಿ ಸಮಾನತೆ ಮೂಡಬೇಕೆಂದರೆ ಕನಕದಾಸರಿಗೂ ಮಠವು ಬೆಲೆ ನೀಡಿ ಸಾಮಾಜಿಕ ನ್ಯಾಯ ನೀಡಲಿ ಎಂದು ಅವರು ಒತ್ತಾಯ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಡಾ.ವೈ.ಸಿ.ವಿಶ್ವನಾಥ್ ಆದರ್ಶ, ಆಧ್ಯಾತ್ಮಿಕ, ಪುರುಷರು ಯಾವುದೇ ಸಮಾಜಕ್ಕೆ ಸೀಮಿತವಾಗಬಾರದು. ಎಲ್ಲಾ ಸಮಾಜದವರಿಗೂ ದಾರ್ಶನಿಕರು ಮಾರ್ಗದರ್ಶನ ನೀಡಿದ್ದಾರೆ. ಸಮಾಜಗಳ ಉದ್ದಾರಕ್ಕೆ ಶ್ರಮಿಸಿದ್ದಾರೆ, ಸರ್ವ ಜನಾಂಗದವರು ಸೇರಿ ಜಯಂತಿಗಳನ್ನು ಆಚರಿಸಿದರೆ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದರು. 

ಕನಕದಾಸರ ವ್ಯಕ್ತಿತ್ವ, ಬಾಲ್ಯವನ್ನು ಕುರಿತು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಕೆ.ಎಂ.ಕೆಂಪರಾಜು, ಲೇಖಕ ಕುಂಸಿ ಉಮೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಜಿ.ಪಂ.ಉಪಾಧ್ಯಕ್ಷೆ ಮಾಲಿನಿ ಬಾಯಿ, ಕನಕ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ.ಜಿ.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿ ಕನಕದಾಸರ ಗುಣಗಾನ ಮಾಡಿದರು.

ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಹೂವಿನ ಗೋವಿಂದಪ್ಪ, ಕೆ.ಎಚ್.ಶಂಕರ್, ಯರದಕೆರೆ ರಾಜಪ್ಪ, ಪುರಸಭೆ ಅಧ್ಯಕ್ಷೆ ಭಾರತಿ ಮಹಾಲಿಂಗ, ಜಿ.ಪಂ.ಸದಸ್ಯೆ ಕವಿತಾ ಬೆಳ್ಳಿಪ್ರಕಾಶ್, ಪದ್ಮಾಚಂದ್ರಪ್ಪ, ಕೆ.ಎಚ್.ಎ.ಪ್ರಸನ್ನ, ಗುರುಸಿದ್ದಪ್ಪ, ಎಪಿಎಂಸಿ ಅಧ್ಯಕ್ಷ ಚಿಕ್ಕದೇವನೂರು ರವಿ, ಸವಿತಾ ಸತ್ಯನಾರಾಯಣ, ಎಸ್.ರೇವಣ್ಣ, ಕೆ.ಎಸ್.ಬಸಪ್ಪ ಮತ್ತಿತತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT