ADVERTISEMENT

ಕೇಳದಾಗಿದೆ ಪ್ರಯಾಣಿಕರ ಗೋಳು!

ಚಾರ್ಮಾಡಿ ಘಾಟಿ: ಮತ್ತೆ ಎರಡು ಗಂಟೆ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 29 ಮೇ 2018, 11:37 IST
Last Updated 29 ಮೇ 2018, 11:37 IST

ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಚಾರ್ಮಾಡಿ ಘಾಟಿಯಲ್ಲಿ ಸೋಮವಾರ ಮಧ್ಯಾಹ್ನ ವಾಹನ ಸಂಚಾರ ಸ್ಥಗಿತವಾಗಿ ಎರಡು ಗಂಟೆಗೂ ಅಧಿಕ ಕಾಲ ವಾಹನ ಸವಾರರು ಪರದಾಡಿದರು.

ನಾಲ್ಕು ದಿನಗಳಿಂದ ಹೆದ್ದಾರಿಯ ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ವಾಹನ ಸಂಚಾರ ಸ್ಥಗಿತವಾಗುತ್ತಿದ್ದು, ವಾಹನ ಸವಾರರು, ತುರ್ತು ಚಿಕಿತ್ಸಾ ವಾಹನಗಳಲ್ಲಿ ಕರಾವಳಿಗೆ ತೆರಳುವ ರೋಗಿಗಳು ಪರದಾಡುವಂತಾಗಿದೆ.

ತಾಲ್ಲೂಕಿನಲ್ಲಿ ವಾರದಿಂದ ಬಿಟ್ಟು ಬಿಟ್ಟು ಧಾರಾಕಾರ ಮಳೆ ಸುರಿಯುತ್ತಿದ್ದು, ಘಾಟಿಯ ಬೆಳ್ತಂಗಡಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ರಸ್ತೆ ಬದಿಯಲ್ಲಿದ್ದ ಸಣ್ಣ ಪುಟ್ಟ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆಯ ಒಂದೇ ಬದಿಯಲ್ಲಿ ವಾಹನ ಸಾಗುತ್ತಿರುವುದರಿಂದ ಗಂಟೆಗಟ್ಟಲೇ ಸಂಚಾರ ಸ್ಥಗಿತವಾಗುತ್ತಿದೆ. ಅಲ್ಲದೆ, ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಅಣ್ಣಪ್ಪಸ್ವಾಮಿ ದೇವಾಲಯದ ಬಳಿ ಹೆದ್ದಾರಿ ಕಿರಿದಾಗಿದ್ದು, ಏಕಕಾಲದಲ್ಲಿ ಒಂದು ವಾಹನ ಮಾತ್ರ ತೆರಳಲು ಅವಕಾ
ಶವಿರುವುದರಿಂದ, ರಸ್ತೆಯ ಎರಡೂ ಬದಿಯಲ್ಲಿ ಗಂಟೆಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.

ADVERTISEMENT

ಹಗಲುರಾತ್ರಿಯೆನ್ನದೇ ಹತ್ತು ಚಕ್ರದ ಲಾರಿಗಳು, ಹುಲ್ಲಿನ ಲಾರಿಗಳು ಸಾಗುತ್ತಿದ್ದು, ಘಾಟಿಯ ತಿರುವಿನಲ್ಲಿ ಲಾರಿಗಳು ತಿರುಗಲಾಗದೇ ನಡು ರಸ್ತೆಯಲ್ಲಿ ನಿಂತು ಸಂಚಾರ ವ್ಯತ್ಯಯಕ್ಕೆ ಕಾರಣವಾಗುತ್ತಿವೆ. ಒಮ್ಮೆ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾದರೆ ಕನಿಷ್ಟ 2 ಗಂಟೆಯಾದರೂ ಸಹಜ ಸ್ಥಿತಿಗೆ ಮರಳಲಾಗುವುದಿಲ್ಲ. ಅದರಲ್ಲೂ ವಾರಾಂತ್ಯದಲ್ಲಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಳವಾಗಿದ್ದು, ಸಂಚಾರ ಸ್ಥಗಿತವಾದರೆ ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಈ ಸಾಲುಗಟ್ಟಿ ನಿಂತ ವಾಹನದ ನಡುವೆ ಪೊಲೀಸರು ಸ್ಥಳಕ್ಕೆ ಬರಲಾಗದೇ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.

ಘಾಟಿಯಲ್ಲಿ ಸಿಲುಕಿಕೊಂಡ ವಾಹನ ಸವಾರರ ಪರಿಸ್ಥಿತಿ ಹೇಳಲಾಗದು. ನಿಗದಿತ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಲಾಗದೇ ಪರದಾಡುವುದಲ್ಲದೇ, ಘಾಟಿಯಲ್ಲಿ ಸಿಲುಕಿದ ವಾಹನಗಳಲ್ಲಿರುವ ಹೆಣ್ಣುಮಕ್ಕಳು, ಮಹಿಳೆಯರು, ವೃದ್ಧರಿಗೆ ಪರಿಸರ ಕರೆ ಬಂದರೆ ಪರಿಸ್ಥಿತಿ ವರ್ಣಿಸಲಸಾಧ್ಯ. ಇನ್ನು ಊಟದ ಸಮಯದಲ್ಲಿ ವಾಹನ ಸಂಚಾರ ಸ್ಥಗಿತವಾದರೆ ಮಕ್ಕಳ ಆಕ್ರಂದನ ಮುಗಿಲು ಮುಟ್ಟುತ್ತದೆ.

ಪದೇ ಪದೇ ಹೆದ್ದಾರಿ ಸಂಚಾರ ಸ್ಥಗಿತವಾಗುತ್ತಿರುವುದರಿಂದ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದು, ಕೂಡಲೇ ಹೆದ್ದಾರಿ ಪ್ರಾಧಿಕಾರವು ಶಿರಾಡಿ ಘಾಟಿ ಕಾಮಗಾರಿಯನ್ನು ಚುರುಕುಗೊಳಿಸಿ, ಚಾರ್ಮಾಡಿ ಘಾಟಿಯಲ್ಲಾಗು
ತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಅಲ್ಲಿಯವರೆಗೂ ಅಣ್ಣಪ್ಪ ಸ್ವಾಮಿ ದೇವಾಲಯ, ಜೇನುಕಲ್ಲುಬೆಟ್ಟ, 11 ಹಾಗೂ 12ನೇ ಹಿಮ್ಮೂರಿ ತಿರುವುಗಳಲ್ಲಿ ಸಿಬ್ಬಂದಿಯನ್ನು ನೇಮಿಸಿ ಸಂಚಾರ ವ್ಯತ್ಯಯ ತಪ್ಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.