ADVERTISEMENT

ಕೊಪ್ಪ ಸಾರ್ವಜನಿಕ ಆಸ್ಪತ್ರೆ -ಸೌಲಭ್ಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2011, 10:40 IST
Last Updated 29 ಜೂನ್ 2011, 10:40 IST
ಕೊಪ್ಪ ಸಾರ್ವಜನಿಕ ಆಸ್ಪತ್ರೆ -ಸೌಲಭ್ಯ ಮರೀಚಿಕೆ
ಕೊಪ್ಪ ಸಾರ್ವಜನಿಕ ಆಸ್ಪತ್ರೆ -ಸೌಲಭ್ಯ ಮರೀಚಿಕೆ   

ಕೊಪ್ಪ: ಊರ ನಿರ್ಮಾತೃ ಲೋಕಸೇವಾ ನಿರತ ಎಂ.ಎಸ್. ದ್ಯಾವೇಗೌಡರ ಹೆಸರಿನ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಕೊರತೆಗಳ ಅಗರವಾಗಿದೆ. ನೂರು ಹಾಸಿಗೆಯಾಗಿ ಮೇಲ್ದರ್ಜೆಗೆ ಏರಿ ನಾಲ್ಕು ವರ್ಷ ಕಳೆದರೂ ಮೂಲಸೌಲಭ್ಯ ಅಸ್ಪತ್ರೆಯಲ್ಲಿ ಮರೀಚಿಕೆಯಾಗಿದೆ.

 ಆಸ್ಪತ್ರೆಗೆ ಬೇಕಿರುವುದು 11 ವೈದ್ಯರು. ಆದರೆ ಇಲ್ಲಿರುವುದು ಕೇವಲ 6 ವೈದ್ಯರು. ಸರ್ಜನ್, ನೇತ್ರತಜ್ಞ, ಅರಿವಳಿಕೆ, ಪ್ರಸೂತಿ ಹಾಗೂ ಸಾಮಾನ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಬಗೆಗೂ ಆಕ್ಷೇಪಗಳಿವೆ, ಸಮಯ ಪಾಲನೆ ಇಲ್ಲದೆ ಯಾವಾಗ ಬೇಕೋ ಅವಾಗ ಬಂದು ಹೋಗುವ ಕೆಲವು ವೈದ್ಯರ ನಡವಳಿಕೆಯಿಂದ ರೋಗಿಗಳು ದಿನನಿತ್ಯ ಬವಣೆ ಪಡುತಿದ್ದಾರೆ.

ಒಳರೋಗಿಗಳಿಗೆ ಅಗತ ಸೇವೆ ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ, ದಾದಿಯರ ಕೊರತೆ ಪ್ರಮುಖವಾಗಿ ಎದುರಾಗುವ ಸಮಸ್ಯೆ. 20 ಜನ ದಾದಿಯರಿಗೆ ಬದಲಾಗಿ 6 ಜನ ಖಾಯಂ ದಾದಿಯರು, 5ಜನ ಎನ್.ಆರ್.ಎಚ್.ಎಂ. ಯೋಜನೆಯಡಿ ಕಾರ್ಯನಿರ್ವಹಿಸುತಿದ್ದಾರೆ. ಬರೋಬ್ಬರಿ 23 ಗ್ರೂಪ್ ಡಿ  ನೌಕರರ ಕೊರತೆ ಇಲ್ಲಿದೆ. ಖಾಲಿ ಇರುವ ಸ್ಥಾನ ಗಳಿಗೆ ಭರ್ತಿಮಾಡುವ ಪ್ರಯತ್ನ ಸರ್ಕಾರ ಮುಂದಾಗುತ್ತಿಲ್ಲ. ಕಾರಣ ಆಸ್ಪತ್ರೆಗೆ ಬರುವ ರೋಗಿಗಳ ನರಳಾಟ ಹೆಚ್ಚುತ್ತಿದೆ.  ಅಡುಗೆಯವರು, ದೋಬಿಗಳು ಇಲ್ಲ, ಮಹಿಳಾ ಗ್ರೂಪ್ ಡಿ ನೌಕರರಂತೂ ಇಲ್ಲವೇ ಇಲ್ಲ.

ಆಸ್ಪತ್ರೆ 2001ರಲ್ಲಿ ನಿರ್ಮಾಣವಾಗಿದೆ. ಆದರೆ ಆ ದಿನ ದಿಂದಲೇ ಆಸ್ಪತ್ರೆ ಛಾವಣಿ ಸೋರುತ್ತಿರುವುದು ಇಲ್ಲಿನ ಸ್ವಚ್ಛ ತೆಗೆ ಹಿಡಿದ ಕೂಗನ್ನಡಿ. ಶಸ್ತ್ರ ಚಿಕಿತ್ಸಾ ಕೊಠಡಿ, ಪ್ರಯೋ ಗಾಲಯ ಹಾಗೂ ವಾರ್ಡ್‌ಗಳ ಛಾವಣಿ ಮಳೆಗಾಲದಲ್ಲಿ ತೊಟ್ಟಿಕ್ಕುತ್ತವೆ, ಗೋಡೆಗಳು ಹಸಿರು ಪಾಚಿಗಟ್ಟಿ ಅಸಹ್ಯ ವಾತಾವರಣ ಸೃಷ್ಟಿಸಿದೆ.

ಎರಡು ವರ್ಷದ ಹಿಂದೆ 23ಲಕ್ಷದಲ್ಲಿ ಆಸ್ಪತ್ರೆ ಕಟ್ಟಡ ಸೋರಿಕೆ ತಡೆಗೆ ಕೈಗೊಂಡ ಕಾಮಗಾರಿ ಗುತ್ತಿಗೆದಾರರ ಜೋಬು ತುಂಬಿತೇ ಹೊರತು ಸೋರಿಕೆ ನಿಲ್ಲಲಿಲ್ಲ. ಛಾವಣಿಗೆ ಮಾಡಿದ್ದ ಸೀಲ್‌ಕೊಟ್‌ನಿಂದ 10 ವರ್ಷ ಸೋರಿಕೆಯಾಗುವುದಿಲ್ಲ ಎಂಬ ಗುತ್ತಿಗೆದಾರರ ಭರವಸೆ ಹುಸಿಯಾಗಿದೆ.

ಕಿವಿ, ಕಣ್ಣು, ಮೂಗಿನ ತೊಂದರೆಗೊಳಗಾದವರಿಗೆ, ಮೂಳೆ ಮುರಿತಗೊಳಗಾದವರಿಗೆ, ದಂತ ಚಿಕಿತ್ಸೆಗೆ ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲ. ದಿನವಹಿ 100ರಿಂದ 150 ಹೊರ ರೋಗಿಗಳಿರುವ ಆಸ್ಪತ್ರೆಯಲ್ಲಿ ಮಾಸಿಕ ಸಿಸೇರಿಯನ್ ಸೇರಿದಂತೆ ಸರಾಸರಿ 60 ಶಸ್ತ್ರ ಚಿಕಿತ್ಸೆ ನಡೆಯುತ್ತದೆ, ಶಸ್ತ್ರ ಚಿಕಿತ್ಸೆಗೊಳಗಾದವರು, ಹೆರಿಗೆಯಾದ ಬಾಣಂತಿಯರ ಆರೈಕೆಗೆ ಪ್ರತ್ಯೇಕ ವಾರ್ಡ್ ಈ ಆಸ್ಪತ್ರೆಯಲ್ಲಿ ಇಲ್ಲ. ಎಲ್ಲಾ ರೀತಿಯ ರೋಗಬಾಧಿತರ ನಡುವೆ ಅತಿಸೂಕ್ಷ್ಮ ಸ್ಥಿತಿಯಲ್ಲಿರುವ ಶಸ್ತ್ರ ಚಿಕಿತ್ಸೆಗೊಳಗಾಗುವರನ್ನು ಮಲಗಿಸಲಾಗುತ್ತಿದೆ.

 ವಾರ್ಷಿಕ ರೂ.24ಲಕ್ಷ ಮೌಲ್ಯದ ಔಷಧಿಗಳು ಈ ಆಸ್ಪತ್ರೆಗೆ ಸರಬರಾಜಾಗುತ್ತಿದೆ. ಕೋರಿಕೆಯ ಅಗತ್ಯ ಔಷಧಿ ಗಳಿಗಿಂತ ಅನಗತ್ಯ ಔಷಧಿಗಳ ಸರಬರಾಜು ಮಾಡಲಾಗುತ್ತಿದೆ. ಬ್ಯಾಂಡೇಜ್, ಸಿರಿಂಜ್ ಸೇರಿದಂತೆ ಶಸ್ತ್ರ ಚಿಕಿತ್ಸಾ ಸಾಮಗ್ರಿಗಳಿಗೆ ಬಳಕೆದಾರರ ನಿಧಿ ಬಳಕೆ ಮಾಡಬೇಕಾಗಿದೆ.

 ನಾಯಿ ಕಡಿತಕ್ಕೆ ಅಗತ್ಯವಾದ ಚುಚ್ಚುಮದ್ದುಗಳು ಸಾಕಷ್ಟು ಪ್ರಮಾಣದಲ್ಲಿ ಒದಗಿಸಲಾಗುತ್ತಿಲ್ಲ. ಮಾಸಿಕ ರೂ. 50 ಸಾವಿರದಷ್ಟು ಬಳಕೆದಾರರ ನಿಧಿ ಸಂಗ್ರಹಿಸಲಾಗುತಿದ್ದು, ನಿಧಿಯ ಮುಕ್ಕಾಲು ಬಳಕೆ ಔಷಧಿ ಖರೀದಿಗೆ ವಿನಿಯೋಗವಾಗುತ್ತಿದೆ.

 ಹೆಚ್ಚಿನ ಚಿಕಿತ್ಸೆಗೆ ದೂರದ ಮಂಗಳೂರು, ಮಣಿಪಾಲ, ಶಿವಮೊಗ್ಗಗಳ ಸುಸಜ್ಜಿತ ಆಸ್ಪತ್ರೆಗಳಿಗೆ ರೋಗಿಗಳನ್ನು ಕೊಂಡೊಯ್ಯಲು ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಇಲ್ಲ, ತಾತ್ಕಾಲಿಕವಾಗಿ ಆರೋಗ್ಯ ರಕ್ಷಾಕವಚ 108 ಅನ್ನೆ ಅವಲಂಬಿಸಬೇಕಾಗಿ ಬಂದಿದೆ. ಆಸ್ಪತ್ರೆಯ ಅಂಬುಲೆನ್ಸ್ ಅನ್ನು ಗುಜರಿಗೆ ಹಾಕಲಾಗಿದೆ. ಬದಲಿ ವ್ಯವಸ್ಥೆ ಕಲ್ಪಿಸದಿರುವುದರಿಂದ ದೂರದ ಆಸ್ಪತ್ರೆಗಳಿಗೆ ತೆರಳಲು ಬಾಡಿಗೆ ವಾಹನ ಅವಲಂಬಿಸಬೇಕಾಗಿದೆ.

 ಆಸ್ಪತ್ರೆಯ ನೈರ್ಮಲೀಕರಣವನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, 6 ಜನ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಆಸ್ಪತ್ರೆ ಹೊರ ಆವರಣದಲ್ಲಿ ಎಲ್ಲೆಂದರಲ್ಲಿ ಖಾಲಿ ಸಿರಿಂಜ್‌ಗಳು, ಕೆಸರು ಗುಂಡಿಗಳು ನಿರ್ಮಾಣವಾಗಿರುವುದು ಆಸ್ಪತ್ರೆಯ ಅನಾರೋಗ್ಯವನ್ನು ಪ್ರದರ್ಶಿಸುತ್ತಿವೆ.

ಆಸ್ಪತ್ರೆಯ ಸಿಬ್ಬಂದಿಗೆ ಸಾಕಷ್ಟು ಪ್ರಮಾಣದಲ್ಲಿ ವಸತಿಗಳಿಲ್ಲ. ಇರುವ 13 ವಸತಿ ಗೃಹಗಳು ಶಿಥಿಲವಾಗಿದ್ದು ಮಳೆಗಾಲದಲ್ಲಿ ಸೋರುವುದರಿಂದ ಸಿಬ್ಬಂದಿ ಹಿಂಸೆ ಅನುಭವಿಸುವಂತಾಗಿದೆ.

ಆಸ್ಪತ್ರೆಯ ಆರೋಗ್ಯ ರಕ್ಷಕ ಸಮಿತಿ ಶಾಸಕರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದರೂ, ಸಮಿತಿ ಕ್ರಮಬದ್ಧ ಸಭೆ ನಡೆಸದೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

ಆಸ್ಪತ್ರೆಯ ಕೆಲವು ವೈದ್ಯರು ತಮ್ಮ ಮನೆಗಳನ್ನು ಚಿಕ್ಕ ಆಸ್ಪತ್ರೆಯಾಗಿ ಪರಿವರ್ತಿಸಿ ರುವುದು. ಜನರಿಗೆ ಗೊಂದಲ ಉಂಟುಮಾಡುತ್ತಿದೆ. ಸಾರ್ವಜನಿಕ ಆಸ್ಪತ್ರೆಯ ವೈಫಲ್ಯ ದಿಂದಾಗಿ ಪಟ್ಟಣದಲ್ಲಿ ವರ್ಷಕ್ಕೊಂದರಂತೆ ಖಾಸಗಿ ಆಸ್ಪತ್ರೆ ತಲೆ ಎತ್ತುತ್ತಿರುವುದು ಸರ್ಕಾರಿ ಆರೋಗ್ಯ ಸೇವೆಗೆ ಹಿಡಿದ ಕನ್ನಡಿಯಾಗಿದೆ.                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.