ADVERTISEMENT

ಕೊರಡಕಲ್ಲು: ಮರೀಚಿಕೆಯಾದ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:00 IST
Last Updated 5 ಫೆಬ್ರುವರಿ 2011, 7:00 IST

ಶೃಂಗೇರಿ: ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿಗಳು, ಕುಡಿಯುವ ನೀರಿನ ಪೈಪ್‌ಲೈನ್ ಮುಂತಾದ ಕಾಮಗಾರಿಗಳಿಗೆ ಚಾಲನೆ ದೊರೆಯುತ್ತದೆ. ಆದರೆ ಚುನಾವಣೆ ಮುಗಿದ ನಂತರ ಮತ್ತೆ ಕಾಮಗಾರಿಗಳು ಆರಂಭವಾಗುವುದು ಮತ್ತೊಂದು ಚುನಾವಣೆಗೆ. ಹೌದು ಇದು ತಾಲ್ಲೂಕಿನ ಮೆಣಸೆ ಗ್ರಾಮದ ಕೊರಡಕಲ್ಲು ಮೂಡಬನ ಸೈಟಿನ 50ಕ್ಕೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರಿನ ಕನಸು ನನಸಾಗಿಲ್ಲ.

ಇಲ್ಲಿನ ಮನೆಗಳು ನಿರ್ಮಾಣಗೊಂಡು ಸುಮಾರು 25 ವರ್ಷ ಆಗಿದೆ. ಆದರೆ ಕುಡಿಯುವ ನೀರಿಗೆ ಬೋರ್‌ವೆಲ್ ಅಥವಾ ತೆರೆದ ಬಾವಿಯಯನ್ನು ಆಶ್ರಯಿಸಬೇಕಾಗಿದೆ.
ಸಮೀಪದಲ್ಲಿಯೇ ಹರಿಯುತ್ತಿರುವ ತುಂಗಾನದಿ ಕಣ್ಣಿಗೆ ಕಾಣಿಸುತ್ತಿದ್ದರೂ ಕುಡಿಯುವ ನೀರಿನ ಪರದಾಟ ಮಾತ್ರ ತಪ್ಪಿಲ್ಲ.ಬಹುತೇಕ ಕೂಲಿ ಕಾರ್ಮಿಕರು ವಾಸವಾಗಿರುವ ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಂಖ್ಯೆ ಜಾಸ್ತಿ ಇದ್ದು, ಸರ್ಕಾರದ ಅನುದಾನ ಸಾಕಾಗದೇ ಕಳೆದ ವರ್ಷ ಶ್ರೀಮಠದಿಂದ ಉಚಿತವಾಗಿ ಪಿವಿಸಿ ಪೈಪ್‌ಲೈನ್‌ಗಳನ್ನು ಸಹ ನೀಡಿದೆ.

ಕಳೆದ ವರ್ಷ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಸಾರ್ವಜನಿಕರ ಒತ್ತಡಕ್ಕೆ ಮಣಿದು ಒಂದಿಷ್ಟು ಕಾಮಗಾರಿ ಮಾಡಿ ಅಲ್ಲಿಗೇ ನಿಲ್ಲಿಸಲಾಗಿತ್ತು. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವೇಳೆ ಅಲ್ಲಿನ ಗ್ರಾಮಸ್ಥರು ಸಮರ್ಪಕ ನೀರಿನ ವ್ಯವಸ್ಥೆ ಮಾಡದೇ ಇದ್ದರೆ ಧರಣಿ ಹೂಡುವುದಾಗಿ ಎಚ್ಚರಿಸಿದ್ದರು. ಚುನಾವಣೆ ನಂತರ ಇಲ್ಲದ ಸಬೂಬು ಹೇಳಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಕೊರಡಕಲ್ಲಿನ ಲಿಂಗಪ್ಪ, ಶಂಕರ ಆರೋಪಿಸುತ್ತಾರೆ.

ಕುಡಿಯುವ ನೀರಿಗಾಗಿ ಹಲವಾರು ಲಕ್ಷಣಗಳನ್ನು ವಿನಿಯೋಗಿಸಿದ್ದರೂ ಯಾವ ಕಾಮಗಾರಿ ಸಮರ್ಪಕವಾಗಿ ಮಾಡದೇ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗದೇ ಸರ್ಕಾರದ ಹಣ ಪೋಲಾಗುತ್ತಿದೆ. ಇಲ್ಲಿ 10 ವರ್ಷಗಳ ಹಿಂದೆ ನಿರ್ಮಿಸಿದ್ದ ನೀರಿನ ಟ್ಯಾಂಕ್, ಪೈಪ್‌ಲೈನ್ ಅನುಪಯುಕ್ತವಾಗಿದೆ. ಈಗ ಮತ್ತೊಂದು ಟ್ಯಾಂಕ್, ಹೊಸ ಪೈಪ್‌ಲೈನ್ ಮಾಡಲಾಗಿದೆ. ರಸ್ತೆ ಬದಿ ನಲ್ಲಿ ಹಾಕಲು ವ್ಯವಸ್ಥೆ ಸಹ ಮಾಡಲಾಗಿದೆ. ಆದರೆ ಈಗ ಮತ್ತೆ ಕಾಮಗಾರಿ ವಿಳಂಬದಿಂದ ಜನತೆ ಬೇಸತ್ತಿದ್ದಾರೆ.

ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಗೆ ನೀರು ಹೋರುವುದೇ ದಿನನಿತ್ಯದ ಕಾಯಕವಾಗಿದೆ. ಇನ್ನಾದರೂ ಮುಂದಿನ ಚುನಾವಣೆಯವರೆಗೂ ಕಾಯದೇ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಿಕೊಡಬೇಕೆಂಬುದು ಗ್ರಾಮಸ್ಥರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.