ADVERTISEMENT

ಚಿಂತಾಮಣಿ: ಪೊಲೀಸರ ಬಲೆಗೆ ಕಳ್ಳರ ತಂಡ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 10:28 IST
Last Updated 18 ಏಪ್ರಿಲ್ 2013, 10:28 IST

ಚಿಂತಾಮಣಿ: ನಗರದ ಪ್ರಭಾಕರ್ ಬಡಾವಣೆಯಲ್ಲಿ ಕಳೆದ ಐದು ತಿಂಗಳ ಹಿಂದೆ ಬಂಗಾರದ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಚಿನ್ನ ಹಾಗೂ ನಗದು ಸೇರಿದಂತೆ ಸುಮಾರು 6 ಲಕ್ಷ ರೂಪಾಯಿ ದೋಚಿದ್ದ ಮೂವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಮಾರು ಐದು ತಿಂಗಳ ಹಿಂದೆ ಪ್ರಭಾಕರ್ ಬಡಾವಣೆ  ನಿವಾಸಿ ಅಶೋಕ್ ಕುಮಾರ್ ರಾತ್ರಿ ವೇಳೆ ಬೆಂಗಳೂರಿನಿಂದ ಬಂದು ಬಸ್ ಇಳಿದು ಮನೆಗೆ ತೆರಳುತ್ತ್ದ್ದಿದಾಗ ಆರೋಪಿಗಳು ಕೊಲೆ ಯತ್ನ ನಡೆಸಿ ಚಿನ್ನ ಸೇರಿದಂತೆ ನಗದನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದರು.

ಪೊಲೀಸರು ಮಾಹಿತಿಯನ್ನು ಕಲೆ ಹಾಕಿ ನಗರದ ಮಲ್ಲೇಶ್ ಆಲಿಯಾಸ್ ಮಲ್ಲಿ, ನಾಗೇಶ್ ಆಲಿಯಾಸ್ ಡಿಚ್ಚಿ ನಾಗ, ಮತ್ತು ವೆಂಕಟೇಶ್ ಆಲಿಯಾಸ್ ಬೊಂಡಾ ವೆಂಕಟೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ವಿವರ : ಅಶೋಕ್‌ಕುಮಾರ್ ಬೆಂಗಳೂರಿನಲ್ಲಿ 164 ಗ್ರಾಂ ಚಿನ್ನ ಖರೀದಿಸಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಮೌಲ್ಯ ಕೈಚೀಲದಲ್ಲಿ  ಇಟ್ಟುಕೊಂಡು ಬೆಂಗಳೂರಿನಿಂದ ಚಿಂತಾಮಣಿಗೆ ಖಾಸಗಿ ಬಸ್ಸಿನಲ್ಲಿ ಬಂದು ಶನಿಮಹಾತ್ಮ  ದೇವಸ್ಥಾನದ ಬಳಿ ಇಳಿದು ಮನೆಯ ಕಡೆ ತೆರಳುತ್ತಿದ್ದರು. ಆರೋಪಿಗಳು ಮೊದಲೇ ಹೊಂಚು ಹಾಕಿ ಮೂವರು ಮೂರು ದಿಕ್ಕುಗಳಿಂದ ಬಂದು ದೊಣ್ಣೆ ಮತ್ತು ಮಚ್ಚುಗಳಿಂದ ಹಲ್ಲೆ ನಡೆಸಿ ಕೈಚೀಲವನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಐವರ ಸೆರೆ: ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಣೆ ಕುರಿತು ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ವಿವಿಧೆಡೆ ಕಾರ್ಯಾಚರಣೆ ನಡೆಸಿದೆ. ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದ್ಲೂಡು ಗ್ರಾಮದ ಗಂಗಾಧರ್, ಜೋಡಿಕಾಚಹಳ್ಳಿ ಗ್ರಾಮದ ನಾಗೇಶ್, ಕನ್ನಪ್ಪನಹಳ್ಳಿಯ ನಾಗೇಶ್, ಕುಂದಲಗುರ್ಕಿ ಗ್ರಾಮದ ಕೆ.ಆರ್.ನವೀನ್‌ಕುಮಾರ್, ತಿಮ್ಮಸಂದ್ರ ಗ್ರಾಮದ ಮುನಿಕೃಷ್ಣ ಬಂಧಿತ ಆರೋಪಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.