ADVERTISEMENT

ಜಿಲ್ಲೆಯಾದ್ಯಂತ ಉಸ್ತುವಾರಿ ಜಾಗೃತ ತಂಡ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 16896 ವಿದ್ಯಾರ್ಥಿಗಳು ಹಾಜರಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 10:11 IST
Last Updated 2 ಏಪ್ರಿಲ್ 2013, 10:11 IST

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ  ಸೋಮ ವಾರದಿಂದ ಆರಂಭವಾಗಿದ್ದು, 10ರವರೆಗೆ ನಡೆಯಲಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು 313 ಶಾಲೆಯ 16896 ವಿದ್ಯಾರ್ಥಿಗಳು 66 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. 7913 ಬಾಲಕರು, 7894 ಬಾಲಕಿಯರು ಸೇರಿದಂತೆ ಒಟ್ಟು 15807 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆದರೆ, 730 ಬಾಲಕರು, 359 ಬಾಲಕಿಯರು ಸೇರಿದಂತೆ ಒಟ್ಟು 1089 ಹಳೇ ವಿದ್ಯಾರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದಾರೆ.

ಪರೀಕ್ಷಾ ಕಾರ್ಯ ಸುಗಮವಾಗಿ ನಡೆಸಲು ಪ್ರತಿ ತಾಲ್ಲೂಕಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೊಳ ಗೊಂಡ ಜಾಗೃತಿ ದಳ ತಂಡ ರಚಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಜಾಗೃತ ದಳ ರಚಿಸಿ, ಶೈಕ್ಷಣಿಕ ವಲಯಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕಾರ್ಯ ವೀಕ್ಷಿಸಲಿದ್ದಾರೆ. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸ ಲಾಗುತ್ತದೆ, ಅಲ್ಲದೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

ತರೀಕೆರೆ: 2514 ವಿದ್ಯಾರ್ಥಿ
ತರೀಕೆರೆ: ತಾಲ್ಲೂಕಿನಲ್ಲಿ ಒಟ್ಟು 2514 ವಿದ್ಯಾ ರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ ತಿಳಿಸಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಒಟ್ಟು 13 ಪರೀಕ್ಷಾ ಕೇಂದ್ರಗಳನ್ನು ತೆರೆಯ ಲಾಗಿದ್ದು, ಪಟ್ಟಣದಲ್ಲಿ ಮೂರು, ಅಜ್ಜಂಪು ರದಲ್ಲಿ  ಎರಡು, ಲಕ್ಕವಳ್ಳಿ, ರಂಗೇನಹಳ್ಳಿ, ಬಾವಿಕೆರೆ, ಹುಣಸಘಟ್ಟ, ಸೊಕ್ಕೆ, ಕುಡ್ಲೂರು, ಬುಕ್ಕಾಂಬುದಿ, ಶಿವನಿಗಳಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳು ಇವೆ.

ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ತಹಶೀ ಲ್ದಾರ್ ನೇತೃತ್ದಲ್ಲಿ ತಾಲ್ಲೂಕು ಜಾಗೃತ ದಳ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಜಾಗೃತ ದಳ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೂ  ಒಬ್ಬರನ್ನು  ಅನ್ಯ ಶಾಲೆ  ಸ್ಥಾನಿಕ ಜಾಗೃತ ಅಧಿಕಾರಿಯನ್ನು ನೇಮಿಸಲಾಗಿದೆ ಎಂದರು.
ಅನ್ಯ ಜಿಲ್ಲೆಯ ಒಬ್ಬರನ್ನು ಸಂಚಾರಿ ಜಾಗೃತ ಅಧಿಕಾರಿಯನ್ನಾಗಿ ನೇಮಿಸಿದ್ದು, ಇವರು ತಾಲ್ಲೂಕಿನಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವರು. ಬೇರೆ ಶಾಲೆಯ ಅಧ್ಯಾಪಕರನ್ನು  ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿ ಮೇಲ್ವಿಚಾರಕರಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಯಾವುದೇ ಕಾರಣಕ್ಕೂ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಆಗದಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲೂ  ಮುನ್ನೆಚ್ಚರಿಕೆ ಸಲುವಾಗಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ದಿನದ ಪ್ರಶ್ನೆ ಪತ್ರಿಕೆಯನ್ನು  ಪೊಲೀಸ್ ಬಂದೂಬಸ್ತನಲ್ಲಿ ಖಜಾನೆಯಿಂದ ಪಡೆದು  ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಮಾರ್ಗದಲ್ಲಿ ತಲುಪಿಸುವ ಹಾಗೂ ಉತ್ತರ ಪತ್ರಿಕೆಯನ್ನು ತಕ್ಷಣವೇ ಚಿಕ್ಕಮಗ ಳೂರಿಗೆ  ಸಾಗಿಸುವ ಸೂಕ್ತ ವ್ಯವಸ್ಥೆ ಮಾಡ ಲಾಗಿದೆ ಎಂದು ತಿಳಿಸಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂಲ ಸೌಕರ್ಯದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಶೃಂಗೇರಿ: 694 ವಿದ್ಯಾರ್ಥಿ
ಶೃಂಗೇರಿ: ಪಟ್ಟಣದ ದರ್ಶಿನಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 694 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ತಾಲ್ಲೂಕಿನ 12 ಪ್ರೌಢಶಾಲೆಗಳ 345 ಬಾಲಕರು ಹಾಗೂ 349 ಬಾಲಕಿಯರು ಪರೀಕ್ಷೆಗೆ ಕುಳಿತಿದ್ದು, 50 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪರೀಕ್ಷೆಯ ನಿಗಾ ವಹಿಸಲು ಸಿಟಿ ಸ್ಕ್ವಾಡ್ ಹಾಗೂ ಜಾಗೃತ ದಳಗಳನ್ನು ರಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ನ.ರಾ. ಪುರ: 200 ವಿದ್ಯಾರ್ಥಿ
ನರಸಿಂಹರಾಜಪುರ: ತಾಲ್ಲೂಕಿನಲ್ಲಿ ಸೋಮವಾರ ದಿಂದ ಪ್ರಾರಂಭವಾದ  ಎಸ್‌ಎಸ್‌ಎಲ್‌ಸಿ ಯ  ಕನ್ನಡ ಪರೀಕ್ಷೆಯನ್ನು ವಿದ್ಯಾರ್ಥಿಗಳು  ಬರೆದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 208 ಬಾಲಕರು ಹಾಗೂ 232 ಬಾಲಕೀಯರು ಒಟ್ಟು 440 ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 81 ಬಾಲಕರು ಹಾಗೂ 119 ಬಾಲಕೀಯರು ಒಟ್ಟು 200 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT