ADVERTISEMENT

ತಮಿಳುನಾಡಿಗೆ ನೀರು ಸಾಧ್ಯವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 8:00 IST
Last Updated 10 ಅಕ್ಟೋಬರ್ 2012, 8:00 IST

ಚಿಕ್ಕಮಗಳೂರು:  ಮಳೆ ಕೊರತೆಯಿಂದ ರಾಜ್ಯದ ಎಲ್ಲಾ ಅಣೆಕಟ್ಟುಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಇಂತಹ  ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಏನೇ ಬಂದರೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯ ಇಲ್ಲ ಎಂದು ಸಂಸದ ಡಿ.ಬಿ. ಚಂದ್ರೇಗೌಡ ಸ್ಪಷ್ಟಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ತೀರ್ಪು ಬರುವ ವಿಶ್ವಾಸ ತಮಗಿದೆ ಎಂದರು.  ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿಕೆ ನೀಡಿರುವ ಕುರಿತು ಗಮನ ಸೆಳೆದಾಗ, ಪ್ರಕರಣವನ್ನು ದಾಖಲಿಸಲಿ ಅದಕ್ಕೆ ಚಿಂತೆ ಇಲ್ಲ.
 
ಈಗಾಗಲೇ ನ್ಯಾಯಾ ಲಯದಲ್ಲಿ ರಾಜ್ಯ ಸರ್ಕಾರದ ಪರ ವಕೀಲರು ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂದು ತಿಳಿಸಿದ್ದಾರೆ. ಆಗ ತಮಿಳುನಾಡು ಪರ ವಕೀಲ ರಾಗಲಿ, ಕೇಂದ್ರ ಸರ್ಕಾರದ ಪರ ವಾಗಿದ್ದ ವಕೀಲರಾಗಲಿ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಇದು ನ್ಯಾಯಾಲಯದ ನಿಂದನೆ ಆಗುವುದಿಲ್ಲ ಎಂದರು.

 ಕೇಂದ್ರ ಸರ್ಕಾರ ಕಳುಹಿಸಿದ ಸಮಿತಿ ಸದಸ್ಯರು ರಾಜ್ಯದಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ. ಅವರೂ ಸಹ ಕೇಂದ್ರ ಸರ್ಕಾರಕ್ಕೆ ಬರಪರಿಸ್ಥಿತಿಯನ್ನು ವಿವರಿಸಿ ಇದೇ 12ರಂದು ವರದಿ ಸಲ್ಲಿಸಲಿದ್ದಾರೆ. ಆಗಲಾದರೂ ಕೇಂದ್ರ ಸರ್ಕಾರ ರಾಜ್ಯದ ಪರ ಯೋಚಿಸಬಹುದು ಎಂದರು.

ಕೇಂದ್ರದಲ್ಲಿರುವ ಯುಪಿಎ ಸರ್ಕಾರ ಸುಭದ್ರವಾಗಿಲ್ಲ. ಇದು ರಾಜ್ಯಕ್ಕೆ ಅನ್ಯಾಯವಾಗಲು ಕಾರಣವಾಗಿದೆ. ರಾಜ್ಯದಲ್ಲಿರುವ ತಮಿಳುನಾಡು ವಿರುದ್ಧ ನಿಲುವು ತೆಗೆದುಕೊಂಡರೆ ತಮ್ಮ ಸರ್ಕಾರಕ್ಕೆ ಧಕ್ಕೆಯಾಗುತ್ತದೆ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆ ರಾಜ್ಯದ ಪರ ನಿಂತಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟರು.

ಎಫ್‌ಡಿಐ ಮಸೂದೆ: ರಾಜಸಭೆಯಲ್ಲಿ ಯುಪಿಎ ಸರ್ಕಾರಕ್ಕೆ ಬಹುಮತವಿಲ್ಲ. ಈ ಹಿನ್ನೆಲೆಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ನೀತಿಗೆ ಅನುಮೋದನೆ ದೊರೆಯುವುದಿಲ್ಲ ಎಂದು  ಡಿ.ಬಿ.ಚಂದ್ರೇಗೌಡ ಸ್ಪಷ್ಟಪಡಿಸಿದರು. 

 ವಿದೇಶಗಳಿಂದ ಬರುವ ಬಂಡವಾಳ ಸ್ಥಳೀಯ ಉದ್ಯೋಗವನ್ನು ಹಾಳುಮಾಡುತ್ತದೆ. ಅಲ್ಲದೆ ದೇಶೀಯ ವ್ಯಾಪಾರಿಗಳಿಗೆ ಇದು ಸಮಸ್ಯೆ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಆಲೋಚಿಸುತ್ತಿಲ್ಲ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.