ADVERTISEMENT

ತರೀಕೆರೆ ಔಷಧ ಸಮಸ್ಯೆ; ಪ್ರಫುಲ್ಲಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 8:45 IST
Last Updated 16 ಮಾರ್ಚ್ 2011, 8:45 IST

ತರೀಕೆರೆ: ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಖಾಸಗಿ ಔಷಧ ಅಂಗಡಿಯಲ್ಲಿನ ಮಾತ್ರೆ ತರುವಂತೆ ಏಕೆ ಶಿಫಾರಸು ಮಾಡಿದ್ದೀರಿ ಎಂದು ಆಸ್ಪತ್ರೆ ವೈದ್ಯರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಪುಲ್ಲಾ ಮಂಜುನಾಥ್ ಪ್ರಶ್ನಿಸಿದರು.ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಅವರು, ಆಸ್ಪತ್ರೆ ಎಲ್ಲಾ ವಾರ್ಡ್‌ಗಳನ್ನು ಪರಿಶೀಲಿಸಿದ ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದರು.

ಜಿಲ್ಲಾಸ್ಪತ್ರೆಯಿಂದ ಸಾಕಷ್ಟು ಔಷಧ ವಿತರಣೆಯಾಗುತ್ತಿದ್ದರೂ ಹೊರಗಿನಿಂದ ಔಷಧ ತರುವಂತೆ ವೈದ್ಯರು ಚೀಟಿ ಬರೆಯುವುದನ್ನು ಅವರು ಪ್ರಶ್ನಿಸಿದರು.ಆಸ್ಪತ್ರೆ ನೂತನ ಕಟ್ಟಡ ಮತ್ತು ವ್ಯವಸ್ಥೆ ಸರಿಯಾಗಿದೆ. ಆದರೆ ಶೌಚಾಲಯದ ಅವಸ್ಥೆ ಸರಿಯಾಗಿಲ್ಲ ಎಂದು ತಿಳಿಸಿದ ಅವರು, ತಕ್ಷಣದಲ್ಲಿ ಶೌಚಾಲಯ ವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಅತ್ತಿಮೊಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೇವಲ 1.38 ಲಕ್ಷ ರೂಪಾಯಿ ಬಳಸಲಾಗಿದೆ. ಮಿಕ್ಕ 9ಲಕ್ಷ  ಬಳಸದಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ವಿವರಣೆ ಕೇಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಧಾ ಅಮೃತೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಾ ನಾಯ್ಕ, ಡಾ.ರವಿಕೀರ್ತಿ, ಡಾ.ಬಸವರಾಜ್, ಸಮಾಜ ಕಲ್ಯಾಣಾಧಿಕಾರಿ ಡಿ.ಟಿ.ಮಂಜುನಾಥ್, ತಾಲ್ಲೂಕುನ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್, ಬಿಜೆಪಿ ಮುಖಂಡರಾದ ಜಲ್ದಿಹಳ್ಳಿ ರಾಜಶೇಖರ್, ವೇಲು ಮುರುಗನ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.