ADVERTISEMENT

ತರೀಕೆರೆ: ವಿಶೇಷ ಸಭೆ ಅರ್ಧಕ್ಕೆ ಮೊಟಕು:ಅಧ್ಯಕ್ಷೆ ವಿರುದ್ಧ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 9:55 IST
Last Updated 18 ಆಗಸ್ಟ್ 2012, 9:55 IST

ತರೀಕೆರೆ: ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ತುರಾತುರಿ ಯಲ್ಲಿ ಮುಗಿಸಿ ಹೊರನಡೆದ ಪುರಸಭಾಧ್ಯಕ್ಷೆ ಪಾರ್ವತಮ್ಮ ನಾಗರಾಜ್ ಮತ್ತು ಅವರ ಬೆಂಬಲಿಗ ಸದಸ್ಯರ ವಿರುದ್ಧ ಸದಸ್ಯರು ಘೋಷಣೆ ಕೂಗಿ ಸಭೆಯಲ್ಲಿ ಧರಣಿ ನಡೆಸಿ ಪ್ರತಿಭಟಿಸಿದರು.

ಸಭೆಯ ಆರಂಭದಲ್ಲಿ  ತರಲಾದ ವಿಚಾರಗಳನ್ನು ಪುರಸಭೆಯ ಅಧಿಕಾರಿಗಳು ಮಂಡಿಸುತ್ತಿದ್ದಂತೆ ಈ ಎಲ್ಲಾ ವಿಷಯಗಳನ್ನು ಸಾಮಾನ್ಯ ಸಭೆಯಲ್ಲಿ ತಂದು ಅನುಮೋದನೆ ಪಡೆಯುವಂತೆ ವಿರೋಧಿ ಗುಂಪಿನ ಸದಸ್ಯರು ಒತ್ತಾಯಿಸಿದರು.

ನಾವು ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ರಸ್ತೆಗಳ ಅಭಿವೃದ್ಧಿಗೆ ಕಾರ್ಯಕ್ರಮವನ್ನು ರೂಪಿಸಿದ್ದೇವೆ ತುರ್ತಾಗಿ ಈ ವಿಷಯಗಳಿಗೆ ವಿಶೇಷ ಸಭೆಯಲ್ಲಿ ಅಂಗೀಕಾರವಾಗಬೇಕಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಆಡಳಿತ ಸದಸ್ಯರು ಮಾಡಿದ ಮನವಿಯನ್ನು ತಿರಸ್ಕರಿಸಿದ ವಿರೋಧಿ ಸದಸ್ಯರು, ಮಳೆಗಾಲದಲ್ಲಿ ಯಾವ ರಸ್ತೆಗೆ ಡಾಂಬರ್ ಹಾಕ್ತೀರಿ ಅದೆಷ್ಟು ದಿನ ಬಾಳಿಕೆ ಬರುತ್ತೆ ಎಂದು ಪ್ರಶ್ನಿಸಿ ವಿಶೇಷ ಸಭೆಯನ್ನು ಕರೆಯುವ ಬದಲು ಸಾಮಾನ್ಯ ಸಭೆಯನ್ನು ಕರೆಯಿರಿ ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಗದ್ದಲ ಪ್ರಾರಂಭವಾಗಿ ಯಾರು ಏನು ಮಾತನಾಡುತ್ತಿದ್ದಾರೋ ಎಂದು ತಿಳಿಯಲಿಲ್ಲ. ಆಗ ಪುರಸಭಾ ಮುಖ್ಯಾಧಿಕಾರಿ ವಿಷಯವನ್ನು ಮತಕ್ಕೆ ಹಾಕಿದಾಗ 21 ಸದಸ್ಯರಲ್ಲಿ 13 ವಿರೋಧಿ ಸದಸ್ಯರು ಕಾಮಗಾರಿ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಆಡಳಿತ ಗುಂಪಿನ ಸದಸ್ಯರ ಜತೆ ಪುರಸಭಾಧ್ಯಕ್ಷೆ ಪಾರ್ವತಮ್ಮ ಸಭೆಯನ್ನು ಮುಕ್ತಾಯ ಗೊಳಿಸಿ ದಿಢೀರನೇ ಸಭೆಯಿಂದ ಹೊರ ನಡೆದರು.
ಸಭೆಯಿಂದ ದಿಢೀರ್ ಹೊರ ನಡೆದ ಅಧ್ಯಕ್ಷರ ಕ್ರಮವನ್ನು ಖಂಡಿಸಿದ ವಿರೋಧಿಗುಂಪಿನ ಸದಸ್ಯರು ಸಭೆಯಲ್ಲಿ ಧರಣಿ ನಡೆಸಿ ಅಧ್ಯಕ್ಷರ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ  ಸದಸ್ಯ ಎಂ.ನರೇಂದ್ರ, ಸಾಮಾನ್ಯಸಭೆ ನಡೆ ದಲ್ಲಿ ಪುರಸಭೆಯಲ್ಲಿ ನಡೆದಿರುವ ಅಕ್ರಮಗಳು ಹೊರ ಬೀಳುತ್ತವೆ ಎಂಬ ಉದ್ದೇಶದಿಂದ ಅಧ್ಯಕ್ಷರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಗಾಳಿಹಳ್ಳಿ ಸರ್ವೆ ನಂ 47 ರಲ್ಲಿರುವ ಆಶ್ರಯ ಯೋಜನೆಯ ನಿವೇಶನದ ಖಾತೆಯಲ್ಲಿ ಮತ್ತು ಖಾತೆ ಬದಲಾವಣೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು, ಭೂ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿದರು.

ಸಾಮಾನ್ಯ ಸಭೆಯಲ್ಲಿ ಖಾತೆ ಬದಲಾವಣೆ ಸೇರಿದಂತೆ ಅನೇಕ ವಿಷಯಗಳು ಪರಿಹಾರ ಕಂಡು ಕೊಳ್ಳುವುದರಿಂದ ಕೂಡಲೆ ಸಾಮಾನ್ಯ ಸಭೆಯನ್ನು ಕರೆಯುವಂತೆ ಸದಸ್ಯ ಧರ್ಮರಾಜ್ ಒತ್ತಾಯಿಸಿದರು.
ಆಡಳಿತ ಪಕ್ಷದ ಸದಸ್ಯ ಬಸವರಾಜ್ ಮಾತನಾಡಿ, 13ನೇ ಹಣಕಾಸು ಯೋಜನೆಯಲ್ಲಿ 12.5ಲಕ್ಷಹಣ ಪುರಸಭೆಗೆ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಪಟ್ಟಣದ ಪ್ರಮುಖ ಬೀದಿಗಳಾದ ವಿಜಯನಗರ ಬಡಾವಣೆ ಮುಖ್ಯರಸ್ತೆ, ಹಳೆ ಪೋಸ್ಟ್ ಆಫೀಸ್ ರಸ್ತೆ ಮತ್ತು ಕಾಲೇಜು (ಸರ್‌ಎಂವಿ) ರಸ್ತೆಯನ್ನು ಡಾಂಬರೀಕರಣ ಮಾಡಲು ನಿರ್ಧರಿಸಲಾಗಿತ್ತು. ಆದರೆ ವಿರೋಧ ಪಕ್ಷದ ಸದಸ್ಯರು ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.