ADVERTISEMENT

ನವರಾತ್ರಿ ಉತ್ಸವ- ವೈಭವದ ತೆರೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 6:23 IST
Last Updated 2 ಅಕ್ಟೋಬರ್ 2017, 6:23 IST

ಬಾಳೆಹೊನ್ನೂರು: ಜಗತ್ತಿನಲ್ಲಿ ಸಂಸ್ಕಾರಕ್ಕೂ ಮಿಗಿಲಾದ ಇನ್ನೊಂದು ಸಾಧನವಿಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷದ ಮೇಲೆ ನಡೆಯುವುದು ಭಾರತೀಯ ಸಂಸ್ಕೃತಿಯಾಗಿದೆ ಎಂದು ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ತಿಳಿಸಿದರು.

ಅವರು ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ ಎಂಟನೇ ವರ್ಷದ ದುರ್ಗಾಪೂಜೆಯ ಜನಜಾಗೃತಿ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಧಾರ್ಮಿಕ ನೆಲೆಗಟ್ಟಿನಲ್ಲಿ ಸಾಗಿದಲ್ಲಿ ಮಾತ್ರ ಜೀವನದಲ್ಲಿ ಸುಖವಿದೆ. ಆದರೆ, ಇಂದು ವಿಶ್ವದ ಎಲ್ಲಡೆ ಧಾರ್ಮಿಕ ತಳಹದಿ ಕುಸಿತಗೊಂಡಿರುವುದು ಅತಂಕವನ್ನು ಉಂಟುಮಾಡಿದೆ ಎಂದರು.

ADVERTISEMENT

ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ‘ಸಮಾಜವನ್ನು ಒಗ್ಗೂಡಿಸಬೇಕಾದ ರಾಜಕಾರಣಿಗಳು ಇಂದು ಒಡೆದು ಆಳುವ ನೀತಿ ಅನುಸರಿಸುತ್ತಿರುವುದು ವಿಷಾದನೀಯ. ರಾಜಕಾರಣಿಗಳನ್ನು ತಿದ್ದಿ ತೀಡಲು ಸ್ವಾಮೀಜಿಗಳು ಹಾಗೂ ಮಠಾಧೀಶರ ಸಲಹೆ ಅಗತ್ಯ’ ಎಂದರು.

ಭ್ರಷ್ಟಾಚಾರ ನಿಗ್ರಹ ದಳದ ಉಡುಪಿಯ ಇನ್‌ಸ್ಪೆಕ್ಟರ್‌ ಬಿ.ಎಸ್.ಸತೀಶ್ ಅವರನ್ನು ಗೌರವಿಸಲಾಯಿತು. ಅನಿವಾಸಿ ಭಾರತೀಯರ ಒಕ್ಕೂಟದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ವೈ.ಮೋಹನ್ ಕುಮಾರ್, ಖಜಾಂಚಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಆನಂದ್, ಮನುಕುಮಾರ್, ಮಣಿಕಂಠನ್, ಎಸ್.ಪಿ.ಶ್ರೀನಿವಾಸಮೂರ್ತಿ, ಆರ್.ಡಿ.ಮಹೇಂದ್ರ, ದಯಾಕರ ನಾ.ಸುವರ್ಣ, ಚೈತನ್ಯ ವೆಂಕಿ, ಕೆ.ಪ್ರಶಾಂತ್, ಶ್ರೀಕೃಷ್ಣಭಟ್, ಎಚ್.ಎಚ್.ಕೃಷ್ಣಮೂರ್ತಿ, ಹೊಳೆಬಾಗಿಲು ಮಂಜು, ರೆನ್ನಿದೇವಯ್ಯ ಇದ್ದರು.

ಎಸ್‌.ಎಸ್‌.ಎಲ್‌.ಸಿ, ಪಿಯುಸಿ, ಪದವಿ ಹಾಗೂ ಐಟಿಐಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸ್ಪಂದನ ಎಂ.ಪಟೇಲ್, ಎಂ.ಎಸ್.ನಾಗಶ್ರೀ, ಶ್ವೇತಾ, ಜಿ.ಪೂರ್ಣೇಶ್ ಅವರಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ಶನಿವಾರ ಬೆಳಿಗ್ಗೆ ಗಜಲಕ್ಷ್ಮೀ ಪೂಜಾ ಪಾರಾಯಣ ಹಾಗೂ ದುರ್ಗಾಹೋಮ ನಡೆಯಿತು. ಬೆಂಗಳೂರಿನ ಜೋಗಿ ಸುನೀತ ಮತ್ತು ಸಂಗಡಿಗರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಮಧ್ಯಾಹ್ನ ಸುಮಾರು 15 ಸಾವಿರಕ್ಕೂ ಅಧಿಕ ಜನ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸಂಚಾರ ದಟ್ಟಣೆ: ಪರದಾಡಿದ ಸವಾರರು ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಪರದಾಡುವಂತಾಯಿತು.

ಶೃಂಗೇರಿ, ಕೊಪ್ಪದ ಕಡೆಯಿಂದ ಬರುವ ವಾಹನಗಳನ್ನು ರಂಭಾಪುರಿ ಪೆಟ್ರೋಲ್ ಬಂಕ್ ಬಳಿ ತಡೆದು ಮಾರಿಗುಡಿ ರಸ್ತೆಯ ಮೂಲಕ ಜೇಸಿ ವೃತ್ತಕ್ಕೆ ತೆರಳಲು ಪೊಲೀಸರು ಸೂಚಿಸಿದರು. ಆದರೆ, ಅದೇ ವೇಳೆ ಚಿಕ್ಕಮಗಳೂರು, ಕಳಸ ಕಡೆಯಿಂದ ಶೃಂಗೇರಿ ತೆರಳುವ ವಾಹನಗಳನ್ನು ಮಾರಿಗುಡಿ ರಸ್ತೆಯ ಮೂಲಕ ಚಲಿಸಲು ಅನುವು ಮಾಡಿದ್ದು ಟ್ರಾಫಿಕ್ ಜಾಮ್ ಆಗಲು ಕಾರಣವಾಯಿತು.

ಕಿರಿದಾದ ರಸ್ತೆಯಲ್ಲಿ ಎರಡೂ ಕಡೆಗಳಿಂದ ಬಸ್‌ಗಳು ಮುನ್ನುಗ್ಗಿದ ಕಾರಣ ಕೆಲ ಹೊತ್ತು ವಾಹನಗಳು ಸಿಲುಕಿಕೊಂಡವು. ಸಾಲು ಸಾಲು ರಜೆಯ ಕಾರಣ ನೂರಾರು ವಾಹನಗಳು ಸಾಲು ಸಾಲಿನಲ್ಲಿ ಒಂದರ ಹಿಂದೊಂದು ಅಮೆಗತಿಯಲ್ಲಿ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.