ADVERTISEMENT

ಪರಿಹಾರಕ್ಕೆ ರೈತರ ಪಟ್ಟು-ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 11:05 IST
Last Updated 15 ಅಕ್ಟೋಬರ್ 2011, 11:05 IST

ತರೀಕೆರೆ: ಅಭಿವೃದ್ಧಿ ಕಾಮಗಾರಿಗಳಿಂದಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಪುನರ್ವಸತಿ ಪರಿಹಾರ ಮಾದರಿಯಲ್ಲಿಯೇ ಭದ್ರಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೂ ಪರಿಹಾರ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ರೈತರು ಶುಕ್ರವಾರ ಪ್ರತಿಭಟಿಸಿದರು.

ಸರ್ವೆ ಕಾರ್ಯಕ್ಕೆ ಶುಕ್ರವಾರ ಆಗಮಿಸಿದ್ದ ಯೋಜನೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಬೆಟ್ಟತಾವರೆಕೆರೆ ಸುತ್ತಲಿನ ರೈತರು ತಡೆದರು. ರೈತರ ಮನವೊಲಿಸಲು ಅಧಿಕಾರಿಗಳು ನಡೆಸಿದ ಯತ್ನ ವಿಫಲವಾಯಿತು.

`ರೈತರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದ ಅಧಿಕಾರಿಗಳು, ಈಗ ಗಮನಕ್ಕೇ ತಾರದೆ ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ~ ಎಂದು ರೈತ ಮುಖಂಡರು ಖಂಡಿಸಿದರು. ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಕೆ.ಎಂ.ಗಾಯತ್ರಿ ರೈತರನ್ನು ಸಮಾಧಾನಪಡಿಸಲೆತ್ನಿಸಿದರು.

`ಈಗಾಗಲೇ ನಿಮ್ಮಡನೆ ಮಾತುಕತೆ ನಡೆಸಿದ್ದೇವೆ. ಸಮಸ್ಯೆಯನ್ನೂ ಸರ್ಕಾರದ ಗಮನಕ್ಕೆ ತರಲಾಗಿದೆ. ತುರ್ತಾಗಿ 6/1 ನೋಟಿಫಿಕೇಷನ್ ಜಾರಿ ಮಾಡಬೇಕಿರುವುದರಿಂದ ಸರ್ಕಾರಿ ಭೂಮಿಯಲ್ಲಿನ ಸರ್ವೆಗೆ ಅಡ್ಡಿಪಡಿಸದಿರಿ~ ಎಂದು ಮನವಿ ಮಾಡಿದರು. ಒಪ್ಪದ ರೈತರು, `ಮೊದಲು ಪರಿಹಾರ ನಿರ್ಧರಿಸಿ. ನಂತರವೇ ಸರ್ವೆ ನಡೆಸಿ~ ಎಂದು ಪಟ್ಟುಹಿಡಿದರು.

ಇನ್ನೆರಡು ದಿನದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ರೈತರ ಸಭೆ ಕರೆಯಲಾಗುವುದು. ರೈತರು ಬೇಡಿಕೆ ಬದಲಿಸದೆ ಎಲ್ಲ ಅಂಶಗಳ ಪಟ್ಟಿ ಸಲ್ಲಿಸಬೇಕು ಎಂದು ನಿರ್ಧರಿಸಿದ ರೈತ ಮುಖಂಡರು, ಸರ್ವೆಗೆ ಆಗಮಿಸಿದ್ದವರನ್ನು ವಾಪಸ್ ಕಳುಹಿಸಿದರು.

ಮಾಜಿ ಶಾಸಕ ನೀಲಕಂಠಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಆರ್.ರಾಜಶೇಖರಪ್ಪ, ಹುಣಸಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಶಪ್ಪ, ರೈತ ಮುಖಂಡರಾದ ರಾಜಶೇಖರ್, ಸುರೇಶ್, ಬೆಟ್ಟತಾವರೆಕೆರೆ, ಹುಣಸಘಟ್ಟ, ಬೊಮ್ಮೇನಹಳ್ಳಿ, ನರಸೀಪುರ, ಹೊಸೂರು, ಸಮತಳ, ಹಳೆಯೂರು, ಚಾಕೋನಹಳ್ಳಿ ರೈತರು, ಡಿವೈಎಸ್‌ಪಿ ಸುಧಾಕರ್ ನಾಯಕ್, ತಹಸೀಲ್ದಾರ್ ರಂಜಿತಾ, ಎಸ್‌ಐ ಸುರೇಶ್ ಮತ್ತಿತರರು ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.