ADVERTISEMENT

ಬೇಟೆ ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 10:24 IST
Last Updated 6 ಜೂನ್ 2013, 10:24 IST

ಚಿಕ್ಕಮಗಳೂರು: ಚಿಪ್ಪು ಹಂದಿ ಮತ್ತು ಮುಳ್ಳು ಹಂದಿ ಬೇಟೆಯಾಡಲು ಭದ್ರಾ ಅಭಯಾರಣ್ಯವನ್ನು  2 ತಂಡಗಳಾಗಿ ಹೊಕ್ಕಿದ್ದ 8 ಬೇಟೆಗಾರರ ಪೈಕಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಭದ್ರಾ ವನ್ಯಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ಕೆ.ಡಿ.ಉದುಪುಡಿ ತಿಳಿಸಿದರು.

ತಮಿಳನಾಡಿನ ಹೊಸೂರು ಗ್ರಾಮದ ಭೀಮ, ನಾಗಪ್ಪ, ರಾಮ ಮತ್ತು ರಮೇಶ ಬಂಧಿತರು. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಬಂಧಿತರಿಂದ ಹಾರೆ, ಕಬ್ಬಿಣದ ಸಲಾಕೆ ವಶಪಡಿಸಿಕೊಳ್ಳಲಾಗಿದೆ. ಅಭಯಾರಣ್ಯದಲ್ಲಿ ಅಡುಗೆ ಸಿದ್ಧಪಡಿಸಿ, ಊಟ ಮಾಡಿರುವ ಜಾಗ ಪತ್ತೆ ಹಚ್ಚಲಾಗಿದೆ. ತಲಾ ನಾಲ್ಕು ಮಂದಿ ಇರುವ ಎರಡು ತಂಡಗಳು ಭದ್ರಾ ಅಭಯಾರಣ್ಯ ಪ್ರವೇಶಿಸಿ, ಒಂದು ದಿನ ಉಳಿದು, ಮರು ದಿನ ಚಿಪ್ಪುಹಂದಿ ಬೇಟೆಯಾಡಲು ತೆರಳುತ್ತಿರುವುದು ಬೆಳಿಗ್ಗೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಏಳು ಮಂದಿ ಬೇಟೆಗಾರರು ಪರಾರಿಯಾಗಿದ್ದು, ಅದರಲ್ಲಿ ಭೀಮಾ ಎಂಬಾತ ಸೆರೆ ಸಿಕ್ಕಿದ. ತಕ್ಷಣವೇ ಅರಣ್ಯದಿಂದ ಹೊರ ಹೋಗುವ ಎಲ್ಲ ಗೇಟುಗಳನ್ನು ಮುಚ್ಚಿ ಪತ್ತೆಕಾರ್ಯ ಮುಂದುವರಿಸಿದೆವು. ನಾಗಪ್ಪ ಮತ್ತು ರಾಮ ಎಂಬಿಬ್ಬರನ್ನು ಬೀರೂರು ರೈಲ್ವೆ ಸ್ಟೇಷನ್‌ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ತಮಿಳುನಾಡಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಬೆಂಗಳೂರು ಪೊಲೀಸರ ನೆರವಿನಿಂದ ಹೊಸೂರಿನಲ್ಲಿ ಕಾರ್ಯಾಚರಣೆ ನಡೆಸಿ, ಅಲ್ಲಿ ರಮೇಶ ಎಂಬಾತನನ್ನು ಪತ್ತೆ ಹಚ್ಚಲಾಯಿತು ಎಂದರು.

ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಗೆ ಹುಲಿ, ಚಿರತೆ ಮತ್ತು ಆನೆಗಳಿಗೆ ಇರುವ ಪ್ರಾಮುಖ್ಯತೆ ಇದೆ. ಚೀನಾದಲ್ಲಿ ಚಿಪ್ಪುಹಂದಿಗೆ ಅಪಾರ ಬೇಡಿಕೆ ಇದ್ದು, ಚರ್ಮ ಕಳ್ಳಸಾಗಣೆಗೆ ಬೇಟೆಯಾಡುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಚಿಪ್ಪುಹಂದಿ ಚರ್ಮ ಸಾಗಿಸುವ ಮಧ್ಯವರ್ತಿಗಳು ಯಾರೆಂಬುದು ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಸ್ಥಳೀಯ ತೋಟಗಳಲ್ಲಿ ಕೆಲಸ ಮಾಡಿಕೊಂಡಿರುವ ವೆಂಕಟಮುನಿ ಎಂಬಾತ ಸೆರೆ ಸಿಕ್ಕಿರುವ ಆರೋಪಿಗಳಿಗೆ ಪರಿಚಯದವನಾಗಿದ್ದಾನೆ. ಈತನೂ ನಾಪತ್ತೆಯಾಗಿದ್ದು, ಪತ್ತೆ ಮಾಡಲು ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದಾಗಿದ್ದಾರೆ ಎಂದು ಹೇಳಿದರು.
ಚಿಪ್ಪು ಹಂದಿ ಅಡಗಿರುವ ಜಾಗವನ್ನು ಸುಲಭವಾಗಿ ಪತ್ತೆ ಹಚ್ಚುವ ನಿಪುಣರು ಹಂದಿ ಬೇಟೆಯಾಡುವ ತಂಡದಲ್ಲಿದ್ದಾರೆ. ಜಾಗ ಪತ್ತೆಯಾದ ತಕ್ಷಣ ಹಾರೆಯಿಂದ ಬಗೆದು ಹಂದಿ ಹೊರ ಬಂದ ತಕ್ಷಣ ಕಬ್ಬಿಣದ ಸಲಾಕೆಯಿಂದ ಅದರ ತಲೆಗೆ ಹೊಡೆದು ಕೊಲ್ಲುತ್ತಾರೆ. ಈ ರೀತಿ ಹೊಡೆದು ಸಾಯಿಸಿರುವ ಒಂದು ಚಿಪ್ಪು ಹಂದಿ ಶವ ಪತ್ತೆಯಾಗಿದೆ ಎಂದರು.

ಕಳೆದ 2010-11ನೇ ಸಾಲಿನಲ್ಲಿ ದೆಹಲಿಯ ಎಂಇಇ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿಯೇ ಭದ್ರಾ ಅಭಯಾರಣ್ಯ ಅತ್ಯುತ್ತಮ ಅರಣ್ಯ ಪ್ರದೇಶಗಳಲ್ಲಿ ಒಂದೆನಿಸಿದೆ. ಮೂರು ವರ್ಷಕ್ಕೊಮ್ಮೆ ಈ ರೀತಿ ಸರ್ವೆ ನಡೆಸಲಾಗುತ್ತದೆ ಎಂದರು.
80 ಕ್ಯಾಮೆರಾ: ಲಕ್ಕವಳ್ಳಿ ಮತ್ತು ತಣಿಗೆಬೈಲಿನಲ್ಲಿ ಒಟ್ಟು 80 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹುಲಿಗಳು, ಹುಲಿ ಮರಿಗಳು, ಮರಿ ಹೊತ್ತುಕೊಂಡು ಹೋಗು ತ್ತಿರುವ ಕರಡಿ, ಚಿರತೆ, ಬೆಕ್ಕುಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.