ಮೂಡಿಗೆರೆ: ನೂರು ಹಾಸಿಗೆಗಳ ಸೌಲಭ್ಯವುಳ್ಳ ಮಹಾತ್ಮಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಮಕ್ಕಳ ವೈದ್ಯರಿಲ್ಲದೇ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಲ್ಲಿನ ಮಹಾತ್ಮ ಗಾಂಧಿ ಆಸ್ಪತ್ರೆಯನ್ನು 100 ಹಾಸಿಗೆಗಳ ಹಂತಕ್ಕೆ ಮೇಲ್ದರ್ಜೆಗೇರಿಸಿ ಒಬ್ಬ ಸರ್ಜನ್ ಹುದ್ದೆಯೂ ಸೇರಿದಂತೆ 8 ಮಂದಿ ವೈದ್ಯರು ಸೇವೆ ಸಲ್ಲಿಸಲು ಹುದ್ದೆ ಗಳನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ ಮಕ್ಕಳ ವೈದ್ಯರ ಹುದ್ದೆಯೂ ಸೇರ್ಪಡೆಗೊಂಡಿತ್ತು.
ಆದರೆ ಮಂಜೂರಾದ ದಿನದಿಂದ ಇಲ್ಲಿ ಮಕ್ಕಳ ವೈದ್ಯರು ಸೇವೆ ಸಲ್ಲಿಸಿರುವುದೇ ವಿರಳವಾಗಿದೆ. ಮಕ್ಕಳ ವೈದ್ಯ ಸೇವೆಗಾಗಿ ಆಸ್ಪತ್ರ್ರೆಗೆ ಬಂದ ಕೆಲವೆ ದಿನಗಳಲ್ಲಿ ವರ್ಗಾವಣೆಯಾಗಿ ಹೋಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ವೈದ್ಯರಿಲ್ಲದೇ ಆಸ್ಪತ್ರೆಯ ಮಕ್ಕಳ ವಾರ್ಡ್ ಅನ್ನು ಮುಚ್ಚಲಾಗಿದ್ದು, ಮಕ್ಕಳ ಚಿಕಿತ್ಸೆಗಾಗಿ ಬರುವ ಪೋಷಕರು ಜಿಲ್ಲಾ ಕೇಂದ್ರಕ್ಕೆ ಅಥವಾ ಹಾಸನ, ಮಂಗಳೂರಿಗೆ ಕರೆದೊಯ್ಯುವ ಸಂಕಷ್ಟಕ್ಕೆ ಸಿಲುಕಿದಾರೆ.
ತಾಲ್ಲೂಕಿನ ಹಲವಾರು ಸಂಘಟನೆಗಳು ಆಸ್ಪತ್ರೆಗೆ ಮಕ್ಕಳ ವೈದ್ಯರನ್ನು ನೇಮಕ ಮಾಡುವಂತೆ ಉಪವಾಸ ಸತ್ಯಾಗ್ರಹ ನಡೆಸಿದರೂ ಪ್ರಯೋಜನವಾಗಿಲ್ಲ. ಇಲ್ಲಿನ ಸಮಸ್ಯೆ ಮನಗೊಂಡ ತಾಲ್ಲೂಕು ಪಂಚಾಯತಿಯು ಕಳೆದ ತಿಂಗಳ ಕೆಡಿಪಿ ಸಭೆಯಲ್ಲಿ ಮಕ್ಕಳ ವೈದ್ಯರ ನೇಮಕಕ್ಕೆ ಶಿಫಾರಸ್ಸು ಮಾಡುವಂತೆ ತಿಳಿಸಿದ್ದರೂ ಯಾವುದೇ ಪರಿಹಾರ ರೂಪಿಸಿಲ್ಲ. ಜಿಲ್ಲಾ ಪಂಚಾಯತಿ ಸಭೆಗಳಲ್ಲಿ ಜನಪ್ರತಿ ನಿಧಿಗಳು ಆಸ್ಪತ್ರೆಯ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲರಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
`ಹಳ್ಳಿಯಿಂದ ತಾಲ್ಲೂಕು ಕೇಂದ್ರಕ್ಕೆ ಬರುವುದೇ ಮಧ್ಯಾಹ್ನವಾಗುತ್ತದೆ. ಇಲ್ಲಿ ಮಕ್ಕಳ ವೈದ್ಯರಿಲ್ಲದೆ ಮತ್ತೆ ಗೊತ್ತು ಗುರಿಯಿಲ್ಲದ ಬೇರೆ ಊರುಗಳಿಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ~ ಎಂಬುದು ಭೈರಾಪುರದ ವನಜಾಕ್ಷಿ ಎಂಬುವವರ ಅಳಲು.
ಆಸ್ಪತ್ರೆಯಲ್ಲಿ ನಾನಾ ಸಮಸ್ಯೆಗಳಿವೆ. ಮಕ್ಕಳ ವೈದ್ಯರಿಲ್ಲ, ಸಮರ್ಪಕ ತುರ್ತು ಚಿಕಿತ್ಸಾ ವ್ಯವಸ್ಥೆಗಳಿಲ್ಲ. ರಕ್ತ ಸಂಗ್ರಹಣೆಗೆ ವ್ಯವಸ್ಥೆಯಿಲ್ಲ. ಸ್ಕ್ಯಾನಿಂಗ್ ಯಂತ್ರವಿದೆ ಆದರೆ ಸ್ಕ್ಯಾನಿಂಗ್ ಮಾಡಲು ನೌಕರರೇ ಇಲ್ಲ. 9ಜನ ವೈದ್ಯರು ಇರಬೇಕು.
ಆದರೆ 5 ಜನ ಮಾತ್ರ ಇದ್ದಾರೆ. 25 ಜನ ಗ್ರೂಪ್ `ಡಿ~ ಅವಶ್ಯಕತೆಯಿದೆ ಇರು ವುದು ಕೇವಲ 4 ಜನ ಮಾತ್ರ. ಸಮಸ್ಯೆ ಕುರಿತು ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆದಿದ್ದರೂ ಸಮಸ್ಯೆ ಬಗೆಹರಿ ದಿಲ್ಲ. ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ತಾಲ್ಲೂಕಿನ ವೈದ್ಯರು.
ಮೂಡಿಗೆರೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದಿದ್ದರಿಂದ ಹಾಗೂ ತಾಲ್ಲೂಕಿನಲ್ಲಿ ಯಾವುದೇ ಖಾಸಗಿ ನರ್ಸಿಂಗ್ ಹೋಂ ಗಳು ಸಹ ಇಲ್ಲದೇ ಇರುವುದರಿಂದ ಸಣ್ಣ ಪುಟ್ಟ ಕಾಯಿಲೆಗಳಿಗೂ ಅಕ್ಕಪಕ್ಕದ ಜಿಲ್ಲೆಗಳನ್ನು ಆಶ್ರಯಿಸುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.