ADVERTISEMENT

ರೈತಪರ ಜೆಡಿಎಸ್ ಅಧಿಕಾರಕ್ಕೆ ಬರಲು ಶ್ರಮಿಸಿ

ಜೆಡಿಎಸ್‌ ವಿದ್ಯಾರ್ಥಿ ಘಟಕ ಉದ್ಘಾಟನಾ ಸಮಾರಂಭದಲ್ಲಿ ಎಚ್.ಟಿ.ರಾಜೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 8:36 IST
Last Updated 21 ಮಾರ್ಚ್ 2018, 8:36 IST

ನರಸಿಂಹರಾಜಪುರ: ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರೈತಪರ ಜೆಡಿಎಸ್‌ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ತಿಳಿಸಿದರು.

ಇಲ್ಲಿನ ಗುರುಭವನದಲ್ಲಿ ಸೋಮವಾರ ನಡೆದ ಜೆಡಿಎಸ್‌ ವಿದ್ಯಾರ್ಥಿ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ರೈತಪರ, ಜನಪರ ಚಿಂತನೆಯನ್ನು ಹೊಂದಿದ್ದಾರೆ’ ಎಂದರು.

ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ಬಹುತೇಕ ಮುಖಂಡರು ವಿದ್ಯಾರ್ಥಿಗಳಾಗಿದ್ದಾಗಲೇ ನಾಯಕತ್ವ ಗುಣ ಬೆಳೆಸಿಕೊಂಡು ಹೋರಾಟದ ಮೂಲಕ ರಾಜಕಾರಣಕ್ಕೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್‌ ವಿದ್ಯಾರ್ಥಿ ಘಟಕವನ್ನು ಉದ್ಘಾಟಿಸುತ್ತಿರುವುದು ಸಂತಸದ ವಿಷಯ. ಪ್ರಸ್ತುತ ಆಂದ್ರಪ್ರದೇಶ, ತಮಿಳುನಾಡು, ಬಿಹಾರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಿದ್ದು, ಇದರಿಂದ ಪ್ರಾದೇಶಿಕ ಸಮಸ್ಯೆಗಳ ನಿವಾರಣೆಗೆ ಅನುಕೂಲವಾಗಲಿದೆ. ಕರ್ನಾಟಕದಲ್ಲೂ ನಾಡಿನ ನೆಲ, ಜಲ, ನಾಡು, ನುಡಿಯ ಸಂರಕ್ಷಣೆಗೆ ಜೆಡಿಎಸ್ ಅನ್ನು ಒಗ್ಗಟ್ಟಾಗಿ ಬೆಂಬಲಿಸಬೇಕು’ ಎಂದರು.

ADVERTISEMENT

ಜೆಡಿಎಸ್ ಮುಖಂಡ ಡಿ.ಸಿ.ದಿವಾಕರ್ ಮಾತನಾಡಿ,‘ಭಾರತದಲ್ಲಿ ಶೇ 80ರಷ್ಟು ರೈತಾಪಿ ವರ್ಗದ ಜನರಿದ್ದು, ಯಾವ ಸರ್ಕಾರಗಳು ರೈತಪರ ಕೆಲಸ ಮಾಡುತ್ತಿಲ್ಲ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಸಾಲವನ್ನು ಮರುಪಾವತಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ತಮಗೆ ಸಿಕ್ಕ ಅಲ್ಪ ಅವಧಿಯ ಅಧಿಕಾರದಲ್ಲಿಯೇ ರೈತರಪರವಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದರು.

ತಾಲ್ಲೂಕು ಜೆಡಿಎಸ್ ಘಟಕ ಅಧ್ಯಕ್ಷ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಮುಖಂಡ ಮನೋಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಉಮಾಶಂಕರ್, ಮಕ್ಕಿಕೊಪ್ಪ ವಿಜೇಂದ್ರ, ಅರ್ಜುನ್, ಕಾರ್ತಿಕ್, ರಾಜೇಶ್, ಸಚ್ಚಿನ್, ಬಿ.ಕೆ.ಜಾನಕೀರಾಂ. ಜೋಯಿ, ಅಬ್ಧುಲ್‌ಸುಬಾನ್, ಶಿವದಾಸ್,ರವಿ, ರಾಕೇಶ್ ಇದ್ದರು.

ಜೆಡಿಎಸ್‌ ವಿದ್ಯಾರ್ಥಿ ಘಟಕದ ಉದ್ಘಾಟನೆಯ ಅಂಗವಾಗಿ ಷಟಲ್ ಬ್ಯಾಟ್‌ಮಿಂಟನ್‌ ಪಂದ್ಯಾವಳಿ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.