ADVERTISEMENT

ವಿದೇಶದಲ್ಲಿ ಸಂಸ್ಕೃತದ ಮಹತ್ವ ಹೆಚ್ಚುತ್ತಿದೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 11:10 IST
Last Updated 25 ಜನವರಿ 2011, 11:10 IST

ಶೃಂಗೇರಿ :ಪಾಶ್ಚಾತ್ಯ ದೇಶಗಳಲ್ಲಿ ಸಂಸ್ಕೃತದ ಮಹತ್ವ ಹೆಚ್ಚುತ್ತಿದೆ. ವಿಶ್ವಭಾಷೆಯಾಗಿ ಮೆರೆಯಲು ಸಂಸ್ಕೃತಕ್ಕೆ ಅಗಾಧ ಅವಕಾಶವಿದೆ ಎಂದು ಅಮೆರಿಕ ಕೊಲಂಬಿಯಾ ವಿವಿಯ ಡಾ. ಶೆಲ್ಡಾನ್ ಪೋಲಾಕ್ ಹೇಳಿದರು.

ಮೆಣಸೆಯ ರಾಜೀವ್‌ಗಾಂಧಿ ಸಂಸ್ಕೃತ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ವ್ಯಾಖ್ಯಾನ ಮಾಲೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಾವಿರಾರು ವರ್ಷದ ಇತಿಹಾಸವಿರುವ ಸಂಸ್ಕೃತದಲ್ಲಿ ಅಮೂಲ್ಯ ಗ್ರಂಥಗಳಿದ್ದರೂ ಅನೇಕ ಪುರಾತನ ಗ್ರಂಥಗಳು ನಾಶಹೊಂದಿವೆ. ಅತ್ಯಂತ ಪ್ರಮುಖ ಜ್ಞಾನ ಭಾಷೆಯಾದ ಸಂಸ್ಕೃತದ ಅನಿವಾರ್ಯತೆ ಇತ್ತೀಚಿಗೆ ಹೆಚ್ಚುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯತೆ ಎತ್ತಿ ಹಿಡಿಯಲು ಸಂಸ್ಕೃತದ ಸಂಶೋಧನಾತ್ಮಕ ಅಧ್ಯಯನ ಅನಿವಾರ್ಯ ಎಂದರು.

ಭಾರತೀಯ ಜ್ಞಾನ ಶಾಖೆಗಳು ಅಧ್ಯಯನ ಕೊರತೆಯಿಂದ ದುರ್ಬಲವಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಸಂಶೋಧನಾತ್ಮಕ ಅಧ್ಯಯನ ಕೈಗೊಂಡು ಹೊಸ ವಿಷಯಗಳನ್ನು ನಾಡಿಗೆ ಸಮರ್ಪಿಸಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಕುಲಪತಿ ಪ್ರೊ. ರಾಧಾವಲ್ಲಭ ತ್ರಿಪಾಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರಾಷ್ಟ್ರೀಯ ವ್ಯಾಖ್ಯಾನ ಮಾಲೆಯಿಂದ ಯುವ ಸಮೂಹಕ್ಕೆ ಹೊಸ ಚೇತನ ಬಂದಿದ್ದು ಭಾಷೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ವಿದೇಶದ ವ್ಯಕ್ತಿಯೊಬ್ಬರು ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿ ಭಾಷೆಯ ಆಳವಾದ ಜ್ಞಾನ ಹೊಂದಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಶೆಲ್ಡಾನ್ ಪೋಲಾಕ್‌ರ ಪತ್ನಿ ಎಲಿಸನ್, ತಹಸೀಲ್ದಾರ್ ಜಗದೀಶ್, ಗಿರಿಧರ್ ಶಾಸ್ತ್ರಿ, ಪ್ರಾಚಾರ್ಯ ಪ್ರೊ. ಸಚ್ಚಿದಾನಂದ ಉಡುಪ, ಡಾ. ರಾಘವೇಂದ್ರಭಟ್, ವಿನಯ್ ಮತ್ತು ಡಾ. ಸೋಮನಾಥ್ ಸಾಹು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.