ADVERTISEMENT

ವಿಶ್ವ ಕನ್ನಡ ಸಮ್ಮೇಳನ: ಉಡುಪಿ ಜಿಲ್ಲಾ ಕನ್ನಡ ತೇರಿಗೆ ವಿಧ್ಯುಕ್ತ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 8:40 IST
Last Updated 10 ಮಾರ್ಚ್ 2011, 8:40 IST

ಉಡುಪಿ: ವಿಶ್ವಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕನ್ನಡ ಮನಸ್ಸುಗಳಲ್ಲಿ ಹಬ್ಬದ ಉಲ್ಲಾಸ ಮೂಡಿದೆ. ಜಿಲ್ಲೆ ಜಿಲ್ಲೆಗಳಲ್ಲಿ ಕನ್ನಡ ತೇರುಗಳು ಮೆರವಣಿಗೆ ಹೊರಟಿವೆ. ಜಿಲ್ಲಾ ಕನ್ನಡ ತೇರಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ಸಂಭ್ರಮೋಲ್ಲಾಸಗಳಿಂದ ಚಾಲನೆ ನೀಡಲಾಯಿತು.

ತಾಯಿ ಭುವನೇಶ್ವರಿ ಭಾವಚಿತ್ರವನ್ನು ಒಳಗೊಂಡಂತೆ ಕಡಲತಡಿಯ ಭಾರ್ಗವ ಸಾಹಿತಿ ಡಾ.ಕೋಟ ಶಿವರಾಮ ಕಾರಂತ ಮತ್ತು ಕವಿ ಗೋಪಾಲಕೃಷ್ಣ ಅಡಿಗರ ಭಾವಚಿತ್ರ ಹೊಂದಿರುವ ಈ ನೆಲದ ಸಂಸ್ಕೃತಿಯನ್ನು ಬಿಂಬಿಸುವ ನಾಗಮಂಡಲ, ಭೂತ ಕೋಲ, ಹುಲಿಕುಣಿತ, ಕಂಬಳ, ಅಕ್ಕಿಮುಡಿ ಕಟ್ಟುವುದು, ಕೃಷಿ ಇವೆಲ್ಲವನ್ನು ಒಳಗೊಂಡ ಚಿತ್ರಗಳಿಂದ ಅಲಂಕರಿಸಿಕೊಂಡು, ಕರಾವಳಿ ದೇವಸ್ಥಾನದ ಮಾದರಿಯ ಗೋಪುರದೊಂದಿಗೆ ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ಕನ್ನಡ ತೇರಿಗೆ ಪುರೋಹಿತರು ವೇದಘೋಷ, ಮಂತ್ರ ಪೂರ್ವಕವಾಗಿ ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಆಯೋಜಿಸಿದ್ದ  ಕಾರ್ಯಕ್ರಮಕ್ಕೆ ಜಿ.ಪ.ಅಧ್ಯಕ್ಷ ಕಟಪಾಡಿ ಶಂಕರ್ ಪೂಜಾರಿ ತೆಂಗಿನ ಕಾಯಿ ಒಡೆದು ವಿಧ್ಯುಕ್ತ ಚಾಲನೆ ನೀಡಿದರು. ಪಟಾಕಿ, ಸುಡುಮದ್ದು ಸುಟ್ಟು ಈ ಮೆರವಣಿಗೆಯ ಸಂಭ್ರಮಕ್ಕೆ ಇನ್ನಷ್ಟು ಹುರುಪು ತುಂಬಲಾಯಿತು. ಈ ಸಂದರ್ಭದಲ್ಲಿ ಸುತ್ತಮುತ್ತಲ ಶಾಲಾ, ಕಾಲೇಜು ಮಕ್ಕಳು ಪಾಲ್ಗೊಂಡಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಕ್ಕಳು ಮೆರವಣಿಗೆಯ ಮುಂದಕ್ಕೆ ಸಾಗಿದರು.

ವಿಶ್ವ ಕನ್ನಡ ಸಮ್ಮೇಳನದ ತೇರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಬ್ರಹ್ಮಗಿರಿ ಮೂಲಕ ತಾಲ್ಲೂಕು ಕಚೇರಿ ಡಯಾನದಿಂದ ಸಿಟಿ ಬಸ್ ನಿಲ್ದಾಣಕ್ಕೆ ಮೆರವಣಿಗೆ ಮೂಲಕ ತೆರಳಿತು. ಅಲ್ಲಿಂದ ಮುಂದಕ್ಕೆ ಕಾರ್ಕಳಕ್ಕೆ ತೆರಳಿತು. ಸಂಜೆ ಕುಂದಾಪುರ-ಬೈಂದೂರು ಮಾರ್ಗವಾಗಿ ಅಲ್ಲಿಂದ ಬೆಳಗಾವಿಗೆ ತೇರು ಸಾಗಲಿದೆ.

ಮೆರವಣಿಗೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ್, ಹೆಚ್ಚುವರಿ ಎಸ್‌ಪಿ ವೆಂಕಟೇಶಪ್ಪ, ಡಿವೈಎಸ್‌ಪಿ ಜಯಂತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ್, ತಹಸೀಲ್ದಾರ್ ಪ್ರಸನ್ನ, ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಆಯುಕ್ತ ಗೋಕುಲದಾಸ್ ನಾಯಕ್, ತಾ.ಪಂ.ಅಧ್ಯಕ್ಷ ದೇವದಾಸ್ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್.ಎಸ್.ದಳವಾಯಿ ಇದ್ದರು. ಆದರೆ ಸ್ಥಳೀಯ ಶಾಸಕರಾಗಲಿ, ಯಾವುದೇ ರಾಜಕೀಯ ಪಕ್ಷಗಳ ಮುಖಂಡರಾಗಲಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾಗಲಿ ಜಿಲ್ಲಾ ಕನ್ನಡ ತೇರಿನ ಮೆರವಣಿಗೆಯಲ್ಲಿ ಪಾಲ್ಗೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.