ನರಸಿಂಹರಾಜಪುರ ತಾಲ್ಲೂಕಿನಲ್ಲಿ ಬತ್ತವನ್ನು ರೈತರು ಯಥೇಚ್ಛವಾಗಿ ಬೆಳೆಯುತ್ತಿದ್ದರಿಂದ ಈ ಹಿಂದೆ ರಾಜ್ಯದಲ್ಲೇ ಬತ್ತದ ಕಣವೆಂದು ಹೆಸರು ವಾಸಿಯಾಗಿತ್ತು. ಆದರೆ ಭದ್ರಾ ಅಣೆಕಟ್ಟಿನ ನಿರ್ಮಾಣದಿಂದಾಗಿ ಫಲವತ್ತಾದ ಜಮೀನು ಮುಳುಗಡೆಯಾಗಿದ್ದರಿಂದ ಈ ಬತ್ತದ ಕಣಜವೆಂಬ ಹೆಸರು ಮರೆಯಾಯಿತು.
ಮುಳುಗಡೆಯ ನಂತರವೂ ತಾಲ್ಲೂಕಿನಾದ್ಯಂತ ರೈತರು ತಮ್ಮ ಉಳಿದ ಜಮೀನಿನಲ್ಲಿ ಪ್ರಮುಖವಾಗಿ ಬತ್ತವನ್ನು ಮಾತ್ರ ಹೆಚ್ಚಾಗಿ ಬೆಳೆಯುತ್ತಿದ್ದರು. ಪ್ರಸ್ತುತ ಸುಮಾರು 5ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬತ್ತ ಬೆಳೆಯಾಗುತ್ತಿದೆ. ಆದರೆ ಬತ್ತದ ಬೆಲೆ ಪ್ರತಿ ಕ್ವಿಂಟಲ್‌ಗೆ ರೂ. 1,500ರ ಆಸುಪಾಸಿನಲ್ಲಿ ನಿಗದಿಯಾಗುತ್ತಿದೆ. ಬತ್ತ ಬೆಳೆಯುವುದಕ್ಕೆ ತಗಲುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿರುವುದರಿಂದ ಲಾಭದಾಯಕ ವಾಣಿಜ್ಯ ಕೃಷಿಯತ್ತ ರೈತರು ಆಕರ್ಷಿತರಾಗುತ್ತಿದ್ದಾರೆ.
ಬತ್ತದ ಬೆಳೆಗಾರರ ಸಂಕಷ್ಟದ ಇಂತಹ ಸನ್ನಿವೇಶದಲ್ಲಿ ಸ್ಥಳೀಯ, ಕೊಡಗು ಹಾಗೂ ಕೇರಳದ ಶುಂಠಿ ಬೆಳೆಗಾರರು ಇಲ್ಲಿ ಬತ್ತ ಬೆಳೆಯುವ ಜಮೀನನ್ನು ವಾರ್ಷಿಕ ರೂ.20 ಸಾವಿರದಿಂದ 25ಸಾವಿರಕ್ಕೆ ಹಾಗೂ ಉತ್ತಮ ನೀರಿನ ಸೌಲಭ್ಯವಿರುವ ವಿಶಾಲವಾದ ಪ್ರದೇಶವನ್ನು ವಾರ್ಷಿಕ ರೂ.30 ಸಾವಿರಕ್ಕೆ ಗೇಣಿ ಪಡೆದು ಶುಂಠಿ ಬೆಳೆಯಲು ಪ್ರಾರಂಭಿಸಿದ್ದಾರೆ. ವರ್ಷಗಟ್ಟಲೆ ದುಡಿದರೂ ಬಾರದ ಇಷ್ಟು ಪ್ರಮಾಣದ ಹಣ ಒಂದು ವರ್ಷದ ಶುಂಠಿ ಬೆಳೆಗೆ ಗೇಣಿ ಕೊಡುವುದರಿಂದ ಬರುತ್ತದೆ. ಹಾಗಾಗಿ ಬತ್ತದ ಬೆಳೆಗಾರರು ಬತ್ತ ಬೆಳೆಯುವುದನ್ನು ಬಿಟ್ಟು ತಮ್ಮ ಜಮೀನನ್ನು ಶುಂಠಿ ಬೆಳೆಗೆ ಗೇಣಿ ನೀಡಲು ಆಸಕ್ತರಾಗಿದ್ದಾರೆ. ಪ್ರಸ್ತುತ ಶುಂಠಿ ಬೆಲೆ ಕ್ವಿಂಟಾಲ್‌ಗೆ ರೂ.18 ಸಾವಿರದಿಂದ 20ಸಾವಿರ ದವರೆಗೂ ನಿಗದಿಯಾಗುತ್ತಿದ್ದರೂ ಹೆಚ್ಚು ಹೆಚ್ಚು ಶುಂಠಿ ಬೆಳೆಯಲು ಬೆಳೆಗಾರರು ಆಸಕ್ತಿ ತೋರುತ್ತಿದ್ದಾರೆ.
ಇದಲ್ಲದೆ ಹೊಸ ಜಾಗದಲ್ಲಿ, ಅಡಿಕೆ ಹಾಗೂ ರಬ್ಬರ್ ಸಸಿ ನೆಟ್ಟ ತೋಟದ ಮಧ್ಯದಲ್ಲಿಯೂ ಸಹ ಮೊದಲೆರೆಡು ವರ್ಷ ಶುಂಠಿ ಬೆಳೆಯಲು ಸಹ ಜಮೀನನ್ನು ಗೇಣಿಗೆ ನೀಡಲಾಗುತ್ತಿದೆ. ಇದರಿಂದ ಹೊಸತೋಟಕ್ಕೆ ಪೂರಕವಾದ ಪೋಷಕಾಂಶ ಲಭ್ಯವಾಗುತ್ತದೆ ಹಾಗೂ ತೋಟದಲ್ಲಿನ ಕಳೆಯು ಸಹ ನಿಯಂತ್ರಣವಾಗುತ್ತದೆ. ಶುಂಠಿ ಮಧ್ಯೆ ಮೆಣಸಿನ ಕಾಯಿ ಹಾಗೂ ಕಾಯಿಪಲ್ಲೆ (ಬಿನ್ಸ್) ಸಹ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಶುಂಠಿಯ ರೋಗ ನಿಯಂತ್ರಣಕ್ಕೆ ಚೆಂಡು ಹೂವನ್ನು ಬೆಳೆಸುವ ಪ್ರಯತ್ನವನ್ನು ಬೆಳೆಗಾರರು ನಡೆಸಿದ್ದಾರೆ. ಪ್ರಸ್ತುತ 150 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ.
ಅನುಭವಿ ರೈತರು ಮತ್ತು ಕೃಷಿ ತಜ್ಞರ ಪ್ರಕಾರ ಶುಂಠಿ ಬೆಳೆಯಲು ಬಳಸುವ ರಾಸಾಯನಿಕ ಮತ್ತು ಕ್ರಿಮಿನಾಶಕಗಳಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಆದರೆ ತಮ್ಮ ಬದುಕಿನ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವ ರೈತರಿಗೆ ಮಣ್ಣಿನ ಫಲವತ್ತತೆ ಮತ್ತು ಪರಿಸರದ ಅಂಶ ಗಣನೆಗೆ ಬರುತ್ತಿಲ್ಲ. ದೊರದ ಸತ್ಯಕ್ಕಿಂತ ಹತ್ತಿರದ ಸುಳ್ಳು ರೈತರಿಗೆ ಅಪ್ಯಾಯಮಾನವಾಗಿ ಕಾಣುತ್ತಿರುವುದು ವಿಷಾದದ ಸಂಗತಿಯಾಗಿದೆ. ಹೀಗಾಗಿ ಬತ್ತ ಬೆಳೆಯುವ ಗದ್ದೆಗಳೆಲ್ಲವೂ ಶುಂಠಿ ಮತ್ತಿತರ ವಾಣಿಜ್ಯ ಬೆಳೆಯಾಗಿ ಪರಿವರ್ತನೆಯಾಗುತ್ತಿದೆ. ಬತ್ತದ ಬೆಳೆಗಾರರು ತಮ್ಮ ಚಿತ್ತವನ್ನು ಬೇರೆ ಬೆಳೆಯತ್ತ ಹರಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.