ಚಿಕ್ಕಮಗಳೂರು: ಕಲಿಯುಗದಲ್ಲಿ ಶಕ್ತಿಗೆ ಬೆಲೆ ಬರಬೇಕಾದರೆ ಸಂಘ ಸಂಸ್ಥೆಗಳು ಒಗ್ಗಟ್ಟಾಗಿರಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯಪಟ್ಟರು.
ನಗರದಲ್ಲಿ ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾ ಮತ್ತು ರತ್ನಗಿರಿ ಕಾಳಿಕಾಂಬ ಸೇವಾ ಸಮಿತಿ ಆಶ್ರಯದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಮತ್ತು ವೈಶ್ವಕರ್ಮಣ ವಾರ್ಷಿಕ ಮಹಾಯಜ್ಞ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯ ಭವನಕ್ಕೆ ರೂ.2 ಲಕ್ಷ ಕೊಡುವ ಭರವಸೆ ನೀಡಿದ ಶಾಸಕರು, ದಾನಿಗಳು ಸಹಕರಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಅರಕಲಗೂಡು ಅರೇಮಾದನಹಳ್ಳಿ ವಿಶ್ವಕರ್ಮ ಶ್ರೀಮನ್ಮೂಲ ಮಠದ ಗುರು ಶಿವಸುಜ್ಞಾನಮೂರ್ತಿ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜಭಾಂಧವರು ಏಕಮುಖಿಯಾಗಿನಿಂತರೆ ಯಾವ ಕಾರ್ಯವೂ ದೊಡ್ಡದಲ್ಲ. ಜಿಲ್ಲೆಯಲ್ಲಿ 45000 ಸಮಾಜ ಬಾಂಧವರಿದ್ದು, ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.
ಹಾಸನ ಜಿಲ್ಲೆ ಆನೆಗೊಂಧಿ ಮಠದ ರೂಢೇಂದ್ರ ಸ್ವಾಮೀಜಿ, ವಿಶ್ವ ಬ್ರಾಹ್ಮಣ ಸಮಾಜ ಸಭಾ ಅಧ್ಯಕ್ಷ ಜಿ.ಟಿ.ರತ್ನಾಕರ್ ಪುರೋಹಿತ್, ಕಾಳಿಕಾಂಬ ಸೇವಾ ಸಮಿತಿ ಗೌರವ ಅಧ್ಯಕ್ಷ ರಾಮಲಿಂಗಾಚಾರಿ, ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರರಾದ ಬಾಬು ಪತ್ತಾರ್, ನಿವೃತ್ತ ವಿಶೇಷ ಉಪ ಜಿಲ್ಲಾಧಿಕಾರಿ ನಾರಾಯಣಚಾರ್, ದಾವಣಗೆರೆ ವಾಣಿಜ್ಯ ತೆರಿಗೆ ಅಧಿಕಾರಿ ಬೋಗರಾಜಚಾರಿ, ಕೆನರಾ ಬ್ಯಾಂಕ್ ಒಡವೆ ಮೌಲ್ಯಮಾಪಕ ಬಿಜಾಪುರದ ಪತ್ತಾರ್, ಶ್ರೀಧರ್, ವಿಶ್ವಕರ್ಮ ಆಚಾರಿ, ಮಲ್ಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.