ADVERTISEMENT

ಸಾರ್ವಜನಿಕರಿಗೆ ಕಾನೂನು ಜಾಗೃತಿ ಅಗತ್ಯ

ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ನ್ಯಾಯಾಧೀಶ ದೇವೇಂದ್ರನ್ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 6:45 IST
Last Updated 16 ಮಾರ್ಚ್ 2018, 6:45 IST

ಚಿಕ್ಕಮಗಳೂರು: ಸಾರ್ವಜನಿಕರಿಗೆ ಮೂಲಭೂತ ಹಕ್ಕು ಮತ್ತು ಕಾನೂನಿನ ತಿಳಿವಳಿಕೆ ಇರಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶ ಡಿ.ಟಿ.ದೇವೇಂದ್ರನ್ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾನೂನು ಮಾಪನ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ವಕೀಲರ ಸಂಘದ ಸಹಯೋಗದಲ್ಲಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಸ್ತುಗಳನ್ನು ಖರೀದಿಸುವವರು ಮಾತ್ರ ಗ್ರಾಹಕರಲ್ಲ. ಸಂಸ್ಥೆಯಿಂದ ಸೇವೆ ಪಡೆಯುವವರು ಸಹ ಗ್ರಾಹಕರಾಗುತ್ತಾರೆ. ಉತ್ಪಾದಕರು, ವ್ಯಾಪಾರಸ್ಥರು, ಗ್ರಾಹಕರ ನಡುವಿನ ಸಮಸ್ಯೆ ಬಗೆ ಹರಿಸಲು ಗ್ರಾಹಕರ ವೇದಿಕೆ ಸ್ಥಾಪಿಸಲಾಗಿದೆ ಎಂದರು.

ADVERTISEMENT

ಮಾಹಿತಿ ಪಡೆಯುವ ಹಕ್ಕು, ಆಯ್ಕೆ ಹಕ್ಕು, ಅಹವಾಲು ಹಕ್ಕು, ಆರೋಗ್ಯ ಪೂರ್ಣ ಪರಿಸರ ಪಡೆಯುವ ಹಕ್ಕುಗಳು ಗ್ರಾಹಕರಿಗೆ ಇವೆ. ವಸ್ತುವಿನ ಪ್ರಮಾಣ, ಗುಣಮಟ್ಟ, ಮಾದರಿ, ಶೈಲಿ, ಆಕಾರದಲ್ಲಿ ನ್ಯೂನತೆ ಉಂಟಾದರೆ, ನಿಗದಿತ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಗ್ರಾಹಕರು ದೂರು ನೀಡಬಹುದು ಎಂದರು.

ಉತ್ಪಾದಕರ ವಿರುದ್ಧ ₹ 20 ಲಕ್ಷದೊಳಗಿನ ಪರಿಹಾರಕ್ಕೆ ಜಿಲ್ಲಾ ಗ್ರಾಹ ವೇದಿಕೆಗೆ, ₹1 ಕೋಟಿಯೊಳಗಿನ ಪರಿಹಾರಕ್ಕೆ ರಾಜ್ಯ ಆಯೋಗಕ್ಕೆ, ₹1 ಕೋಟಿಗಿಂತ ಹೆಚ್ಚಿನ ಪರಿಹಾರಕ್ಕೆ ರಾಷ್ಟ್ರೀಯ ಆಯೋಗಕ್ಕೆ ಬಾದಿತ ಗ್ರಾಹಕ ದೂರು ನೀಡಬಹುದು ಎಂದರು.

ಮಹಿಳೆಯರಿಗೆ, ಅಂಗವಿಕಲರಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ವಾರ್ಷಿಕ ಆದಾಯ ₹1 ಲಕ್ಷದೊಳಗೆ ಇರುವವರಿಗೆ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಚಿತ ಕಾನೂನು ಸಲಹೆ ನೀಡಲಾಗುವುದು ಸಾರ್ವಜನಿಕರು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಸರ್ಕಾರಿ ವಕೀಲ ರಾಘವೇಂದ್ರ ರಾಯ್ಕರ್ ಮಾತನಾಡಿ, ‘ದೇಶದಲ್ಲಿ ಶೇ 95ರಷ್ಟು ವ್ಯವಹಾರ ಪರಸ್ಪರ ನಂಬಿಕೆ ಆಧಾರದಲ್ಲಿ ನಡೆಯುತ್ತದೆ. ಶೇ 5ರಷ್ಟು ವ್ಯವಹಾರದಲ್ಲಿನ ಸಮಸ್ಯೆ ಗ್ರಾಹಕರ ವೇದಿಕೆಯಲ್ಲಿ ಬಗೆಹರಿಯುತ್ತವೆ’ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯೆ ಮಂಜುಳಾ, ಮಾಜಿ ಸದಸ್ಯ ಎಚ್.ಎಸ್ ರುದ್ರಪ್ಪ, ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಕೆ.ಎನ್.ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.