ADVERTISEMENT

ಹಿಂದುತ್ವ ಪ್ರಯೋಗ ಶಾಲೆಯಲ್ಲಿ ಕಾಣಿಸಿದ ಬಿರುಕು!

ಪ್ರಜಾವಾಣಿ ವಿಶೇಷ
Published 4 ಅಕ್ಟೋಬರ್ 2012, 5:45 IST
Last Updated 4 ಅಕ್ಟೋಬರ್ 2012, 5:45 IST

ಚಿಕ್ಕಮಗಳೂರು: ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಹಿಂದುತ್ವ ಪ್ರಯೋಗಶಾಲೆ ಎಂದೇ ಬಿಂಬಿಸಿಕೊಂಡು ಅಬ್ಬರದ ಪ್ರಚಾರ ನಡೆಸಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಕೈವಶ ಮಾಡಿಕೊಂಡಿತ್ತು.

ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿಯೂ ಯಶಸ್ಸು ಕಂಡಿತ್ತು. `ಯಡಿಯೂರಪ್ಪ ಅಲೆ~ ಜಿಲ್ಲೆಯಲ್ಲಿ ಪಕ್ಷದ ಬೇರುಗಳನ್ನು ಭದ್ರಪಡಿಸಿದ್ದವು. ಈಗ ಯಡಿಯೂರಪ್ಪ `ನಡೆ~ ಮತ್ತು ಪಕ್ಷದ ವಿರುದ್ಧದ `ಅಸಮಾಧಾನದ ನುಡಿ~ ಜಿಲ್ಲೆಯಲ್ಲಿ ಪಕ್ಷವನ್ನು ಒಡೆದ ಮನೆಯಂತಾಗಿಸಿದೆ.

ಹಿಂದುತ್ವ ಪ್ರಯೋಗ ಶಾಲೆಯಲ್ಲಿ ಮೊದಲ ಬಾರಿಗೆ `ಒಗ್ಗಟ್ಟು~ ಕಣ್ಮರೆಯಾಗುತ್ತಿರುವ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಬಿಜೆಪಿ ಮೂವರು ಶಾಸಕರು ಮತ್ತು ಕೆಲ ಮುಖಂಡರು ಯಡಿಯೂರಪ್ಪ ಅವರನ್ನು ಹಿಂಬಾಲಿಸುವ ಸುಳಿವು ನೀಡಿದ್ದಾರೆ. ಹೊಸ ಪಕ್ಷ ಕಟ್ಟುವ ಇಂಗಿತವನ್ನು ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.

ಜತೆಗೆ ತಮ್ಮ ಬೆಂಬಲಿಗರ ಮನೆಗಳಿಗೆ ಭೇಟಿ ನೀಡಿದಾಗಲೂ ತಮ್ಮ ಕೆಲ ಆಪ್ತರ ಬಳಿ ಮತ್ತು ಸ್ವಾಮೀಜಿಯೊಬ್ಬರ ಬಳಿ ಹೊಸ ಪಕ್ಷ ಕಟ್ಟುವ ತಮ್ಮ ದೃಢ ನಿರ್ಧಾರ ವ್ಯಕ್ತಪಡಿಸಿದರು. ಡಿಸೆಂಬರ್‌ವರೆಗೆ ಕಾಲ ದೂಡುವ ಉದ್ದೇಶದ ಹಿಂದೆ ತಾವೇ ನೇಮಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಲಿಂಗಾಯತರಲ್ಲಿ ಕೆಲವರ ವಿರೋಧ ಕಟ್ಟಿಕೊಳ್ಳುವುದು ಬೇಡವೆನ್ನುವುದಿದೆ.

ಪಕ್ಷದಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಾಗಿದೆ. ಜಿಲ್ಲೆಯಲ್ಲಿ ಪಕ್ಷದೊಳಗೆ ಸೂಕ್ತ ಸ್ಥಾನಮಾನ ಸಿಗದೆ, ಅಸಮಾಧಾನ ಗೊಂಡಿರುವವರು ಯಡಿಯೂರಪ್ಪ ಅವರನ್ನು ಹಿಂಬಾಲಿಸುವುದು ಖಚಿತ ಎಂದು ಯಡಿಯೂರಪ್ಪ ಆಪ್ತರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ ಪಡೆದು ಚಿಕ್ಕಮಗಳೂರಿಗೆ ಬುಧವಾರ ಬೆಳಿಗ್ಗೆ ಆಗಮಿಸಿದ ಯಡಿಯೂರಪ್ಪ, ಮೊದಲು ಉದ್ಯಮಿ ಜಿ.ರವಿಕುಮಾರ್ ಮನೆಗೆ ಭೇಟಿ ನೀಡಿ, ಮುಖಂಡರಾದ ಕೆ.ಸಿ.ಮಂಜೇಗೌಡ, ಮಿಲ್ಟ್ರಿ ಮಂಜು, ಶಿವಮೂರ್ತಿ ಅವರೊಂದಿಗೆ ಅರ್ಧ ತಾಸು ಖಾಸಗಿಯಾಗಿ ಚರ್ಚಿಸಿ, ಜಿಲ್ಲೆಯ ರಾಜಕಾರಣದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದರು.

ನಂತರ ಅಲ್ಲಿಂದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶುಭಾ ಎನ್.ರಾಜು ಅವರ ಮನೆಗೆ ಭೇಟಿ ಕೊಟ್ಟು ಉಪಾಹಾರ ಸವಿದರು.

ನಂತರ ವೀರಶೈವ ಸಮಾಜದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಟಿ.ಡಿ. ಸೋಮೇಶ್ ಅವರ ಮನೆಗೆ ಭೇಟಿ ನೀಡಿ, ಅಲ್ಲಿಂದ ಮುಗುಳುವಳ್ಳಿ ನಿರಂಜನ ಅವರ ಮನೆಗೆ ಭೇಟಿ ಕೊಟ್ಟರು. ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ, ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿಲ್ಲ.

ಸ್ವಾಭಿಮಾನಕ್ಕೆ ಚ್ಯುತಿಯಾಗಿರುವ ಪಕ್ಷದಲ್ಲಿ ಹೇಗೆ ಇರಲಿ ಎಂದು ಗ್ರಾಮಸ್ಥರ ಮುಂದೆ ನಿವೇದಿಸಿ ಕೊಂಡರು. ಅತ್ಯಂತ ಒಳ್ಳೆಯ ವ್ಯಕ್ತಿ ಎನಿಸಿಕೊಂಡಿರುವ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ನನ್ನಂತೆಯೇ ಪಕ್ಷದೊಳಗಿ ನವರೇ ಕಾಲೆಳೆದು ತುಳಿಯುವ ಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಡೀ ದಿನ ಬೆಳಿಗ್ಗೆಯಿಂದ ಯಡಿ ಯೂರಪ್ಪ ಜತೆಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ನಗರಸಭೆ ಸದಸ್ಯರಾದ ಎಚ್.ಡಿ.ತಮ್ಮಯ್ಯ, ಜಿ.ಪಂ. ಸದಸ್ಯ ಟಿ.ನಿರಂಜನ, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಇದ್ದರು.

 ಸಂಘದ ಹಿನ್ನೆಲೆಯಿರುವ ಕಟ್ಟಾ ಬಿಜೆಪಿಗರು ಮತ್ತು ಸಚಿವರ ಬೆಂಬಲಿಗರು ಯಡಿಯೂರಪ್ಪ ಬಳಿ ಸುಳಿಯದೇ, ಇಡೀ ಪ್ರವಾಸದಿಂದ ದೂರವೇ ಉಳಿದಿದ್ದು ಕಂಡುಬಂತು.

ಚಿಕ್ಕಮಗಳೂರು ಭಾಗದ ಮುಖಂಡರ ಮನೆಗಳ ಭೇಟಿ ಮುಗಿಸಿಕೊಂಡು, ಯಡಿಯೂರಪ್ಪ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಮನೆಯತ್ತ ಪಾದ ಬೆಳೆಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.