ADVERTISEMENT

‘ಅಡಿಕೆ ಬೆಳೆಗಾರರ ಜೀವನ ಕಸಿಯುವ ಉದ್ದೇಶವಿಲ್ಲ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 11:17 IST
Last Updated 19 ಮಾರ್ಚ್ 2014, 11:17 IST

ಕಡೂರು: ಕ್ಷೇತ್ರದ ಶಾಸಕನಾಗಿ ಎಲ್ಲರ ಹಿತದ ದೃಷ್ಟಿಯ ದೂರಾಲೋಚನೆ ಮಾಡುವ ಬದ್ಧತೆ ತಮಗಿದ್ದು ಅಡಿಕೆ ಬೆಳೆಗಾರರ ಹೊಟ್ಟೆಯ ಮೇಲೆ ಹೊಡೆಯುವ ಉದ್ದೇಶ ತಮಗಿಲ್ಲ ಎಂದು ಶಾಸಕ ವೈ.ಎಸ್‌.ವಿ.ದತ್ತ ಸ್ಪಷ್ಟಪಡಿಸಿದರು.

ಪಟ್ಟಣದ ವೀರಭದ್ರಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಮದಗದಕೆರೆ ಅಚ್ಚುಕಟ್ಟು ಭಾಗದ ರೈತರ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಮದಗದ ಕೆರೆ ಅಚ್ಚುಕಟ್ಟು ವ್ಯಾಪ್ತಿ ಮತ್ತು ನೀರು ನಿರ್ವಹಣೆಯ ಕುರಿತು ತಮಗೆ ಸಮಗ್ರ ಮಾಹಿತಿ ಇರಲಿಲ್ಲ ಎನ್ನುವುದನ್ನು ಒಪ್ಪುತ್ತೇನೆ, ಆದರೆ ಕಳೆದ ಶನಿವಾರ ದೇವನಕೆರೆ ತೂಬು ಮುಚ್ಚಿಸುವ ಘಟನೆ  ಈ ನೀರಾವರಿ ಸಮಸ್ಯೆಗೆ ಸ್ಪಷ್ಟ ಪರಿಹಾರ ರೂಪಿಸುವ ವೇದಿಕೆಗೆ ನಾಂದಿ ಹಾಡಿದ್ದು ಸತ್ಯ . ಮದಗದಕೆರೆ ಅಚ್ಚುಕಟ್ಟು ಪ್ರದೇಶ ವಾಸ್ತವವಾಗಿ ಎಷ್ಟು ಎನ್ನುವುದು ಸರ್ಕಾರಕ್ಕೇ ತಿಳಿಯದ ಮಾಹಿತಿಯಾಗಿದ್ದು, ರೈತರು ಮತ್ತು ಅಡಿಕೆ ಬೆಳೆಗಾರರ ಸಂಘ ಹೊಂದಿರುವ 1941ರಲ್ಲಿನ ಕೆರೆ ವ್ಯಾಪ್ತಿಯ ಚಿತ್ರಣಕ್ಕೂ ಮತ್ತು ಈಗಿನ ಚಿತ್ರಣಕ್ಕೂ ಸಾಕಷ್ಟು ಬದಲಾವಣೆ ಆಗಿದೆ ಎಂಬುದನ್ನು ಮೊದಲು ಅರಿಯಬೇಕು.

ಎಮ್ಮೆದೊಡ್ಡಿ ವ್ಯಾಪ್ತಿಯಲ್ಲಿ ಸುಮಾರು 8ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಎಂದು ಇದ್ದರೂ ನೀವೇ ಹೇಳುವ ಹಾಗೆ ಮದಗದಕೆರೆ ಸುಮಾರು 25ಸಾವಿರ ಎಕರೆ ಭೂಮಿಗೆ ನೀರುಣಿಸುತ್ತಿದೆ. ಇದರಲ್ಲಿ ಬಗರ್‌ಹುಕುಂ ಸಾಗುವಳಿದಾರರ ಸಂಖ್ಯೆ ಹೆಚ್ಚೇ ಇದೆ. ಈಗೇನೋ ಅವರು ಅಕ್ರಮ ಬಳಕೆದಾರರು, ಆದರೆ ನಾವೇ ಜನಪ್ರತಿನಿಧಿಗಳು ಅವರಿಗೆ ಸಾಗುವಳಿ ಚೀಟಿ ಕೊಡಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿ ಈಗಾಗಲೇ 450 ಜನರಿಗೆ ಸಾಗುವಳಿ ಚೀಟಿ ಕೊಡಲಾಗಿದೆ. ಮುಂದೆ ಎಲ್ಲರಿಗೂ ಸಾಗುವಳಿ ಚೀಟಿ ದೊರೆತರೆ ಸಾಂಪ್ರದಾಯಿಕ ಬೆಳೆಗಾರರ ಗತಿಏನು? ಆಗ ಎಲ್ಲರಿಗೂ ನೀರು ಕೊಡಲೇ ಬೇಕಾಗುತ್ತದೆ. ಈ ದೃಷ್ಟಿಯಿಂದ ಇಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ದೂರದೃಷ್ಟಿಯ ಯೋಜನೆ ರೂಪಿಸಬೇಕಾದ ಅಗತ್ಯವಿದೆ. ತಾಲ್ಲೂಕಿನ ಮದಗದಕೆರೆ, ಅಯ್ಯನಕೆರೆ ಸೇರಿದಂತೆ ಹಲವು ಕೆರೆಗಳಿಗೆ ಶಾಶ್ವತ ನೀರು ದೊರಕಿಸುವ ಹೆಬ್ಬೆ ತಿರುವು ಯೋಜನೆಗೆ ಆಡಳಿತಾತ್ಮಕ ಅನುಮೋದನೆ, ನೀರು ಅಳವಡಿಕೆ ಮತ್ತು 298ಕೋಟಿ ರೂ ಅಂದಾಜು ವೆಚ್ಚ ಎಂದು ನಿಗದಿಯಾಗಿದ್ದರೂ ಇಲ್ಲಿ ಯೋಜನೆ ಆರಂಭ ಅಥವಾ ಟೆಂಡರ್‌ ವೇಳೆ ಎದುರಾಗಬಹುದಾದ ಅರಣ್ಯ, ಪರಿಸರ ಇಲಾಖೆಗಳ ವಿರೋಧ ಮತ್ತು ಭೂಸ್ವಾಧೀನ ಕುರಿತು ಉಂಟಾಗಬಹುದಾದ ಸ್ಥಳೀಯ ರೈತರ ವಿರೋಧಗಳನ್ನು ಶಮನ ಮಾಡಬಹುದಾದ ಪಕ್ಷಾತೀತ ಪ್ರಯತ್ನ ಮತ್ತು ವೇದಿಕೆಯ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಚುನಾವಣೆ ಮುಗಿದ ಬಳಿಕ ಎಮ್ಮೆದೊಡ್ಡಿ ಭಾಗದ ಬಗರ್‌ಹುಕುಂ ಸಾಗುವಳಿದಾರರೂ ಸೇರಿದಂತೆ ಮದಗದಕೆರೆ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ರೈತರ ಸಭೆ ನಡೆಸಿ ಸೂಕ್ತ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳೋಣ. ಮದಗದಕೆರೆ ವ್ಯಾಪ್ತಿಯ ತೂಬುಗಳ ನಿರ್ವಹಣೆ ಸಣ್ಣನೀರಾವರಿ ಇಲಾಖೆ ಮಾಡಬೇಕೇ ಅಥವಾ ಅಡಿಕೆ ಬೆಳೆಗಾರರ ಸಂಘದವರೊಡನೆ ಸೇರಿ ಜಂಟಿ ನಿರ್ವಹಣೆ ಆಗಬೇಕೇ ಎಂಬುದೂ ಸ್ಪಷ್ಟವಾಗಬೇಕಿದೆ ಎಂದರು.

ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಮಾತನಾಡಿ, ಕೆರೆ ಅಚ್ಚುಕಟ್ಟು ಪ್ರದೇಶ 7586 ಎಕರೆ ಮಾತ್ರ ಇದೆ, ಆದರೆ ಬಗರ್‌ಹುಕುಂ ಬಳಕೆದಾರರೂ ಸೇರಿ 25ಸಾವಿರ ಎಕರೆ ಭೂಮಿಗೆ ಮದಗದಕೆರೆ ನೀರುಣಿಸುತ್ತಿದೆ. ಇಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಬಳಕೆದಾರರ ನಡುವೆ ಸಮನ್ವಯ ಸಾಧಿಸಿಯೇ ಅಡಿಕೆ ಬೆಳೆಗಾರರ ಸಂಘ ಹುಟ್ಟಿದ್ದು ಈ ಹಿಂದೆ ಜರ್ಮನ್‌ ಗೇಟ್‌ ವಾಲ್ವ್ ಸಿಸ್ಟಮ್‌ ಅಳವಡಿಸಿ ತೂಬುಗಳಿಂದ ನೀರು ನಿರ್ವಹಣೆ ನಡೆದಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ವ್ಯವಸ್ಥೆ ಹಾಳಾಗಿದೆ. ತೂಬುಗಳ ಸರಿಪಡಿಸುವಿಕೆಯತ್ತ ಸಣ್ಣನೀರಾವರಿ ಇಲಾಖೆಗೆ ಶಾಸಕರು ತಾಕೀತು ಮಾಡಬೇಕು. ಬಗರ್‌ಹುಕುಂ ಸಾಗುವಳಿದಾರರು  ಅಕ್ರಮ ಪಂಪ್‌ಸೆಟ್‌ ಅಳವಡಿಸಿ ನೀರು ಬಳಸುತ್ತಿದ್ದರೂ ಅವರ ಹಿತವನ್ನೂ ಪರಿಗಣಿಸಿ ಜುಲೈ ತಿಂಗಳಿನಿಂದ ನವೆಂಬರ್‌ ಅಂತ್ಯದವರೆಗೆ ಮೋಟರ್‌ ಅಳವಡಿಸಿ ಅವರು ನೀರು ಬಳಸಿಕೊಳ್ಳಲಿ, ಬಳಿಕ ಈ ವ್ಯವಸ್ಥೆಯನ್ನು ನಿಲ್ಲಿಸಬೇಕು. ಈ ಕುರಿತು ಸಣ್ಣ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

ಸಭೆಯಲ್ಲಿ ಅನೇಕ ರೈತರು ‘ಕೋಡಿಹಳ್ಳಿ ಗ್ರಾಮಸ್ಥರ ಮಾತು ಕೇಳಿ ಶಾಸಕರು ಏಕಾಏಕಿ ಕ್ರಮ ತೆಗೆದುಕೊಳ್ಳುವ ಬದಲು ಸಂಘದ ಗಮನಕ್ಕೆ ವಿಷಯ ತಂದು ಸ್ಪಷ್ಟನೆ ಕೇಳಬಹುದಿತ್ತು. ಬೆಳೆ ಒಣಗಿದರೆ ಆ ಒಂದು ವರ್ಷ ಮಾತ್ರ ರೈತನಿಗೆ ನಷ್ಟವಾಗಬಹುದು, ಆದರೆ ಜೀವಮಾನವಿಡೀ ಸವೆಸಿ ಬೆಳೆಸಿದ ತೋಟ ಒಣಗಿದರೆ ರೈತ ಬೀದಿಪಾಲಾಗುತ್ತಾನೆ. ಅಡಿಕೆ ಬೆಳೆಗಾರರೆಲ್ಲ  ಶ್ರೀಮಂತರು ಎಂಬ ತಪ್ಪುಕಲ್ಪನೆ ನಿಮಗಿರಬಹುದು, ಅರ್ಧ , ಮುಕ್ಕಾಲು ಎಕರೆ ತೋಟ ಇದ್ದು ಕೆರೆ ನೀರು ಸಿಗದಿದ್ದರೆ ಅಂತಹವರು ಎಲ್ಲಿಹೋಗಬೇಕು? ಸಾಲಮಾಡಿ ತೋಟ ಉಳಿಸಿಕೊಂಡವರು ಸಾಕಷ್ಟು ಮಂದಿ ಇದ್ದಾರೆ, ಕೋಡಿಹಳ್ಳಿ ವ್ಯಾಪ್ತಿಯಲ್ಲಿ ಕೆರೆ ನೀರು ಉಳಿಸಿ ಅನ್ನುವ ಹೋರಾಟ ಹೊರಗಿನಿಂದ ಬಂದ ಶುಂಠಿ ಬೆಳೆಗಾರರನ್ನು ಉಳಿಸಲು ನಡೆಸಿದ ಹುನ್ನಾರವೇ ಹೊರತು ಬೇರೇನಲ್ಲ, ಇಲ್ಲಿ ಅಕ್ರಮವಾಗಿ ಪಂಪ್‌ ಅಳವಡಿಸಿ ನೀರು ಹಾಯಿಸಲಾಗುತ್ತಿದೆ ಎಂದು ದೂರಿದರು.

ಬೀರೂರು ಅಡಿಕೆ ಬೆಳೆಗಾರರ ಸಂಗದ ಅಧ್ಯಕ್ಷ ಅರೆಕಲ್‌ ಕಾಂತರಾಜ್‌, ಕಡೂರು ಬೆಳೆಗಾರರ ಸಂಘದ ಶಿವಶಂಕರಪ್ಪ, ಅಡಿಕೆ ಬೆಳೆಗಾರರಾದ ಸತೀಶ್‌, ಕೆ.ಎಂ.ವಿನಾಯಕ, ರಾಜೇಂದ್ರ, ಶ್ರೀನಿವಾಸ್‌, ಮಲ್ಲಿಕಾರ್ಜುನಪ್ಪ,ಲಕ್ಷ್ಮಣ್‌, ರೇಣು­ಕಾ­ರಾಧ್ಯ, ಮುಂತಾದವರು ಮಾತನಾಡಿದರು.

ಕೆ.ಎಚ್‌.ಶಂಕರ್, ಕ್ಯಾತನಬೀಡು ರವೀಶ್‌, ಮಾರ್ಗದ ಸೋಮ­ಶೇಖರ್‌, ಕುಮಾರಸ್ವಾಮಿ, ಕೆ.ಎನ್‌.ಚಂದ್ರಶೇಖರ್‌, ಸುರೇಶ್‌, ಅರೆಕಲ್‌ ಪ್ರಕಾಶ್‌, ಸಿ.ಎಂ.ಚಂದ್ರಶೇಖರ್‌, ಡಾ.­ಶ್ರೀರಾಮ್, ಬಿ.ಆರ್‌.ಕುಮಾರಸ್ವಾಮಿ, ಎಚ್‌.ವಿ.­ಗಿರೀಶ್‌, ನಲ್ಲೂರಿ ಸುರೇಶ್‌, ಕುಮಾರರಾವ್‌, ಶರತ್‌ ಸೇರಿದಂತೆ ನೂರಾರು ರೈತರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.