ADVERTISEMENT

‘ಕೊನೆಯವರೆಗೂ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಹೋರಾಟ’

ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ದೇವೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 9:50 IST
Last Updated 1 ಜನವರಿ 2014, 9:50 IST
ಕಿಡಿಗೇಡಿಗಳ ದುಷ್ಕೃತ್ಯಕ್ಕೀಡಾದ ಚಿಕ್ಕಮಗಳೂರು ನಗರದ ಶರೀಫ್‌ ಗಲ್ಲಿಯ ಪ್ರಾರ್ಥನಾ ಮಂದಿರಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಮಂಗಳವಾರ ಭೇಟಿ ನೀಡಿದರು. ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಅಜೀಂ ಇನ್ನಿತರರು ಇದ್ದರು.
ಕಿಡಿಗೇಡಿಗಳ ದುಷ್ಕೃತ್ಯಕ್ಕೀಡಾದ ಚಿಕ್ಕಮಗಳೂರು ನಗರದ ಶರೀಫ್‌ ಗಲ್ಲಿಯ ಪ್ರಾರ್ಥನಾ ಮಂದಿರಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಮಂಗಳವಾರ ಭೇಟಿ ನೀಡಿದರು. ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಅಜೀಂ ಇನ್ನಿತರರು ಇದ್ದರು.   

ಚಿಕ್ಕಮಗಳೂರು: ನಗರದಲ್ಲಿ ನಡೆದಿರುವ ಅಹಿತಕರ ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಮತ್ತು ಘಟನೆ ನಿಭಾಯಿಸಲು ವಿಫಲರಾದ ಅಧಿಕಾರಿಗಳನ್ನು ಅಮಾನತು­ಪಡಿಸ­ಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಆಗ್ರಹಿಸಿದ್ದಾರೆ.

ಕಿಡಿಗೇಡಿಗಳ ದುಷ್ಕೃತ್ಯಕ್ಕೀಡಾದ ನಗರದ ಶರೀಫ್‌ ಗಲ್ಲಿಯ ಪ್ರಾರ್ಥನಾ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದಿರುವ ಕೋಮುಗಲಭೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೇ ಮೂಲ ಕಾರಣ ಕರ್ತರು. ಈ ಎರಡು ಪಕ್ಷಗಳು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಇದೇ ಗೋಳು. ಈ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಎರಡೂ ಪಕ್ಷಗಳು ಘಟನೆಯಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ. ನನ್ನ ಕೊನೆ ಉಸಿರು ಇರುವವರೆಗೂ ಈ ಪಕ್ಷಗಳ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಗುಡುಗಿದರು, ಘಟನೆ ಖಂಡಿಸಿ ಶಾಂತಿ­ಯುತ ಮೆರವಣಿಗೆ ನಡೆಸಲು ಮುಸ್ಲಿಂ ಸಮು­ದಾಯಕ್ಕೆ ಅನುಮತಿ ನೀಡಿ, ಅತ್ತಲಿಂದ ಬಜರಂಗ­ದಳದವರಿಗೆ ಮೆರವಣಿಗೆ ನಡೆಸಲು ಅವಕಾಶ ನೀಡಿ­ದ್ದೇಕೆ? ಎಂದು ಪ್ರಶ್ನಿಸಿದ ಅವರು, ಬಜರಂಗದಳ­ದವರು ಎದುರಾಗಿ ಬಂದಿದ್ದರಿಂದಲೇ ಸಂಘರ್ಷ ಪ್ರಾರಂಭ­ವಾಗಿದೆ.

ಪೊಲೀಸರು ಮುಸ್ಲಿಂ ಜನಾಂಗ­ದ­ವ­ರನ್ನೇ ಗುರಿಯಾಗಿಸಿ ಬಲವಾದ ಪೆಟ್ಟು ಕೊಟ್ಟಿ­ದ್ದಾರೆ. ಅಮಾಯಕರ ಮೈ, ಕೈಗಳಿಗೆ ಮತ್ತು ತಲೆಗೆ ತೀವ್ರತ­ರವಾದ ಪೆಟ್ಟು ಬಿದ್ದಿವೆ. ಪೂಜಾ ಮಂದಿ­ರಕ್ಕೂ ಪೊಲೀಸರು ಬೂಟು ಕಾಲಿನಲ್ಲಿ ನುಗ್ಗಿದ್ದಾರೆ. ಧರ್ಮ ಗುರುಗಳನ್ನು ಬಿಡದೆ ಹೊರಗೆ ಎಳೆತಂದು ಹೊಡೆದಿದ್ದಾರೆ ಎಂದು ದೂರಿ­ದರು.ಲಾಠಿ ಪ್ರಹಾರ ಘಟನೆಯಲ್ಲಿ ಒಬ್ಬನೇ ಒಬ್ಬ ಹಿಂದೂಗಳಿಗೆ ಏಕೆ ಪೆಟ್ಟು ಬಿದ್ದಿಲ್ಲ? ಎಂದು ಪ್ರಶ್ನಿ­ಸಿದ ಗೌಡರು, ಈ ಘಟನೆ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳಾ­ದರೂ ವಿಚಾರಣೆಗೆ ಆದೇಶಿಸಿ, ತಪ್ಪಿತಸ್ಥ ಅಧಿ­ಕಾರಿಗಳನ್ನು ಅಮಾನತುಪಡಿಸ­ಬೇಕಿತ್ತು.

ADVERTISEMENT

ಮುಖ್ಯ­ಮಂತ್ರಿ ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೆ? ರಾಜ್ಯದ ಗೃಹ ಸಚಿವರು ಅಲ್ಪಸಂಖ್ಯಾತ ಸಮುದಾ­ಯದವರೇ ಇದ್ದಾರೆ. ಇಲ್ಲಿ ಏನು ನಡೆದಿದೆ ಎನ್ನು­ವುದನ್ನು ತಿಳಿದುಕೊ­ಳ್ಳುವ ಸೌಜನ್ಯಕ್ಕಾದರೂ ಭೇಟಿ ನೀಡಬೇಕಿತ್ತಲ್ಲವೇ? ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಹರಿಹಾಯ್ದರು. ಯಾರಿ­ಗೂ ಪ್ರಚೋದನೆ ನೀಡಲು ನಾನು ಜಿಲ್ಲೆಗೆ ಬಂದಿಲ್ಲ. ನಾನು ಕೂಡ ಈ ಜಿಲ್ಲೆಯ ಜನಪ್ರತಿನಿಧಿ. ಯಾವು­ದೇ ಸರ್ಕಾರ­ವಿರಲಿ, ಇಂತಹ ಘಟನೆಗಳಿಗೆ ಆಸ್ಪದ ನೀಡಬಾ­ರದು.

ನಮ್ಮದು ಶಾಂತಿಪ್ರಿಯ ರಾಜ್ಯ. ಮೋದಿ ಹೆಸರು ಹೇಳಿದರೆ ಓಟು ಕೊಡುತ್ತಾರೆ ಎನ್ನುವ ಭಾವನೆ ಬೇಡ. ಅದೇ ಭಾವನೆಯಲ್ಲಿದ್ದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಮೋದಿ ಏನು ಭೂತ­ಗನ್ನಡಿ­ಯಲ್ಲ ಎಂದು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು. ಎಂ.ಜಿ. ರಸ್ತೆಯಲ್ಲಿ ಒಂದು ಸಮು­ದಾಯದ ಅಂಗಡಿಗಳನ್ನು ಗುರಿಯಾಗಿಸಿ, ಮಾಲೀ­ಕರ ಮೇಲೆ ಹಲ್ಲೆ ಮಾಡಿ, ಬಲವಂತದಿಂದ ಬಾಗಿಲು ಮುಚ್ಚಿಸಿದ ಬಗ್ಗೆ ಪ್ರಶ್ನಿಸಿದಾಗ, ಕ್ರಮ ಕೈ­ಗೊಳ್ಳಲು ಪೊಲೀಸರು ಇರಲಿಲ್ಲವೇ? ಪೊಲೀಸರು ಏನು ಮಾಡುತ್ತಿದ್ದರು? ಬಜರಂಗದಳವರು ಏಕೆ ಬರಬೇಕಿತ್ತು? ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಅವರನ್ನು ಈ ಕೆಲಸಕ್ಕೆ ನೇಮಕ ಮಾಡಿದೆಯೇ? ಎಂದು ದೇವೇಗೌಡರು ಕಟುವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.