ನರಸಿಂಹರಾಜಪುರ: ದೃಷ್ಟಿಕಲ್ಲು ಮಾರಿಗದ್ದುಗೆ ವ್ಯಾಪ್ತಿಯಲ್ಲಿ ಸಮುದಾಯ ಭವನ, ತಡೆಗೋಡೆ ನಿರ್ಮಾಣ, ಇಂಟರ್‌ಲಾಕ್ ಅಳವಡಿಕೆಗೆ ₹25 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಸುಂಕದಕಟ್ಟೆಯ ದೃಷ್ಟಿಕಲ್ಲು ಮಾರಿಗದ್ದುಗೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಭವನವನ್ನು ಸೋಮವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದಾಗ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸದರಿ ಸ್ಥಳದಲ್ಲಿ ಸಮುದಾಯ ಭವನ ಹಾಗೂ ಇತರೆ ಸೌಲಭ್ಯ ಒದಗಿಸಲು ₹25 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರ ಬದಲಾಗುತ್ತಿದ್ದಂತೆ ಸ್ವಾರ್ಥ ರಾಜಕಾರಣಕ್ಕೆ ಅನುದಾನ ತಡೆಹಿಡಿಯಲಾಯಿತು. ದೇವಿಯ ಆಶೀರ್ವಾದದಿಂದ ಪುನಃ ಶಾಸಕನಾಗಿ ಆಯ್ಕೆಯಾಗಿ ಬಂದಿದ್ದರಿಂದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪಟ್ಟಣದ ಪಂಚಾಯಿತಿಯ ಸಹಕಾರದಿಂದ ಮಾರಿಕಾಂಬ ಗದ್ದುಗೆಗೆ ಅಸೆಸ್ ಮೆಂಟ್ ಮಾಡಿಕೊಟ್ಟಿದ್ದರಿಂದ ಅನುದಾನ ನೀಡಿ, ಅಭಿವೃದ್ಧಿ ಪಡಿಸಲು ಸಹಕಾರಿಯಾಯಿತು. ಮಾರಿಕಾಂಬ ದೇವಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುತ್ತಾ ಬಂದಿದ್ದಾಳೆ. ಮಾರಿಕಾಂಬ ಜಾತ್ರೋತ್ಸವ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ್ದು ಸರ್ವಧರ್ಮಿಯರ ಸಹಕಾರದಿಂದ ನಡೆದುಕೊಂಡು ಬರುತ್ತಿದೆ ಎಂದರು.
ಕೋಟೆ ಮಾರಿಕಾಂಬ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಮಾರಿಕಾಂಬ ದೇವಿಯ ವಿಗ್ರಹವನ್ನು ಹಲಸಿನ ಮರದ ಕೆಳಗೆ ಕೆತ್ತನೆ ಮಾಡುವ ಸ್ಥಿತಿಯಿತ್ತು. ಶಾಸಕರು ಅನುದಾನ ನೀಡಿದ್ದರಿಂದ ಸಮುದಾಯ ಭವನ ನಿರ್ಮಾಣಗೊಂಡಿದ್ದು ಅನುಕೂಲವಾಯಿತು ಎಂದರು.
ಪಟ್ಟಣ ಪಂಚಾಯಿತಿ 8ನೇ ವಾರ್ಡ್‌ನ ಸದಸ್ಯ ಮುಕುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಉಪಾಧ್ಯಕ್ಷೆ ಉಮಾ ಕೇಶವ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯ ಪಿ.ಜೆ.ಶೋಜಾ, ಸುಂಕದಕಟ್ಟೆ ಗದ್ದುಗೆ ಸಮಿತಿಯ ಕೃಷ್ಣಯ್ಯ ಆಚಾರ್ಯ, ಅಂಬೇಡ್ಕರ ನಗರ ಸಮಿತಿಯ ರವಿಶಂಕರ್, ಅಭಿನವ ಗಿರಿರಾಜ್, ಬಾನು ಶಿವರಾಜ್ ಇದ್ದರು.
ಶಾಸಕ ಟಿ.ಡಿ.ರಾಜೇಗೌಡ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಕೋಟೆ ಮಾರಿಕಾಂಬ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಹಾಗೂ ಪ.ಪಂ. ಸದಸ್ಯರನ್ನು ಸಮಿತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.