ADVERTISEMENT

ನಿಯಮ ಉಲ್ಲಂಘನೆ ತಡೆಗೆ ಎ.ಐ ಕ್ಯಾಮೆರಾ

ಹೆಲ್ಮೆಟ್‌ ಧರಿಸದ, ಸೀಟ್‌ ಬೆಲ್ಟ್‌ ಹಾಕದ ಚಾಲಕರಿಗೆ ‘ಆನ್‌ಲೈನ್’ ದಂಡ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 7:00 IST
Last Updated 25 ಜೂನ್ 2025, 7:00 IST
ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಈಗಾಗಲೇ ಅಳವಡಿಕೆಯಾಗಿರುವ ಕ್ಯಾಮೆರಾಗಳು
ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಈಗಾಗಲೇ ಅಳವಡಿಕೆಯಾಗಿರುವ ಕ್ಯಾಮೆರಾಗಳು   

ಚಿಕ್ಕಮಗಳೂರು: ಸಂಚಾರ ನಿಯಮ ಉಲ್ಲಂಘನೆ ತಡೆಯಲು ಪೊಲೀಸ್ ಇಲಾಖೆ ಕೃತಕ ಬುದ್ಧಿಮತೆ (ಎ.ಐ) ಬಳಸಿಕೊಳ್ಳಲು ಮುಂದಾಗಿದೆ. ಐ.ಎ ಆಧರಿತ ಕ್ಯಾಮೆರಾಗಳನ್ನು ನಗರದ 47 ಕಡೆಗಳಲ್ಲಿ ಅಳವಡಿಸಲು ತಯಾರಿ ನಡೆಸಿದೆ.

ರಸ್ತೆಯಲ್ಲಿ ಪೊಲೀಸರು ಕಾಣಿಸುತ್ತಿಲ್ಲ ಎಂಬ ಕಾರಣಕ್ಕೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು, ಸೀಟ್ ಬೆಲ್ಟ್‌ ಹಾಕದೆ ವಾಹನ ಚಾಲನೆ ಮಾಡುವುದು, ಬೈಕ್‌ನಲ್ಲಿ ಮೂರು ಜನ ಸಾಗಿದರೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದರೆ ಇನ್ಮುಂದೆ ದಂಡ ಬೀಳಲಿದೆ.

ಸಂಚಾರ ಪೊಲೀಸರು ಎಲ್ಲಿ ನಿಲ್ಲುತ್ತಾರೆ, ಎಲ್ಲಿ ತಪಾಸಣೆ ನಡೆಸುತ್ತಾರೆ ಎಂಬುದು ಗೊತ್ತಿರುವ ವಾಹನ ಚಾಲಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು, ಸಂಚಾರ ನಿಯಮ ಉಲ್ಲಂಘಿಸುವುದು ಸಾಮಾನ್ಯ. ಆದರೆ, ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಿಕ್ಕಿ ಬೀಳಲಿದ್ದಾರೆ. ಸಂಚಾರ ಪೊಲೀಸರು ಇಲ್ಲದಿದ್ದರೂ ಅವರ ಕೆಲಸವನ್ನು ಎ.ಐ ಆಧರಿತ ಕ್ಯಾಮೆರಾಗಳು ನಿರ್ವಹಿಸಲಿವೆ. 

ADVERTISEMENT

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಚಿಕ್ಕಮಗಳೂರು ನಗರದಲ್ಲೂ ಎ.ಐ ಬಳಕೆ ಮಾಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಪ್ರತಿನಿತ್ಯ ರಾಜ್ಯ, ಹೊರ ರಾಜ್ಯಗಳಿಂದಲೂ ಸಾವಿರಾರು ಪ್ರವಾಸಿಗರು‌ ನಗರಕ್ಕೆ ಬಂದು ಹೋಗುತ್ತಿದ್ದಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತಿದೆ.

ಆದ್ದರಿಂದ ಸಂಚಾರ ವ್ಯವಸ್ಥೆ ನಿರ್ವಹಿಸಲು ಮತ್ತು ಅಪರಾಧ ಪ್ರಕರಣ ತಡೆಗಟ್ಟಲು ಮುಂದಾಗಿದೆ. ಧಾರ್ಮಿಕವಾಗಿ ಸೂಕ್ಷ್ಮ ತಾಣ ಆಗಿರುವುದರಿಂದ ಪ್ರತಿಭಟನೆ ಸಂದರ್ಭಗಳಲ್ಲೂ ನಿಗಾ ವಹಿಸಲು ಈ ಕ್ಯಾಮೆರಾಗಳು ಅನುಕೂಲ ಆಗಿಲಿವೆ. ಆಜಾದ್ ಪಾರ್ಕ್ ಸೇರಿ ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 47 ಪ್ರದೇಶಗಳನ್ನು ಪೊಲೀಸ್ ಇಲಾಖೆ ಈಗಾಗಲೇ ಗುರುತಿಸಿದೆ.

ಎರಡು ಹಂತದಲ್ಲಿ ಎ.ಐ ಕ್ಯಾಮೆರಾ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಕೊಡಿಸಿರುವ ಕೆಪಿಟಿಸಿಎಲ್ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅನುದಾನ ₹1.75 ಕೋಟಿಯಲ್ಲಿ ಈ‌ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಮೊದಲ ಹಂತದಲ್ಲಿ 25 ಕ್ಯಾಮೆರಾ ಅಳವಡಿಕೆಯಾಗಲಿದ್ದು ಇದಕ್ಕಾಗಿ ಎಜೆನ್ಸಿ ಕೂಡ ನಿಗದಿಯಾಗಿದೆ. ಎರಡನೇ ಹಂತದಲ್ಲಿ 22 ಕ್ಯಾಮೆರಾ ಸಾಫ್ಟ್‌ವೇರ್ ಎಸ್ಪಿ ಕಚೇರಿಯಲ್ಲಿ ಕಮಾಂಡ್ ಸೆಂಟರ್ ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎ.ಐ ಕ್ಯಾಮೆರಾದಲ್ಲಿ ಮಾಹಿತಿ ಲಭ್ಯ

ಈ ಕ್ಯಾಮರಾ ಇರುವ ಸ್ಥಳದಲ್ಲಿ ಯಾವುದೇ ಅಪಘಾತ ಅಪರಾಧ ಪ್ರಕರಣಗಳು ನಡೆದರೆ ಎ.ಐ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅನುಮಾನಾಸ್ಪದ ವ್ಯಕ್ತಿ ಎನಿಸಿದರೆ ಆ ಚಿತ್ರವನ್ನು ಎಸ್‌ಪಿ ಕಚೇರಿಯಲ್ಲಿ ಕಮಾಂಡ್ ಕೇಂದ್ರದಲ್ಲಿ ಹೆಚ್ಚಿನ ತಪಾಸಣೆಗೆ ಒಳಪಡಿಸಿದರೆ ಇಡೀ ದಿನ ಸಂಚರಿಸಿದ ಸ್ಥಳದ ಮಾಹಿತಿ ಸಿಗಲಿದೆ. ಸಂಚಾರ ಉಲ್ಲಂಘನೆ ಮಾಡಿ ಹೊರ ಜಿಲ್ಲೆಗೆ ಹೋಗುವ ಪ್ರವಾಸಿಗರಿಗೆ ಸಾರಿಗೆ ಇಲಾಖೆ ಮೂಲಕ ನೇರವಾಗಿ ನೋಟಿಸ್ ತಲುಪಲಿದೆ. ತಿಂಗಳ ಹಿಂದೆ ನಿಯಮ ಉಲ್ಲಂಘಿಸಿ ಹೋದ ವ್ಯಕ್ತಿ ಮತ್ತೆ ನಗರ ಪ್ರವೇಶಿಸಿದ ಕೂಡಲೇ ಪೊಲೀಸರಿಗೆ ಎ.ಐ. ಕ್ಯಾಮೆರಾಗಳು ಸಂದೇಶ ರವಾನೆ ಮಾಡಲಿವೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.