ADVERTISEMENT

ಮನೆಗಳ್ಳತನ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:15 IST
Last Updated 16 ಏಪ್ರಿಲ್ 2025, 14:15 IST
ಮೂಡಿಗೆರೆ ತಾಲ್ಲೂಕಿನ ಬೆಟ್ಟದಮನೆ ಕೈಮರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಗೋಣಿಬೀಡು ಪೊಲೀಸರು ಕಳುವಾಗಿದ್ದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ
ಮೂಡಿಗೆರೆ ತಾಲ್ಲೂಕಿನ ಬೆಟ್ಟದಮನೆ ಕೈಮರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಗೋಣಿಬೀಡು ಪೊಲೀಸರು ಕಳುವಾಗಿದ್ದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ   

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಪೊಲೀಸ್‌ ಠಾಣೆ ವ್ಯಾಪ್ತಿಯ ಬೆಟ್ಟದಮನೆ ಗ್ರಾಮದ ಕೈಮರದಲ್ಲಿ ನಡೆದಿದ್ದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಪೊಲೀಸರು ಸಂಜಯ್‌ ಆಲಿಯಾಸ್‌ ಹನುಮಂತ ಎಂಬಾತನನ್ನು ಬಂಧಿಸಿ, ಕಳುವಾಗಿದ್ದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬೆಟ್ಟದಮನೆ ಗ್ರಾಮದ ಕೈಮರದಲ್ಲಿ ಏ. 2ರಂದು ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಲಾಗಿತ್ತು. ಸಿಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿ ಆಧಾರದಲ್ಲಿ ಆರೋಪಿಯನ್ನು  ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದು, ಆತನಿಂದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿಯವನಾಗಿದ್ದು, ತಾಲ್ಲೂಕಿನ ಹಂಡುಗುಳಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಯಾರೂ ಇಲ್ಲದ ಮನೆಗಳನ್ನು ಪತ್ತೆಹಚ್ಚಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದನು. ಅದರಂತೆ ಕೈಮರದಲ್ಲಿದ್ದ ಮಹಿಳೆಯೊಬ್ಬರ ಮನೆಯನ್ನು ಗುರುತಿಸಿಕೊಂಡು, ಆ ಮಹಿಳೆ ಮನೆಯಲ್ಲಿಲ್ಲದ ಸಮಯದಲ್ಲಿ ಮನೆ ಬೀಗ ಮುರಿದು ಕಳುವು ಮಾಡಿದ್ದನು. ಕಳವು ಮಾಡಿದ ₹5.52 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಿಜಯನಗರ ಜಿಲ್ಲೆಯ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿ. ರಾಜಶೇಖರ್, ಗೋಣಿಬೀಡು ಠಾಣೆಯ ಪೊಲೀಸ್‌ ಸಬ್‌ ಇನ್‌‌ಸ್ಪೆಕ್ಟರ್‌ ಎಚ್.ಕೆ. ಹರ್ಷವರ್ಧನ್, ಸಿಬ್ಬಂದಿ ಸುನಿಲ್ ನಾಯ್ಕ, ಸಚಿನ್, ಮನು ಕೆ.ಎಸ್, ಕಾಳೀರಯ್ಯ, ಪ್ರದೀಪ್ ಹಾಗೂ ಪಾಲಾಕ್ಷ ಕಾರ್ಯಾಚರಣೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.