ADVERTISEMENT

ಗ್ರಾಮ ಸ್ವಚ್ಛತೆಗೆ ಜಾಗೃತಿಯೇ ಮದ್ದು: ಶಾಸಕ ಜಿ.ಎಚ್‌. ಶ್ರೀನಿವಾಸ್‌

ಹೊಸಳ್ಳಿ ಗ್ರಾಮದಲ್ಲಿ ಗ್ರಾಮೀಣ ಶಿಬಿರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:03 IST
Last Updated 11 ಜೂನ್ 2025, 14:03 IST
ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ತರೀಕೆರೆ ತಾಲ್ಲೂಕಿನ ನಂದಿ ಹೊಸಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಶಿಬಿರವನ್ನು ಶಾಸಕ ಜಿ.ಎಚ್. ಶ್ರೀನಿವಾಸ್‌ ಉದ್ಘಾಟಿಸಿದರು
ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ತರೀಕೆರೆ ತಾಲ್ಲೂಕಿನ ನಂದಿ ಹೊಸಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಶಿಬಿರವನ್ನು ಶಾಸಕ ಜಿ.ಎಚ್. ಶ್ರೀನಿವಾಸ್‌ ಉದ್ಘಾಟಿಸಿದರು   

ತರೀಕೆರೆ: ‘ಗ್ರಾಮೀಣ ಭಾಗದಲ್ಲೂ ಸ್ವಚ್ಛತೆಯ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಜನರು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಶಾಸಕ ಜಿ.ಎಚ್‌. ಶ್ರೀನಿವಾಸ್‌ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ವತಿಯಿಂದ ನಂದಿ ಹೊಸಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಶಿಬಿರದಲ್ಲಿ ಅವರು ಮಾತನಾಡಿದರು.

ಗ್ರಾಮಗಳು ಇಂದು ಸರ್ವತೋಮುಖ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೂ, ಸ್ವಚ್ಛತೆಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವ ಮನೋಭಾವ ಕಾಣುತ್ತಿದ್ದೇವೆ. ಚರಂಡಿ ಸ್ವಚ್ಛತೆ ಸೇರಿದಂತೆ ಎಲ್ಲ ಕಾರ್ಯವನ್ನೂ ಗ್ರಾಮ ಪಂಚಾಯಿತಿಗಳೇ ಮಾಡಬೇಕು ಎಂಬ ಧೋರಣೆ ಸರಿಯಲ್ಲ. ಕಸ ನಿರ್ವಹಣೆ, ಸ್ವಚ್ಛತೆಯ ಕಾರ್ಯದಲ್ಲಿ ಗ್ರಾಮ ಆಡಳಿತದ ಜತೆಗೆ ಜನರು ಸಹ ಕೈಜೋಡಿಸಬೇಕು. ಆಗ ಮಾತ್ರ ಗ್ರಾಮಗಳ ಪ್ರಗತಿ ಸಾಧ್ಯ ಎಂದರು.

ADVERTISEMENT

ಭಾರತದಲ್ಲಿ ಮೇಘಾಲಯ ರಾಜ್ಯ ಸ್ವಚ್ಛತೆಯ ನಿರ್ವಹಣೆಯಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಕರ್ನಾಟಕದಲ್ಲೂ ಗ್ರಾಮ ಸ್ವಚ್ಛತೆಯ ಅರಿವು ಮೂಡುತ್ತಿದೆ. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮ ತಮ್ಮ ಭಾಗದ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ತರೀಕೆರೆ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಸಂಚಾಲಕ ಪಿ.ವಿ. ಓಂಕಾರಮೂರ್ತಿ ಮಾತನಾಡಿ, ಅಫೀಮು, ಗುಟ್ಕಾ, ಬೀಡಿ, ಸಿಗರೇಟು ಸೇವನೆ ಸೇರಿದಂತೆ ಮಾದಕ ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಧನುಷ್‌ ಗಾರ್ಗಿ ಮಾತನಾಡಿ, ಉತ್ತಮ ಆರೋಗ್ಯದ ಜತೆಗೆ ಉತ್ತಮ ಆಲೋಚನೆಗಳೂ ಸಮಾಜ ಸ್ವಾಸ್ಥ್ಯವನ್ನು ಹೆಚ್ಚಿಸುತ್ತವೆ. ಪ್ರತಿಯೊಬ್ಬರೂ ಉತ್ತಮ ನಡವಳಿಕೆ ಅಳವಡಿಸಿಕೊಳ್ಳುವ ಜತೆಗೆ, ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕಬೇಕು ಎಂದು ಸಲಹೆ ನೀಡಿದರು.

ಸುಣ್ಣದಹಳ್ಳಿ ಗ್ರಾ.ಪಂ. ಸದಸ್ಯ ಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಲಿಂಗದಹಳ್ಳಿ ಹೋಬಳಿ ಅಧ್ಯಕ್ಷ ತಮ್ಮಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ದೇವೇಂದ್ರ ಮೂರ್ತಿ, ಶಿಕ್ಷಕ ಮಲ್ಲೇಶ್, ಆಶಾ ಕಾರ್ಯಕರ್ತೆ ನಾಗಮ್ಮ, ಗಾಯಕರಾದ ಲೋಕೇಶ್ ಭಕ್ತನಕಟ್ಟೆ, ಸತೀಶ್ ಕಾಟಿಗನರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.