ಕಳಸ:ಸಂಪೂರ್ಣ ಶಿಲಾಮಯವಾಗಿ ನಿರ್ಮಾಣವಾಗಿರುವ ಇಲ್ಲಿನ ಶ್ರೀಚಂದ್ರನಾಥ ಬಸದಿಯ ಪಂಚಕಲ್ಯಾಣ ಭಾನುವಾರದಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಭರದ ಸಿದ್ಧತೆ ಸಾಗಿದೆ.
ನಾಲ್ಕು ವರ್ಷಗಳ ಸತತ ಪರಿಶ್ರಮದ ನಂತರ ಬಸದಿಯ ಕೆಲಸ ಪೂರ್ಣಗೊಂಡಿದೆ. ಧಾಮ ಸಂಪ್ರೋಕ್ಷಣೆ ಮತ್ತು ಪಂಚಕಲ್ಯಾಣ ಗುರುವಾರದವರೆಗೆ 5 ದಿನಗಳ ಕಾಲ ಅದ್ದೂರಿಯಿಂದ ನೆರವೇರಲಿದೆ.
ಕಳಸ ಸೀಮೆಯ ಎಂಟು ಗ್ರಾಮಗಳ ಜೈನರ ಪಾಲಿಗೆ ರಾಜಧಾನಿ ಆಗಿದ್ದ ಕಳಸದ ಬಸದಿಯ ಜೊತೆಗೆ 9 ಸಾವಿರಕ್ಕೂ ಅಧಿಕ ಜೈನರು ನೇರ ಸಂಬಂಧ ಹೊಂದಿದ್ದಾರೆ.
ಜೀವಿತಾವಧಿಯಲ್ಲಿ ಇಂತಹ ಪುಣ್ಯಕಾರ್ಯದಲ್ಲಿ ಭಾಗವಹಿಸುವ ಅವಕಾಶ ಒಮ್ಮೆ ಮಾತ್ರ ಸಿಗುವ ಕಾರಣ ಜೈನ ಧರ್ಮೀಯರು ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಸಹಜವಾಗಿಯೇ ಪುಳಕಗೊಂಡಿದ್ದಾರೆ.
ಈ ಪಂಚಕಲ್ಯಾಣದ ನೇತೃತ್ವ ವಹಿಸಲು ಗುಣಭದ್ರ ನಂದಿ ಮುನಿಗಳು ಆಗಮಿಸಿದ್ದಾರೆ.
ಪ್ರಸಂಗಸಾಗರ ಮುನಿಗಳು ಮತ್ತು ಅನೇಕ ಜೈನ ಮಠಾಧೀಶರು ಪಂಚಕಲ್ಯಾಣದಲ್ಲಿ ಭಾಗವಹಿಸಲಿದ್ದಾರೆ.
'2021ರಲ್ಲಿ ಬಸದಿ ನಿರ್ಮಾಣ ಪ್ರಾರಂಭವಾಗಿ ಚಂದ್ರನಾಥ ಬಸದಿ ಜೊತೆಗೆ ಮಾನಸ್ತಂಭ, ಕ್ಷೇತ್ರಪಾಲ, ಚಂದ್ರಶಾಲೆ ಮತ್ತು ಧರ್ಮದೇವತೆಗಳ ಗುಡಿ ಹಾಗೂ ಕಳಸ ಕಾರ್ಕಳ ಮಠದ ಶಾಖೆಯನ್ನು ನಿರ್ಮಿಸಲಾಗಿದೆ' ಎಂದು ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರ ತಿಳಿಸಿದರು.
ಬಸದಿಯ ಆಸುಪಾಸಿನಲ್ಲಿ ಕಳೆದ ವಾರದಿಂದ ಭಕ್ತರು ಶ್ರಮದಾನದ ಮೂಲಕ ಕೊನೆ ಕ್ಷಣದ ಸ್ವಚ್ಛತೆ, ಸಿದ್ಧತೆ ನಡೆಸಿದ್ದಾರೆ. 'ದೀರ್ಘ ಕಾಲದ ಕಾಯುವಿಕೆ ನಂತರ ಬಸದಿ ಪಂಚಕಲ್ಯಾಣಕ್ಕೆ ಕಾಲ ಕೂಡಿ ಬಂದಿದೆ. ಆದ್ದರಿಂದ ನಮ್ಮಲ್ಲಿ ಹುಮ್ಮಸ್ಸು ದುಪ್ಪಟ್ಟಾಗಿದೆ' ಎನ್ನುತ್ತಾರೆ ಇಲ್ಲಿನ ಜೈನರು.
ಕಳಸದ ಜೊತೆಗೆ ಮೇಗುಂದ, ಬಲಿಗೆ, ಚಿಕ್ಕನಕೊಡಿಗೆ, ಹೊರನಾಡು, ಎಳನೀರು, ಸಂಸೆ, ಮರಸಣಿಗೆ, ಹಿರೇಬೈಲು, ಇಡಕಣಿ, ಹೆಮ್ಮಕ್ಕಿ, ಗುಮ್ಮಿನಕಾಡು, ಜಾಂಬಳೆ, ಕುದುರೆಮುಖ, ಕಳಕೋಡು ಪ್ರದೇಶದ ಜೈನರು ಪಂಚಕಲ್ಯಾಣದ ವಿಧಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಂದ್ರನಾಥ ಮತ್ತು ಪಾರ್ಶ್ವನಾಥ ತೀರ್ಥಂಕರರ ಗರ್ಭಾವತರಣ, ಜನ್ಮ ಕಲ್ಯಾಣ, ದೀಕ್ಷಾ ಕಲ್ಯಾಣ, ವೈರಾಗ್ಯ, ಮೋಕ್ಷ ಮತ್ತು ಕೇವಲ ಜ್ಞಾನ ಕಲ್ಯಾಣದ ವಿಧಿಗಳು ಐದು ದಿನಗಳೂ ನಡೆಯಲಿವೆ. ಈ ಕಾರ್ಯ ನೆರವೇರಿಸಲು ಅರ್ಚಕರ ದಂಡೇ ಕಳಸಕ್ಕೆ ಬಂದಿದೆ.
ಸುತ್ತಮುತ್ತಲಿನ ಗ್ರಾಮಸ್ಥರು ಹಸಿರು ಕಾಣಿಕೆ ರೂಪದಲ್ಲಿ ಬಸದಿಗೆ ತರಕಾರಿ, ಧಾನ್ಯ ಫಲ ವಸ್ತುಗಳ ಸಮರ್ಪಣೆ ಮಾಡಿದ್ದಾರೆ. ಜೀರ್ಣೋದ್ಧಾರ ಸಮಿತಿ ಪಂಚಕಲ್ಯಾಣದ ವಿಧಿಗಳಿಗೆ ಅಗತ್ಯ ತಯಾರಿ ನಡೆಸುತ್ತಿದೆ. ಬಸದಿಗೆ ತೆರಳುವ ಬೀದಿಗಳಲ್ಲಿ ಆಕರ್ಷಕ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಸ್ವಾಗತ ಕೋರುವ ಕಮಾನುಗಳು, ಫಲಕಗಳು ರಾರಾಜಿಸುತ್ತಿವೆ. ಕಳಸದ ಜನರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲು ಕಾದಿದ್ದಾರೆ.
ಹಸಿರು ಕಾಣಿಕೆ ಮೂಲಕ ತರಕಾರಿ, ಧಾನ್ಯ ಫಲ ವಸ್ತು ಸಮರ್ಪಣೆ ಕಳಸ ಆಸುಪಾಸಿನ 9 ಸಾವಿರಕ್ಕೂ ಅಧಿಕ ಜೈನರಿಗೆ ಬಸದಿ ಜೊತೆ ನಂಟು
ಶತಮಾನಗಳ ಇತಿಹಾಸವಿರುವ ಬಸದಿ
11ನೇ ಶತಮಾನದಲ್ಲಿ ಸಾಂತರ ಅರಸರು ಕಳಸದಲ್ಲಿ ಬಸದಿ ಸ್ಥಾಪಿಸಿದ್ದರು. ನಂತರ 1438ರಲ್ಲಿ ಕಾರ್ಕಳದ ಭೈರವರಸ ವೀರ ಪಾಂಡ್ಯದೇವ ಚಂದ್ರನಾಥ ಸ್ವಾಮಿ ಬಸದಿ ನಿರ್ಮಾಣ ಮಾಡಿದ್ದರು. ಅದು ಶಿಥಿಲವಾಗಿದ್ದರಿಂದ ಕಳಸದಲ್ಲಿ ಶಿಲಾಮಯ ಬಸದಿ ನಿರ್ಮಿಸಲು ಮುನಿಗಳು ಭಟ್ಟಾರಕರು ಪ್ರೇರಣೆ ನೀಡಿದ್ದರು ಎಂದು ಬಸದಿಯ ಜೀರ್ಣೋದ್ಧಾರ ಸಮಿತಿಯವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.