ADVERTISEMENT

ಮೂಡಿಗೆರೆ | ಕರಡಿ ದಾಳಿ: ಇಬ್ಬರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 21 ಮೇ 2025, 15:58 IST
Last Updated 21 ಮೇ 2025, 15:58 IST
ವಿನಯ್
ವಿನಯ್   

ಮೂಡಿಗೆರೆ: ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬರಡಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ಕರಡಿ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿದೆ.

ಕುಂಬರಡಿ ಗ್ರಾಮದ ವಿನಯ್ ಹಾಗೂ ಗಿಡ್ಡಯ್ಯ ಗಾಯಗೊಂಡವರು. ಬೆಳಿಗ್ಗೆ 10.30ರ ವೇಳೆಗೆ ವಿನಯ್ ಅವರು, ಗಿಡ್ಡಯ್ಯ ಅವರೊಂದಿಗೆ ತಮ್ಮ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ವೇಳೆ, ಎರಡು ಕರಡಿಗಳು ಏಕಕಾಲದಲ್ಲಿ ದಾಳಿ ನಡೆಸಿವೆ.‌ ದಾಳಿಯಿಂದ ಇಬ್ಬರಿಗೂ ತಲೆ, ಬೆನ್ನು ಮತ್ತು ಕೈಕಾಲುಗಳಲ್ಲಿ ಗಂಭೀರ ಗಾಯಗಳಾಗಿವೆ.

ಇವರಿಬ್ಬರ ಕಿರುಚಾಟ ಕೇಳಿ ಅಕ್ಕಪಕ್ಕದ ತೋಟದವರು ಬಂದು ಕಿರುಚಾಡಿದ ಬಳಿಕ ಕರಡಿಗಳು ಕಾಫಿ ತೋಟದೊಳಗೆ ಕಣ್ಮರೆಯಾಗಿವೆ. ಮಳೆಯಾಗುತ್ತಿದ್ದರಿಂದ ಮಂಜು ಮುಸುಕಿದ ವಾತಾವರಣವಿದ್ದು, ಕರಡಿಗಳು ಸಮೀಪಕ್ಕೆ ಬರುವವರೆಗೂ ಕಾಣಿಸಿಕೊಳ್ಳದೆ ಇದ್ದುದರಿಂದ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ ಎಂಜಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕರಡಿ ದಾಳಿಯಿಂದ ಅಕ್ಕಪಕ್ಕದ ಗ್ರಾಮಗಳಲ್ಲೂ ಭೀತಿ ಉಂಟಾಗಿದ್ದು, ಮಧ್ಯಾಹ್ನದ ಬಳಿಕ ಬಹುತೇಕ ಕಾಫಿ ತೋಟಗಳಲ್ಲಿ ಕೆಲಸಗಳನ್ನು ಸ್ಥಗಿತಗೊಳಿಸಲಾಗಿತ್ತು.

ADVERTISEMENT

ಕುಂಬರಡಿ ಭಾಗದಲ್ಲಿ ಕರಡಿಗಳು ವಾಸಿಸುತ್ತಿದ್ದು, ಪದೇ ಪದೇ ಕಾಣಿಸಿಕೊಲ್ಳುತ್ತಿವೆ ಎಂಬ ದೂರುಗಳಿವೆ. ಈ ಹಿಂದೆ ಚಂದ್ರೇಗೌಡ ಎಂಬುವವರ ಮೇಲೆಯೂ ದಾಳಿ ನಡೆಸಿ ಗಾಯಗೊಳಿಸಿದ್ದವು. ಕಾಡಾನೆ, ಕಾಡೆಮ್ಮೆ, ಹುಲಿಗಳ ದಾಳಿಯಿಂದ ತತ್ತರಿಸಿರುವ ಈ ಭಾಗದ ರೈತರಿಗೆ ಈಗ ಕರಡಿ ದಾಳಿಯು ನುಂಗಲಾರದ ತುತ್ತಾಗಿದ್ದು, ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗಿಡ್ಡಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.