ADVERTISEMENT

ಬೆಳವಾಡಿ ಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:23 IST
Last Updated 17 ಆಗಸ್ಟ್ 2025, 7:23 IST
‌ಬೆಳವಾಡಿ ಕೆರೆಗೆ ಶುಕ್ರವಾರ ಸಚಿವ ಕೆ.ಜೆ.ಜಾರ್ಜ್ ಬಾಗಿನ ಅರ್ಪಿಸಿದರು
‌ಬೆಳವಾಡಿ ಕೆರೆಗೆ ಶುಕ್ರವಾರ ಸಚಿವ ಕೆ.ಜೆ.ಜಾರ್ಜ್ ಬಾಗಿನ ಅರ್ಪಿಸಿದರು   

ಚಿಕ್ಕಮಗಳೂರು: ಬೆಳವಾಡಿ ಸುತ್ತಮುತ್ತ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.

ತಾಲ್ಲೂಕಿನ ಬೆಳವಾಡಿ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸೋಲಾರ್ ವ್ಯವಸ್ಥೆಯನ್ನು ಹೆಚ್ಚು ಮಾಡಲು ಯೋಜನೆ ರೂಪಿಸಲಾಗಿದೆ. ಶರಾವತಿ ಪಂಪ್ ಸ್ಟೋರೇಜ್ ನೀರು ಬಳಸಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯದ ಅನುಮತಿ ಕೋರಲಾಗಿದೆ’ ಎಂದರು.

ಪಾವಗಡದಲ್ಲಿ ಇನ್ನೂ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗಿದ್ದೇವೆ. ಇದಕ್ಕೆ ರೈತರಿಂದ ಗುತ್ತಿಗೆ ಪಡೆದ ಭೂಮಿಗೆ ಸರ್ಕಾರ ಪ್ರತಿ ತಿಂಗಳು ಹಣ ಪಾವತಿಸುತ್ತಿದೆ. ಕುಸುಮ್-ಸಿ ಯೋಜನೆಯಡಿ 2,500 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಸಂಬಂಧ ಖಾಸಗಿಯವರು ಬಂಡವಾಳ ಹೂಡಲಿದ್ದು, ಅವರು ₹2 ಅಥವಾ ₹2.10 ಕೊಡಲು ಮುಂದೆ ಬಂದಿದ್ದಾರೆ‌‌‌. ಇದಕ್ಕೆ ಸುಮಾರು ₹ 10 ಸಾವಿರ ಕೋಟಿ ಬಂಡವಾಳ ಹೂಡುವ ಅವಶ್ಯಕತೆ ಇದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಡೆಗಳಲ್ಲಿ ಕೊಳವೆ ಬಾವಿಗಳಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ADVERTISEMENT

ಶಾಸಕ ಎಚ್.ಡಿ.ತಮ್ಮಯ್ಯ ಪ್ರಾಸ್ತಾವಿಕ ಮಾತನಾಡಿ, 25 ವರ್ಷಗಳಿಂದೀಚೆಗೆ ದೇವನೂರು ಕೆರೆ ಮಳೆಯಿಂದ ಮಾತ್ರ ಒಮ್ಮೆ ತುಂಬಿತ್ತು. ಬರಗಾಲ ಬಂದು ಈ ಎರಡು ಕೆರೆಗೆ ನೀರಿಲ್ಲದೆ ಬರಡಾಯಿತು. ಬೆಳವಾಡಿ, ದೇವನೂರಿನಂತಹ ದೊಡ್ಡ ಗ್ರಾಮಗಳಿಂದ ಜನರು ಬೆಂಗಳೂರಿಗೆ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಕಾಲದಲ್ಲಿ ನೀರು ಮತ್ತು ವಿದ್ಯುತ್ ದೊರಕಿದರೆ ಇಲ್ಲಿನ ರೈತರು ಉತ್ತಮ ಬೆಳೆ ಬೆಳೆದು ಬೆಲೆ ಲಭಿಸಿ ಸ್ವಾಭಿಮಾನಿಗಳಾಗಿ ಬದುಕುತ್ತಾರೆ. ಅನೇಕ ರೈತ ಮುಖಂಡರು ಈ ಕೆರೆಯನ್ನು ತುಂಬಿಸಲು ಪ್ರಯತ್ನಿಸಿದ್ದರು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್, ರಾಜ್ಯ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ತಾ.ಪಂ. ಮಾಜಿ ಅಧ್ಯಕ್ಷ ಬಸವರಾಜ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ತಹಶೀಲ್ದಾರ್ ರೇಷ್ಮಾ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.