ADVERTISEMENT

ಸುಹಾಸ್ ಶೆಟ್ಟಿ ಸಾವಿಗೆ ಬಿಜೆಪಿ ಪ್ರಚೋದನಕಾರಿ ರಾಜಕಾರಣವೇ ಕಾರಣ: ಮುರೊಳ್ಳಿ

ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:41 IST
Last Updated 7 ಮೇ 2025, 15:41 IST
ಸುಧೀರ್ ಕುಮಾರ್ ಮುರೊಳ್ಳಿ
ಸುಧೀರ್ ಕುಮಾರ್ ಮುರೊಳ್ಳಿ   

ಕೊಪ್ಪ: ‘ಸುಹಾಸ್ ಶೆಟ್ಟಿ ಸಾವಿಗೆ ಬಿಜೆಪಿ ಪ್ರಚೋದನಕಾರಿ ರಾಜಕಾರಣವೇ ಕಾರಣ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಖಂಡಿಸಿ ಇತ್ತೀಚೆಗೆ ಹಿಂದುತ್ವ ಪರ ಸಂಘಟನೆಗಳು ಕರೆಕೊಟ್ಟಿದ್ದ ಬಂದ್ ಅನ್ನು ನಾವು ಬೆಂಬಲಿಸಿದ್ದೆವು. ಆದರೆ, ಬಿಜೆಪಿ ಮುಖಂಡರು ಶೃಂಗೇರಿಯಲ್ಲಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದು ಖಂಡನೀಯ' ಎಂದರು.

'ಸುಹಾಸ್ ಶೆಟ್ಟಿ ಮೇಲೆ ಎರಡು ಕೊಲೆ ಪ್ರಕರಣಗಳಿದ್ದು,  ಆರ್.ಅಶೋಕ್ ಅವಧಿಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಹಿಂದುತ್ವಪರ ಎಂದು ಹೇಳುವ ಬಿಜೆಪಿ ಮುಖಂಡರು ಎಲ್ಲಿಯೂ ತಮ್ಮ ಮಕ್ಕಳನ್ನು ಧರ್ಮ ರಕ್ಷಣೆಗೆ ಕಳುಹಿಸಲ್ಲ. ಹಿಂದೂ ಪರ ಸಂಘಟನೆಯ ಕಾರ್ಯಕರ್ತರಿಗೆ ಬಿಜೆಪಿ ಮೋಸ ಮಾಡುತ್ತಿದೆ' ಎಂದರು.

ADVERTISEMENT

'ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಹಿಂದೂ ಕಾರ್ಯಕರ್ತನ ಕೊಲೆ ಎಂದು ಬಿಂಬಿಸಿದ್ದಾರೆ. ಒಬ್ಬ ವ್ಯಕ್ತಿ ಒಂದು ಪಕ್ಷ, ಸಂಘಟನೆಯ ಕಾರ್ಯಕರ್ತನಾಗಬಲ್ಲ. ಆದರೆ, ಒಂದು ಧರ್ಮದ ಕಾರ್ಯಕರ್ತ ಎಂದು ಕರೆಯಬಾರದು. ಯಾವ ಧರ್ಮವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ' ಎಂದರು.

'ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ವಯಸ್ಸಾಸಾಗಿದೆ, ಆದರೆ ಬುದ್ಧಿ ಬಂದಿಲ್ಲ. ಅವರು ಸುಹಾಸ್ ಶೆಟ್ಟಿ ಮೃತ ದೇಹ ನೋಡಲು ಬಂದ ಸಂದರ್ಭದಲ್ಲಿ ಕಾರು ಇಳಿಯುವಾಗ ನಗುತ್ತಾ ಬಂದರು' ಎಂದರು.

'ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರಾಮಾಣಿಕ ರಾಜಕಾರಣಿ ಎಂದು ಹೆಸರು ಪಡೆದವರು. ಅಂಥವರ ಮೇಲೆ ಬಿಜೆಪಿಗರು ಬೇಕಾಬಿಟ್ಟಿ ಮಾತನಾಡಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರು ದಿನೇಶ್ ಗುಂಡೂರಾವ್ ಅವರ ಬಗ್ಗೆ ಸಲ್ಲದ ಹೇಳಿಕೆ ನೀಡಿದ್ದಾರೆ. ಮಾನ ಮರ್ಯಾದೆ ಇಲ್ಲದವರು ಕೇಸು ನೂರು ಆಗಲಿ ಎದುರಿಸುತ್ತೇವೆ ಎಂದು ಹೇಳುತ್ತಾ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ’ ಎಂದರು.

'ರಾಜ್ಯ ಸರ್ಕಾರ ಪರೀಕ್ಷೆ ಸುತ್ತೋಲೆಯಲ್ಲಿ ಜನಿವಾರ ತೆಗೆಸುವಂತೆ ಎಲ್ಲೂ ಹೇಳಿರಲಿಲ್ಲ. ಜನಿವಾರ ತೆಗೆಸಿದ ಮೂರ್ಖ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇದೀಗ ಕೇಂದ್ರ ಸರ್ಕಾರವೇ ಪರೀಕ್ಷೆ ವೇಳೆ ಜನಿವಾರ ತೆಗೆಸಬೇಕು ಎಂದು ಸುತ್ತೋಲೆ ಹೊರಡಿಸಿದೆ. ಬಿಜೆಪಿಗರು ಈಗ ಮಾತನಾಡುತ್ತಿಲ್ಲ. ಆದ್ದರಿಂದ ಇದು ಬಿಜೆಪಿ ಮನಸ್ಥಿತಿಯ ಅಧಿಕಾರಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿ ಎಂದು ಕೃತ್ಯ ನಡೆಸಿರಬಹುದು’ ಎಂದರು.

'ಅರ್ಹರಿಗೆ ಸವಲತ್ತು ಕೊಡುವ ಉದ್ದೇಶದಿಂದ ಕರ್ನಾಟಕದಲ್ಲಿ ಜಾತಿ ಗಣತಿ ಮಾಡುತ್ತೇವೆ ಎಂದಾಗ ಸಮಾಜ ಒಡೆಯುತ್ತಿದ್ದಾರೆ ಎಂದು ಬಿಜೆಪಿಗರು, ಕೇಂದ್ರದ ಕುಮಾರಸ್ವಾಮಿ ಹೇಳಿದ್ದರು. ಕೇಂದ್ರ ಜಾತಿ ಗಣತಿ ಘೋಷಿಸಿದ ಬಳಿಕ ಬಿಜೆಪಿ ಸುಮ್ಮನಾಗಿದೆ' ಎಂದರು.

'ಪಹಲ್ಗಾಮ್ ಘಟನೆ ಗುಪ್ತಚರ ಇಲಾಖೆ ವೈಫಲ್ಯ ಎಂದು ಆಡಳಿತ ಪಕ್ಷವೇ ಒಪ್ಪಿಕೊಂಡಿದೆ. ಭಾರತದಲ್ಲಿ ಶಾಂತಿ ನೆಲಸಬೇಕು, ಈ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳವ ನಿರ್ಧಾರಗಳಿಗೆ ಕಾಂಗ್ರೆಸ್ ಬೆಂಬಲ ಇರುತ್ತದೆ' ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಮುಖಂಡರಾದ ನುಗ್ಗಿ ಮಂಜುನಾಥ್, ನವೀನ್ ಕರುವಾನೆ, ಸಂತೋಷ್ ಕುಲಾಸೋ, ಪ್ರಕಾಶ್ ಪೂಜಾರಿ, ಕೀರ್ತಿರಾಜ್, ಹರೀಶ್, ಪ್ರಶಾಂತ್, ಓಣಿತೋಟ ರತ್ನಾಕರ್, ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಸಂದೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.