ADVERTISEMENT

ಚಿಕ್ಕಮಗಳೂರು: ಬೆಳಿಗ್ಗೆ ಮಂಜು, ಮಧ್ಯಾಹ್ನ ಬಿಸಿಲು, ಸಂಜೆ ಮಳೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 14:20 IST
Last Updated 5 ಮೇ 2025, 14:20 IST
ಚಿಕ್ಕಮಗಳೂರು ನಗರದ ಶ್ರೀಕಂಠಪ್ಪ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಕವಿದಿದ್ದ ಮಂಜಿನಲ್ಲಿ ಕಂಡು ಬಂದ ದೃಶ್ಯ –ಪ್ರಜಾವಾಣಿ ಚಿತ್ರ: ಎ.ಎನ್.ಮೂರ್ತಿ
ಚಿಕ್ಕಮಗಳೂರು ನಗರದ ಶ್ರೀಕಂಠಪ್ಪ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಕವಿದಿದ್ದ ಮಂಜಿನಲ್ಲಿ ಕಂಡು ಬಂದ ದೃಶ್ಯ –ಪ್ರಜಾವಾಣಿ ಚಿತ್ರ: ಎ.ಎನ್.ಮೂರ್ತಿ   

ಚಿಕ್ಕಮಗಳೂರು: ಬೆಳಿಗ್ಗೆ ಮಂಜು ಮುಸುಕಿದ ವಾತಾರಣ, ಮಧ್ಯಾಹ್ನ ಉರಿ ಬಿಸಲು, ಸಂಜೆ ತಂಪೆರೆದ ಭರ್ಜರಿ ಮಳೆ... ಚಿಕ್ಕಮಗಳೂರು ನಗರ ಸೋಮವಾರ ಈ ಮೂರು ದೃಶ್ಯಗಳಿಗೆ ಸಾಕ್ಷಿಯಾಯಿತು.

ಬೆಳಿಗ್ಗೆ 8 ಗಂಟೆ ದಾಟಿದರೂ ಮಂಜು ಆವರಿಸಿತ್ತು. 5 ಅಡಿ ದೂರದಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗದಷ್ಟು ಮಂಜು ಕವಿದಿತ್ತು.  ಹೆಡ್‌ಲೈಟ್ ಹಾಕಿದ್ದರೂ ಹತ್ತಿರಕ್ಕೆ ಬರುವ ತನಕ ವಾಹನಗಳು ಕಾಣಿಸದೆ ಸವಾರರು ಪರದಾಡಿದರು. 

ಬಿಸಿಲು ಏರಿದಂತೆ ಮಂಜು ಕರಗಿ ಉರಿ ಬಿಸಿಲು ಆರಂಭವಾಯಿತು. ಮಧ್ಯಾಹ್ನದ ವೇಳೆಗೆ ಸೆಕೆಯಲ್ಲಿ ಜನ ಪರದಾಡುವಂತಾಯಿತು. ನಂತರ 3.30ರ ವೇಳೆಗೆ ವೇಳೆಗೆ ಮೋಡ ಕವಿದು ಮಳೆ ವಾತಾವರಣ ಸೃಷ್ಟಿಯಾಯಿತು. ಕೆಲ ಹೊತ್ತಿನಲ್ಲೇ ಗುಡುಗು, ಸಿಡಿಲಿನ ಅಬ್ಬರದ ನಡುವೆ ಮಳೆ ಆರಂಭವಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಆರ್ಭಟಿಸಿತು.

ADVERTISEMENT

ಭರ್ಜರಿಯಾಗಿ ಸುರಿದ ಮಳೆಗೆ ನಗರದ ಎಲ್ಲೆಡೆ ರಸ್ತೆಗಳಲ್ಲಿ ನೀರು ಹರಿಯಿತು. ಕೆಂಪನಹಳ್ಳಿ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ನೀರು ನದಿಯಂತೆ ಹರಿಯಿತು. ನಗರದ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲೂ ಮಳೆ ಆರ್ಭಟಿಸಿತು. 

ರಾಮನಹಳ್ಳಿ, ಕೆಂಪನಹಳ್ಳಿ, ಅಲ್ಲಂಪುರ, ತೇಗೂರು, ನಲ್ಲೂರು, ಇಂದಾವರ ಸುತ್ತಮುತ್ತ ಮಳೆಗೆ ಹೊಲ ಗದ್ದೆಗಳು ಜಲಾವೃತವಾದವು. ಆಲ್ದೂರಿನಲ್ಲಿ ಮೋಡ ಕವಿದು ಭರ್ಜರಿ ಮಳೆಯಾಗುವ ವಾತಾವರಣ ಸೃಷ್ಟಿಯಾಯಿತು. ಆದರೆ, ಅಷ್ಟೇನು ಜೋರು ಮಳೆ ಬಾರದಿದ್ದರೂ ಸಣ್ಣದಾಗಿ ಮಳೆ ಸುರಿದು ತಂಪಾಗಿಸಿತು.

ಚಿಕ್ಕಮಗಳೂರು ನಗರದಲ್ಲಿ ಮಳೆಯ ನಡುವೆ ಪ್ಲಾಸ್ಟಿಕ್ ಕವರ್ ಹೊದ್ದು ಹೆಜ್ಜೆ ಹಾಕಿದ ಮಕ್ಕಳು
ಚಿಕ್ಕಮಗಳೂರಿನ ಕೆಂಪನಹಳ್ಳಿ ರಸ್ತೆಯಲ್ಲಿ ಜಲಾವೃತವಾಗಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.