ಚಿಕ್ಕಮಗಳೂರು: 'ಜಿಲ್ಲೆಯಲ್ಲಿ ನೋಂದಾಯಿತ ಕೈಗಾರಿಕಾ ಉದ್ಯಮಗಳಿಗೆ ಹಂಚಿಕೆಯಾಗಿರುವ ಜಾಗದಲ್ಲಿ ನಿಯಮಾನುಸಾರ ಉದ್ದಿಮೆ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ನೀಡಿರುವ ಜಾಗ ವಾಪಸು ಪಡೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ 2025–26ನೇ ಸಾಲಿನ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ದಿಮೆದಾರರು ನಿಯಮಾನುಸಾರ ಕೈಗಾರಿಕಾ ಪ್ರದೇಶದಲ್ಲಿ ಪಡೆದಿರುವ ಜಾಗದಲ್ಲಿ ಮುಂದಿನ ಮೂರು ತಿಂಗಳಲ್ಲಿ ಉದ್ದಿಮೆ ಆರಂಭಿಸಬೇಕು. ಎಲ್ಲಾ ದಾಖಲೆ ಹಾಗೂ ನಿಗದಿಪಡಿಸಿದ ಹಣ ಜಮೆ ಮಾಡಿ ಕೈಗಾರಿಕೆ ಆರಂಭಿಸಬೇಕು. ಅಧಿಕಾರಿಗಳು ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ಮೂಲ ಸೌಕರ್ಯಗಳಾದ ವಿದ್ಯುತ್, ಚರಂಡಿ, ನೀರು, ರಸ್ತೆ ಸೇರಿ ಎಲ್ಲಾ ಸೌಲಭ್ಯ ನೀಡಬೇಕು ಎಂದು ಸೂಚಿಸಿದರು.
ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ದೊರಕುವ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮುದ್ರಾ ಯೋಜನೆ ಅನುಕೂಲ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕೈಗಾರಿಕೆಗಳು ಹೆಚ್ಚು ಹೆಚ್ಚು ಆರಂಭವಾಗುವುದರಿಂದ ನಿರುದ್ಯೋಗ ಸಮಸ್ಯೆ ಪರಿಹಾರವಾಗಲಿದೆ. ಕೈಗಾರಿಕೆ ಆರಂಭಿಸುವ ಯುವ ಉದ್ದಿಮೆದಾರರು ಮುಂದೆ ಬರಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಸ್ಪೈಸ್ ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ಅದಕ್ಕೆ ಮಂಜೂರಾತಿ ದೊರಕಿ ಹಣ ಬಿಡುಗಡೆಯಾಗಿದೆ. ಅಗತ್ಯ ಭೂಮಿ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಹಲಸಿನ ಕ್ಲಸ್ಟರ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಭೂಮಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಕೈಗಾರಿಕೆ ಸ್ಥಾಪಿಸುವವರಿಗೆ ಕೆಎಸ್‌ಎಫ್‌ಸಿ ಮತ್ತು ಬ್ಯಾಂಕ್‌ಗಳಿಂದ ಹಣಕಾಸಿನ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಹೇಶ್‌ಕುಮಾರ್, ಕೆಐಎಡಿಬಿ, ಕೆಎಸ್‌ಎಫ್‌ಸಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಡೂರು ನಗದಿಯಾತ್ ಕಾವಲ್‌ನಲ್ಲಿ ಅಭಿವೃದ್ಧಿಯಾಗಿರುವ ಜಾಗದಲ್ಲಿ ಕೈಗಾರಿಕೆಗೆ ಲಭ್ಯವಿರುವ ಭೂಮಿ ಹಂಚಿಕೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಟೆಕ್ಸ್‌ಟೈಲ್ ಪಾರ್ಕ್ ಅಭಿವೃದ್ಧಿಗೆ ಕಡೂರು ತಾಲ್ಲೂಕು ಕಸಬಾ ಹೋಬಳಿಯ ಚೀಲನಹಳ್ಳಿ ಗ್ರಾಮದ ಸರ್ವೆ ನಂ.52ರಲ್ಲಿ 13 ಎಕರೆ ಹಾಗೂ ಸರ್ವೆ ನಂ. 54ರಲ್ಲಿ 12 ಎಕರೆ ಸೇರಿ ಒಟ್ಟು 25 ಎಕರೆ ಜಾಗ ಕಾಯ್ದಿರಿಸಲಾಗಿದೆ. ಈ ಜಾಗ ಜವಳಿ ಪಾರ್ಕ್ ಸ್ಥಾಪನೆಗೆ ಮಂಜೂರಾಗಿದ್ದು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿ ಹಿರೇಗೌಜ ಗ್ರಾಮದ ಸರ್ವೆ ನಂ. 111ರಲ್ಲಿ 15 ಎಕರೆ ಜಾಗವನ್ನು ಜವಳಿ ಪಾರ್ಕ್‌ಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.