ADVERTISEMENT

ಚಿಕ್ಕಮಗಳೂರು | ಗ್ರಾಮೀಣ ರಸ್ತೆ: ಮಳೆಗಾಲದ ದುರವಸ್ಥೆ

ಮಳೆಗಾಲಕ್ಕೂ ಮುನ್ನ ನಿರ್ವಹಣೆಯಾಗದ ರಸ್ತೆ: ಮಳೆಗಾಲದಲ್ಲಿ ಚಂಚಾರವೇ ದುಸ್ತರ

ವಿಜಯಕುಮಾರ್ ಎಸ್.ಕೆ.
Published 16 ಜೂನ್ 2025, 7:30 IST
Last Updated 16 ಜೂನ್ 2025, 7:30 IST
ಕಳಸ–ಕುದುರೆಮುಖ ರಸ್ತೆ ಸಂಪೂರ್ಣ ಹಾಳಾಗಿರುವುದು
ಕಳಸ–ಕುದುರೆಮುಖ ರಸ್ತೆ ಸಂಪೂರ್ಣ ಹಾಳಾಗಿರುವುದು   

ಚಿಕ್ಕಮಗಳೂರು: ಜಿಲ್ಲೆಯ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅದರಲ್ಲೂ ಮಳೆಗಾಲದ ಬಳಿಕ ರಸ್ತೆಯಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ.

ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರು ನಗರದಲ್ಲಿ ರಸ್ತೆಗಳ ಸ್ಥಿತಿ ಹೇಳ ತೀರದು. ಇನ್ನೂ ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿಯಂತೂ ಇದಕ್ಕೂ ಕಷ್ಟಕರ. ಡಾಂಬರ್ ಕಾಣದ ಹಲವು ರಸ್ತೆಗಳಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಕೆಸರಿನಲ್ಲಿ ಜನ ಜೀವನ ಸಾಗಿಸುವಂತಾಗಿದೆ.

ಮಳೆಗಾಲ ಆರಂಭವಾಗಿದ್ದು, ಅದಕ್ಕೂ ಮುನ್ನ ಗ್ರಾಮೀಣ ರಸ್ತೆಗಳನ್ನು ನಿರ್ವಹಣೆ ಮಾಡುವ ಕೆಲಸವಾಗಿಲ್ಲ. ಚರಂಡಿ ಸರಿಪಡಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರೆ ಇರುವ ರಸ್ತೆಗಳಾದರೂ ಉಳಿಯುತ್ತಿದ್ದವು. ಈಗ ಮಳೆಗಾಲ ಆರಂಭವಾಗಿದ್ದು, ನಿರ್ವಹಣೆಯಾಗದ ರಸ್ತೆಯಲ್ಲೇ ನೀರು ನಿಲ್ಲುವಂತಾಗಿದೆ.

ADVERTISEMENT

ಡಾಂಬರ್ ಕಾಣದ ರಸ್ತೆಗಳು ಒಂದೆಡೆಯಾದರೆ, ಚೆನ್ನಾಗಿರುವ ರಸ್ತೆಗಳೂ ಹಾಳಾಗುವ ಆತಂಕ ಇದೆ. ರಸ್ತೆ ಬದಿಯ ಚರಂಡಿ ಸರಿಪಡಿಸುವುದಾಗಲಿ, ರಸ್ತೆ ಬದಿಯ ಕುರುಚಲು ಗಿಡ ತೆಗೆಯುವ ಕೆಸಲವನ್ನಾಗಲಿ ಮಾಡಿಲ್ಲ.

ಆಲ್ದೂರು ಸೇರಿ ಹಲವೆಡೆ ಗ್ರಾಮಸ್ಥರೇ ಹಣ ಸಂಗ್ರಹಿಸಿಕೊಂಡು ರಸ್ತೆ ದುರಸ್ತಿಪಡಿಸಿದ ಉದಾಹರಣೆಗಳಿವೆ. ನಕ್ಸಲ್ ಪ್ರದೇಶಗಳಲ್ಲಿ ರಸ್ತೆಗಳ ಸ್ಥಿತಿಯಂತೂ ಹೇಳ ತೀರದಾಗಿದೆ. ನಕ್ಸಲ್ ಪ್ರದೇಶದ ರಸ್ತೆ ಸೇರಿಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹10 ಕೋಟಿ ಹಣ ನೀಡಲಾಗಿದೆ. ಆದರೆ, ಎಲ್ಲಿಯೂ ಕಾಮಗಾರಿ ಆರಂಭವಾಗಿರುವ ಉದಾಹರಣೆಗಳಿಲ್ಲ. ಮುಂದಿನ ಮಳೆಗಾಲಕ್ಕಾದರೂ ಗ್ರಾಮೀಣ ರಸ್ತೆಗಳನ್ನು ದುರಸ್ತಿಪಡಿಸಬೇಕು. ಅದಕ್ಕೆ ಬೇಕಿರುವ ವಿಶೇಷ ಅನುದಾನವನ್ನು ಸರ್ಕಾರದಿಂದ ಪಡೆಯುವ ಪ್ರಯತ್ನವನ್ನು ಜನಪ್ರತಿನಿಧಿಗಳು ಮಾಡಬೇಕು ಎಂಬುದು ಜನರ ಆಗ್ರಹ.

ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ವಿ. ನಾಗರಾಜ್, ಜೆ.ಒ. ಉಮೇಶ್‌ಕುಮಾರ್, ರವಿಕುಮಾರ್ ಶೆಟ್ಟಿಹಡ್ಲು, ಸತೀಶ್ ಜೈನ್, ಕೆ.ಎನ್.ರಾಘವೇಂದ್ರ, ಕೆ.ನಾಗರಾಜ್, ಎನ್.ಸೋಮಶೇಖರ್

ಶೃಂಗೇರಿ ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೆರೆಯಿಂದ ಕೆರೆಮನೆಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದು
ನರಸಿಂಹರಾಜಪುರ ತಾಲ್ಲೂಕಿನ ವಗ್ಗಡೆ ಗ್ರಾಮದಿಂದ ಸಿದ್ದನಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ
ನರಸಿಂಹರಾಜಪುರ ತಾಲ್ಲೂಕು ವಗ್ಗಡೆ ಗ್ರಾಮದಿಂದ ಸಿದ್ದನಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿರುವುದು
ತರೀಕೆರೆ ತಾಲೂಕಿನ ಅಮೃತಪುರ ಹೋಬಳಿಯ ಎರೆಹಳ್ಳಿ ತಾಂಡ್ಯದಿಂದ ಎಚ್. ಮಲ್ಲೇನಹಳ್ಳಿಗೆ ಹೋಗುವ ರಸ್ತೆಯ ಅವಾಂತರ
ಬೀರೂರು ಗ್ರಾಮಾಂತರ ಪ್ರದೇಶದ ಬಾಕಿನ ಕೆರೆ ವಲಯದಿಂದ ಎಮ್ಮೆದೊಡ್ಡಿ ಕಡೆ ತೆರಳುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಮಳೆಗಾಲದಲ್ಲಿ ಓಡಾಡುವುದೇ ದುಸ್ತರ ಎನಿಸುವಂತಿದೆ
ಬಾಳೆಹೊನ್ನೂರು ವ್ಯಾಪ್ತಿಯ ಬಸರೀಕಟ್ಟೆ –ಕವನಹಳ್ಳ ರಸ್ತೆಯ ದುಸ್ಥಿತಿ

ಗ್ರಾಮೀಣ ಪ್ರಯಾಣ ಪ್ರಯಾಸ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕಿಸುವ ಹಲವು ರಸ್ತೆಗಳು ಡಾಂಬರ್ ಕಾಣದೆ ಹೊಂಡ ಗುಂಡಿಗಳಿಂದ ಕೂಡಿದ್ದು ಮಳೆಗಾಲದಲ್ಲಿ ಸಂಚಾರ ಮಾಡುವುದೇ ಪ್ರಯಾಸವಾಗಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ 14 ಗ್ರಾಮ ಪಂಚಾಯಿತಿಗಳಿದ್ದು ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳು ಒಟ್ಟು 781.15 ಕಿಲೋ ಮೀಟರ್ ಇದೆ. ಇದರಲ್ಲಿ ಡಾಂಬರ್ ರಸ್ತೆ 262.91 ಕಿ.ಮೀ ಜಲ್ಲಿ ರಸ್ತೆ 206.08 ಕಿ.ಮೀ ಮಣ್ಣಿನ ರಸ್ತೆ 300.31 ಕಿ.ಮೀ ಗ್ರಾವಲ್ ರಸ್ತೆ 15.85 ಕಿ.ಮೀ ಇದೆ. 2024–25ನೇ ಸಾಲಿನಲ್ಲಿ ಅತಿಯಾದ ಮಳೆಯಿಂದ 146.18 ಕಿ.ಮೀ ರಸ್ತೆ ಹಾಳಾಗಿತ್ತು. ಇದರಿಂದ ₹24.38 ಕೋಟಿ ನಷ್ಟ ಅಂದಾಜಿಸಲಾಗಿತ್ತು. 2024–25ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 7 ರಸ್ತೆಗೆ ₹51.31 ಲಕ್ಷ ಬಿಡುಗಡೆಯಾಗಿತ್ತು. 2024–25ನೇ ಸಾಲಿನಲ್ಲಿ 5 ರಸ್ತೆ ನಿರ್ವಹಣೆಗೆ ₹38.60 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಮುತ್ತಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಮುತ್ತಿಕೊಪ್ಪದಿಂದ ಸಾತ್ಕೋಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುಮಾರು 10 ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆ ಶಿಥಿಲಾವಸ್ಥೆಗೆ ತಲುಪಿದ್ದು ಜನ ವಾಹನಗಳು ಓಡಾಡಲು ಸಾಧ್ಯವಾಗದ ಸ್ಥಿತಿಯಿದೆ. ವಗ್ಗಡೆಯಿಂದ ಕಬ್ಬಿಣ ಸೇತುವೆ ಮಾವಿನಮನೆ ಸಿದ್ದನಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ 30 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾಗಿ ಪರಿಣಮಿಸಿದೆ. ಇದರಿಂದ ಗ್ರಾಮಕ್ಕೆ ಯಾವುದೇ ವಾಹನಗಳು ಬಾಡಿಗೆಗೆ ಬರುವುದಿಲ್ಲ ಎಂದು ಗ್ರಾಮಸ್ಥ ಮಾವಿನ ಮಂಜುನಾಥ್ ತಿಳಿಸಿದರು. ಅತಿಯಾದ ಮಳೆಯಿಂದಾಗಿ ಪಂಚಾಯತ್ ರಾಜ್ ಎಂಜಿನಿರಿಂಗ್ ಉಪವಿಭಾಗದ ಅಧಿಕಾರಿಗಳು ಗುರುತಿಸಿರುವ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 98 ರಸ್ತೆಗಳು ಶಿಥಿಲಾವಸ್ಥೆಗೆ ತಲುಪಿವೆ. ಬಹುತೇಕ ರಸ್ತೆಗಳು ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಪರಿಣಮಿಸುತ್ತವೆ. ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆಯಾಗಿದೆ. ಕಳೆದ ಬಾರಿ ಅತಿವೃಷ್ಟಿ ಘೋಷಣೆಯಾಗದ ಕಾರಣ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ. ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಕ್ರಿಯಾಯೋಜನೆ ರೂಪಿಸಿ ಮಾಹಿತಿ ಸಲ್ಲಿಸಲಾಗಿದೆ ಎಂದು ಪಂಚಾಯತ್ ರಾಜ್ ಎಂಜಿಯರಿಂಗ್ ವಿಭಾಗದ ಎಇಇ ಕೆ.ಟಿ.ಸಾಗರ್ ತಿಳಿಸಿದರು.

ಹದಗೆಟ್ಟ ರಸ್ತೆ ಸಂಚಾರ ದುಸ್ತರ

ಅಜ್ಜಂಪುರ: ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದೆ. ಈ ರಸ್ತೆಗಳಲ್ಲಿ ಶಾಲಾ ವಾಹನಗಳು ಬೈಕ್ ಸವಾರರು ಜೀವ ಬಿಗಿಹಿಡಿದು ಸಾಗುವಂತಾಗಿದೆ. ಅಜ್ಜಂಪುರ-ಹೆಬ್ಬೂರು- ನಾರಣಾಪುರ- ಬಂಗನಗಟ್ಟೆ- ಅನುವನಹಳ್ಳಿ- ಶಿವನಿ ರಸ್ತೆ ಗೆಜ್ಜೆಗೊಂಡನಹಳ್ಳಿ-ಎರೆಹೊಸೂರು- ನಾರಣಾಪುರ ಮುಖ್ಯ ರಸ್ತೆ ಸಂಪರ್ಕ ರಸ್ತೆ ನಾರಣಾಪುರ-ಕಣಬಗಟ್ಟೆ ರಸ್ತೆ ಗಡಿಹಳ್ಳಿ-ಕಲ್ಲಾಪುರ ರಸ್ತೆ ವೀರಾಪುರ ಹೊಸೂರು-ಬೀರೂರು ಮುಖ್ಯ ರಸ್ತೆ ಸಂಪರ್ಕ ರಸ್ತೆ ಮುಗಳಿ-ಮೈಲನಹಳ್ಳಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ರಸ್ತೆಗಳಲ್ಲಿ ತಗ್ಗುದಿಣ್ಣೆ ನಿರ್ಮಾಣಗೊಂಡಿದೆ. ರಸ್ತೆಯ ಡಾಂಬರ್ ಕಿತ್ತು ಜಲ್ಲಿಕಲ್ಲು ಹೊರ ಬಂದಿವೆ. ಗುಂಡಿಗಳಲ್ಲಿ ನೀರು ನಿಂತಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.

ಡಾಂಬರ್ ಕಾಣದ ರಸ್ತೆಗಳು

ಕೊಪ್ಪ: ತಾಲ್ಲೂಕಿನ ಹಲವೆಡೆ ಗ್ರಾಮೀಣ ರಸ್ತೆಗಳು ಡಾಂಬರಿಕರಣಗೊಳ್ಳದೆ ಜಲ್ಲಿ ಕಲ್ಲುಗಳು ಕಿತ್ತು ಬಂದು ಆ ರಸ್ತೆಗಳಲ್ಲಿ ಓಡಾಡುವ ಜನ ಹೈರಾಣಾಗಿದ್ದಾರೆ. 25 ವರ್ಷಗಳ ಹಿಂದೆ ದುರಸ್ತಿ ಕಂಡ ಅದೆಷ್ಟೋ ಗ್ರಾಮೀಣ ರಸ್ತೆಗಳು ಈವರೆಗೂ ಮರಳಿ ದುರಸ್ತಿಯಾಗಿಲ್ಲ. ಕಾಲಿಗೆ ತಾಕುವ ಚೂಪಾದ ಕಲ್ಲುಗಳು ಮೈಗೆ ಸಿಡಿಯುವ ಕೆಸರು ಮಳೆಗಾಲದಲ್ಲಂತೂ ಇದು ಹೇಳ ತೀರದ ಸಮಸ್ಯೆ. ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳಿದ್ದು ಬಹುತೇಕ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿವೆ. ಪರಿಶಿಷ್ಟ ಸಮುದಾಯ ಹೆಚ್ಚಾಗಿ ವಾಸವಾಗಿರುವ ಚಿಕ್ಕನಕೊಡಿಗೆ ಮಲಗಾರು ವಗಳೆ ಭಾಗದಲ್ಲಿ ರಸ್ತೆ ಹದಗೆಟ್ಟಿದೆ. ಇಷ್ಟು ಮಾತ್ರವಲ್ಲದೆ ಹದಗೆಟ್ಟ ರಸ್ತೆ ಹೊಂದಿರುವ ಗ್ರಾಮಗಳ ಸಂಖ್ಯೆ ಹೆಚ್ಚಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಈವರೆಗೆ ಗುರುತಿಸಿರುವ ತಾಲ್ಲೂಕಿನಲ್ಲಿ 35 ಕಿಲೋ ಮೀಟರ್‌ಗೂ ಅಧಿಕ ವ್ಯಾಪ್ತಿ ರಸ್ತೆ ಹದಗೆಟ್ಟಿದೆ. 13 ಕಡೆ ರಸ್ತೆಗೆ ಹಾನಿ ಧರೆ ಕುಸಿತ ಸೇರಿದಂತೆ ರಸ್ತೆಗೆ ಸಂಬಂಧಿಸಿದ ಸುಮಾರು ₹3 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ವರದಿ ನೀಡಿದೆ. ಕಳೆದ ಬಾರಿ ಅತಿ ಹೆಚ್ಚು ಮಳೆಯಾಗಿದ್ದರೂ ಅತಿವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಣೆಯಾಗಿರಲಿಲ್ಲ. ಆದರೂ ಸ್ವಲ್ಪ ಮಟ್ಟಿಗೆ ಬಂದ ವಿಶೇಷ ಅನುದಾನದಿಂದ ಲ್ಯಾಂಡ್ ಆರ್ಮಿ ನಿಗಮದವರು ಗುತ್ತಿಗೆ ಪಡೆದು ಕೆಲವೆಡೆ ರಸ್ತೆ ನಿರ್ಮಾಣ ಕೆಲಸಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಜಕಾರಣಿಗಳ ನಿರ್ಲಕ್ಷ್ಯ: ಅಭಿವೃದ್ಧಿ ಕಾಣದ ರಸ್ತೆ ಬಸರೀಕಟ್ಟೆ ಬಾಳೆಹೊನ್ನೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಗಡಿ ಅಂಚಿನ ಗ್ರಾಮವಾದ ಕವನಹಳ್ಳಕ್ಕೆ ಬಸರೀಕಟ್ಟೆಯಿಂದ ಸಂಪರ್ಕ ಕಲ್ಪಿಸುವ 6ಕಿ.ಮೀ ರಸ್ತೆ ಕಳೆದ 20 ವರ್ಷಗಳಿಂದ ಅಭಿವೃದ್ಧಿ ಕಾಣದೆ ಅವ್ಯವಸ್ಥೆಯ ಆಗರವಾಗಿದೆ. ಸುಮಾರು 125 ಮತದಾರರಿರುವ ಈ ಕುಗ್ರಾಮ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲಾ ಪಕ್ಷದ ಅಭ್ಯರ್ಥಿಗಳು ಹೋಗಿ ಮತ ಯಾಚಿಸಿದ ನಂತರ ಮತ್ತೆ ನಾಪತ್ತೆಯಾಗುತ್ತಾರೆ. ಶಾಸಕ ಟಿ.ಡಿ.ರಾಜೇಗೌಡ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಬಹುತೇಕ ಕೂಲಿ ಕಾರ್ಮಿಕರು ಸಣ್ಣ ಹಿಡುವಳಿದಾರರೇ ಇರುವ ಕವನಹಳ್ಳಕ್ಕೆ ತೆರಳಲು ಆಟೊ ಚಾಲಕರು ಹಿಂದೇಟು ಹಾಕುತ್ತಾರೆ. ಅತ್ತ ಮೂಡಿಗೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕವನಹಳ್ಳದಿಂದ ಹೊರನಾಡು ಸಂಪರ್ಕ ರಸ್ತೆ ಶೇ 90ರಷ್ಟು ಕಾಂಕ್ರೀಟ್ ಹಾಕಲಾಗಿದ್ದು ಉಳಿದ ಕಾಮಗಾರಿ ಭರದಿಂದ ಸಾಗಿದೆ. ವಿದ್ಯಾರ್ಥಿಗಳು ನಿತ್ಯ ಕವನಹಳ್ಳದಿಂದ ಬಸರೀಕಟ್ಟೆಗೆ ಕಾಲ್ನಡಿಗೆಯಲ್ಲೇ ಸಾಗಬೇಕಾಗಿದೆ. ಬಿಳಾಲುಕೊಪ್ಪ ಕಲ್ಲುಗುಡ್ಡೆ ರಸ್ತೆ ಕೂಡ ಡಾಂಬರು ಕಾಣದೆ ಹೊಂಡ ಗುಂಡಿಗಳಿಂದ ಕೂಡಿದೆ. ಗಿರಿಜನರೇ ಅಧಿಕ ಸಂಖ್ಯೆಯಲ್ಲಿ ವಾಸವಿರುವ ಮೇಗೂರಿನಿಂದ ಎಡಗುಂದ ಸಂಪರ್ಕ ರಸ್ತೆಯಲ್ಲಿ ಮಳೆಗಾಲದಲ್ಲಿ ಯಾವುದೇ ವಾಹನ ಸಂಚಾರ ಅಸಾಧ್ಯ. ಡಾಂಬರು ಇಲ್ಲಿ ಮರೀಚಿಕೆಯಾಗಿದ್ದು ಸ್ಥಳೀಯರು ರಸ್ತೆ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ನೀಡಿದ ಅರ್ಜಿಗಳಿಗೆ ಲೆಕ್ಕವಿಲ್ಲ. ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಅವರ ಬೇಸರ.

- ಮಳೆಗೆ ಇನ್ನಷ್ಟು ಹಾಳಾಗುವ ಆತಂಕ

ಶೃಂಗೇರಿ: ಕಳೆದ ವರ್ಷ ಅತಿವೃಷ್ಟಿಯಿಂದ ಹಾಳಾದ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಒಂದು ವರ್ಷ ಕಳೆದರೂ ಅಭಿವೃದ್ಧಿಪಡಿಸದ ಕಾರಣ ಈ ವರ್ಷ ಮಳೆಗೆ ಇನ್ನಷ್ಟು ಹಾಳಾಗಿದ್ದು ರಸ್ತೆಯಲ್ಲಿ ಓಡಾಡದಂತ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಸರಿಯಾದ ನಿರ್ವಹಣೆಯಿಲ್ಲದೇ ಮಳೆಗಾಲದಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿ ಗ್ರಾಮಸ್ಥರು ನಡೆದುಕೊಂಡೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ರಸ್ತೆಯಲ್ಲಿ ಚರಂಡಿ ಎಲ್ಲಿದೆ ಎಂಬುದನ್ನು ಹುಡುಕಬೇಕು. ರಸ್ತೆ ಬದಿಯ ಗಿಡದ ಕೊಂಬೆಗಳನ್ನು ಕಟ್‌ ಮಾಡದ ಕಾರಣ ಎಲ್ಲೆಡೆ ಮರದ ರೆಂಬೆಗಳು ಜೋತು ಬಿದ್ದಿವೆ. ಜಲ್ಲಿ ಮತ್ತು ಮಣ್ಣು ಹಾಕಿದ ರಸ್ತೆಯಲ್ಲಿ ನೀರು ಹರಿದು ಮಣ್ಣು ಕೊಚ್ಚಿಕೊಂಡು ಹೋಗಿದೆ.   ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ಪಟ್ಟಣಕ್ಕೆ ಬರಲು ಹರಸಾಹಸ ಪಡಬೇಕಾಗಿದೆ. ಮನೆ ಮತ್ತು ತೋಟಕ್ಕೆ ಬೇಕಿರುವ ವಸ್ತುಗಳನ್ನು ಸಾಗಿಸುವುದೇ ಕಷ್ಟವಾಗಿದೆ. ತುರ್ತು ಚಿಕಿತ್ಸೆ ಪಡೆಯಲು ಅನಿವಾರ್ಯವಾದರೆ ಆಸ್ತ್ರೆಗೆ ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ತುರ್ತು ಸಂದರ್ಭದಲ್ಲಿ ಬಾಡಿಗೆ ಹೋದರೆ ಪಟ್ಟಣಕ್ಕೆ ವಾಪಸ್ ಬರುವುದೇ ಕಷ್ಟ ಎಂದು ಆಟೊ ಚಾಲಕ ರಾಜಶೇಖರ್ ಹೇಳುತ್ತಾರೆ. ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಲೆನಾಡಿನಲ್ಲಿ ಪ್ರತಿ ವರ್ಷ 150ರಿಂದ 180 ಇಂಚು ಮಳೆಯಾಗುತ್ತಿದ್ದು ರಸ್ತೆಗಳು ಹಾಳಾಗುತ್ತಿವೆ. ಸರ್ಕಾರ ತ್ವರಿತವಾಗಿ ಅನುದಾನ ಮಾಡಬೇಕು ಎಂದು ಕೃಷಿಕ ಕೊಲ್ಲಿ ರಮೇಶ್ ಹೆಗ್ಡೆ ಹೇಳಿದರು.

ವಾಹನ ಸಂಚಾರಕ್ಕೆ ತೊಂದರೆ

ತರೀಕೆರೆ: ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆಗಳು ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಲಿಂಗದಹಳ್ಳಿ ಅಮೃತಾಪುರ ಲಕ್ಕವಳ್ಳಿ ಮತ್ತು ಕಸಬಾ ಹೋಬಳಿಯ ಕೆಲವು ಭಾಗಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿವೆ. ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಶಾಲಾ ಮಕ್ಕಳು ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಪರಿತಪಿಸುವಂತಾಗಿದೆ.

ನಿರ್ವಹಣೆ ಇಲ್ಲದೆ ಸೊರಗಿದ ರಸ್ತೆಗಳು

ಕಳಸ: ಮಳೆಗಾಲ ಆರಂಭವಾಗಿದ್ದರೂ ತಾಲ್ಲೂಕಿನ ರಸ್ತೆ ಪಕ್ಕದ ಚರಂಡಿ ನಿರ್ವಹಣೆಗೆ ಸಂಬಂಧಪಟ್ಟ ಇಲಾಖೆಗಳು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಲೋಕೋಪಯೋಗಿ ಜಿಲ್ಲಾ ಪಂಚಾಯಿತಿ ರಸ್ತೆ ಪಕ್ಕದ ಚರಂಡಿ ತೆರೆದು ಮಳೆ ನೀರು ಹೋಗಲು ಅವಕಾಶ ಕೊಟ್ಟರೆ ರಸ್ತೆಗೆ ಆಗುವ ಹಾನಿ ತಡೆಯಬಹುದು. ಆದರೆ ಎಲ್ಲ ರಸ್ತೆ ಪಕ್ಕದಲ್ಲಿ ಚರಂಡಿ ತೆರೆಯಲು ಈವರೆಗೂ ಆಗಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆಗೆ ಹಾನಿಗುತ್ತಿದೆ ಎಂಬುದು ಗ್ರಾಮಸ್ಥರ ದೂರು.  ಕಳಸ– ಕೊಟ್ಟಿಗೆಹಾರ ಕಳಸ –ಎಸ್.ಕೆ.ಬಾರ್ಡರ್ ಕಳಸ– ಬಾಳೆಹೊನ್ನೂರು ಕಳಸ– ಹೊರನಾಡು ರಸ್ತೆ ಪಕ್ಕ ಚರಂಡಿ ನಿರ್ವಹಣೆ ಇನ್ನಷ್ಟು ಸಮರ್ಪಕವಾಗಿ ಆಗಬೇಕು ಎಂಬುದು ಸ್ಥಳೀಯರ ಒತ್ತಾಯ. ಜತೆಗೆ ಗ್ರಾಮೀಣ ಪ್ರದೇಶದ ರಸ್ತೆಗಳ ನಿರ್ವಹಣೆ ಮಾಡುವುದು ಯಾರ ಜವಾಬ್ದಾರಿ ಎಂಬ ಗೊಂದಲ ಈಗಲೂ ಇದೆ. ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ ಜನ ಪರದಾಡುವಂತಾಗಿದೆ.

ಗುಂಡಿ ರಸ್ತೆ: ಗ್ರಾಮೀಣ ಜನ ಹೈರಾಣ ಮೂಡಿಗೆರೆ: ತಾಲ್ಲೂಕಿನ ಹಲವು ಗ್ರಾಮೀಣ ರಸ್ತೆಗಳು ಗುಂಡಿ ಬಿದ್ದಿದ್ದು ಜನ ನಿತ್ಯವೂ ಹೈರಾಣಾಗುವಂತಾಗಿದೆ. ಬಾಳೂರು ಹೋಬಳಿ ಗಬ್ಗಲ್ ಸಾರಗೋಡು ರಸ್ತೆ ಸಾರಗೋಡು - ಚಂಡಗೋಡು ಚಿಕ್ಕಳ್ಳ ರಸ್ತೆ ಮೂಡಿಗೆರೆ - ತತ್ಕೊಳ ರಸ್ತೆ ಹೊಯ್ಸಳಲು ರಸ್ತೆ ಬಸ್ಕಲ್- ನಂದೀಪುರ ರಸ್ತೆ ಸಬ್ಬೇನಹಳ್ಳಿ - ಬಾಳೆಹೊನ್ನೂರು ರಸ್ತೆ ಸೇರಿದಂತೆ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು ನಿತ್ಯ ಜನ ಈ ರಸ್ತೆಗಳಲ್ಲಿ ಓಡಾಡಲು ಸಂಕಷ್ಟ ಎದುರಿಸುವಂತಾಗಿದೆ. ಮೂಡಿಗೆರೆಯಿಂದ ಸಕಲೇಶಪುರಕ್ಕೆ‌‌ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಯು ಕಜ್ಜೆಹಳ್ಳಿ ಕಿರುಗುಂದ ಸೇರಿದಂತೆ ವಿವಿಧ ಭಾಗಗಳಲ್ಲಿ ಹಾನಿಯಾಗಿದ್ದು ಪ್ರತಿ‌ದಿನ‌ ಸಂಚರಿಸುವ ನೂರಾರು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ –173ರ ಮೂಡಿಗೆರೆ– ಚಿಕ್ಕಮಗಳೂರು ರಸ್ತೆಯಲ್ಲೂ ಅಲ್ಲಲ್ಲಿ ಗುಂಡಿ ನಿರ್ಮಾಣವಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಆ ಗುಂಡಿ ರಸ್ತೆಯ ಗ್ರಾಮಗಳಿಗೆ ತೆರಳಲು ಬಾಡಿಗೆ ವಾಹನಗಳು ‌ಹಿಂದೇಟು ಹಾಕುವುದರಿಂದ ದುಬಾರಿ‌ ಬಾಡಿಗೆ ನೀಡಿ ತೆರಳಬೇಕಾಗಿದೆ. ಗೊಬ್ಬರ ಬೆಳೆ ಉತ್ಪನ್ನಗಳನ್ನು ಸಾಗಿಸಲು‌ ಕೂಡ ರೈತರು ನಲುಗುತ್ತಿದ್ದಾರೆ. ಪ್ರತಿನಿತ್ಯ ಓಡಾಡುವ ವಿದ್ಯಾರ್ಥಿಗಳು ಮಹಿಳೆಯರಿಗೂ ಕೂಡ ಗುಂಡಿ‌ ರಸ್ತೆಯ ಪ್ರಯಾಣ ತ್ರಾಸದಾಯಕವಾಗಿದೆ. ಗುಂಡಿ ರಸ್ತೆಯ ಬಗ್ಗೆ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳಿಗೆ‌ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ. ಈಗ ಗುಂಡಿ ರಸ್ತೆಯ ಬಗ್ಗೆ ಪ್ರಶ್ನಿಸಿದರೆ ಮಳೆಯ ನೆಪ ಹೇಳುತ್ತಾರೆ. ಮಳೆಗೂ ಮುನ್ನ ರಸ್ತೆ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು. ತಾಲ್ಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಗುಂಡಿ ರಸ್ತೆಯ ಪ್ರಯಾಣ ಇನ್ನಷ್ಟು ದುಸ್ತರವಾಗಿದೆ. ರಸ್ತೆ ಮೇಲೆ ಮಳೆ ನೀರು ನಿಲ್ಲುವುದರಿಂದ ಗುಂಡಿಯ ಅರಿವಿಲ್ಲದೇ ಅಪಘಾತಗಳು ಸಹ ಸಂಭವಿಸುತ್ತಿವೆ. ಗುಂಡಿ ರಸ್ತೆಗಳು ವಾಹನ ಸವಾರರಿಗೆ ಮಾತ್ರವಲ್ಲದೇ ಪಾದಚಾರಿಗಳಿಗೂ ಅಡ್ಡಿಯಾಗುತ್ತಿವೆ. ಹೊಸದಾಗಿ ನಿರ್ಮಿಸಿದ ರಸ್ತೆಗಳು ಬಹುಬೇಗ ಹಾನಿಯಾಗುತ್ತಿದ್ದು ಗುಣಮಟ್ಟದ ಕೊರತೆ ಹಾಗೂ ರಸ್ತೆ ಬದಿ ಚರಂಡಿ ವ್ಯವಸ್ಥೆ‌ ಇಲ್ಲದಿರುವುದು ರಸ್ತೆ ಹಾನಿಯಾಗಲು ಕಾರಣ.‌ ಬೇಸಿಗೆಯಲ್ಲಿ ಸಮರ್ಪಕವಾಗಿ ರಸ್ತೆಯನ್ನು ನಿರ್ವಹಿಸಿದರೆ ಮಳೆಗಾಲದಲ್ಲಿ ಹೆಚ್ಚು ಹಾನಿಯಾಗದು ಎಂಬುದು ಸಾರ್ವಜನಿಕರ ಅಭಿಪ್ರಾಯ. ‘ಗ್ರಾಮೀಣ ರಸ್ತೆಗಳಿಗೆ ಅನುದಾನ‌ ಬಂದಿದ್ದು ಬಹಳಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಾರಗೋಡು–ಚಂಡಗೋಡು ರಸ್ತೆ ಅಭಿವೃದ್ಧಿಗೂ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ‌ ಪ್ರಾರಂಭಿಸಲಾಗುವುದು.‌ ಮೂರು ವರ್ಷಗಳ ಹಿಂದಿದ್ದ ರಸ್ತೆಗಳಿಗೂ ಈಗಿನ ರಸ್ತೆಗಳಿಗೂ ವ್ಯತ್ಯಾಸವಾಗಿದ್ದು ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಕಂಡಿವೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮಹೇಶ್.

ಡಾಂಬರ್ ಕಾಣದ ಹಲವು ರಸ್ತೆ

ಕಡೂರು: ಅತ್ಯಂತ ವಿಸ್ತಾರವಾದ ತಾಲ್ಲೂಕಿನಲ್ಲಿ 340ಕ್ಕೂ ಹೆಚ್ಚು ಗ್ರಾಮಗಳು ಮತ್ತು 54 ಗ್ರಾಮ ಪಂಚಾಯತಿಗಳಿವೆ. ಕೆಲವು ಗ್ರಾಮ ಹಾಗೂ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳು ಹಾದುಹೋಗಿದೆ. ಈ ರಸ್ತೆಗಳು ಸದ್ಯಕ್ಕಂತೂ ಉತ್ತಮ ಸ್ಥಿತಿಯಲ್ಲಿದೆ. ಆದರೆ ಅಲ್ಲಿಂದ ಒಳಗೆ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆಗಳು ಡಾಂಬರ್‌ ಕಂಡು ಎಷ್ಟು ವರ್ಷಗಳಾಗಿವೆ ಎನ್ನುವಂತಿದೆ. ಇನ್ನೂ ಹಲವು ರಸ್ತೆಗಳು ಡಾಂಬರ್ ಮುಖವನ್ನೇ ನೋಡಿಲ್ಲ. ಕಸಬಾ ಬೀರೂರು ಗ್ರಾಮಾಂತರ ಯಗಟಿ ಹಿರೇನಲ್ಲೂರು ಸಿಂಗಟಗೆರೆ ಸಕರಾಯಪಟ್ಟಣ ಮೊದಲಾದ ಕಡೆ ಮುಖ್ಯ ರಸ್ತೆಗಳು ಪರವಾಗಿಲ್ಲ ಎನ್ನುವಂತಿವೆ. ಶೇ 50ರಷ್ಟು ಗ್ರಾಮಾಂತರ ರಸ್ತೆ ಉತ್ತಮವಾಗಿದ್ದರೆ ಶೇ 50ರಷ್ಟು ರಸ್ತೆಗಳು ನಿರ್ಮಾಣವಾಗಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಹಾಗೂ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿ ಸಂಚಾರ ಸಂಪರ್ಕ ಉತ್ತಮಗೊಳಿಸಬೇಕಾದ ಅಗತ್ಯವಿದೆ. ಹಲವು ಭಾಗಗಳಲ್ಲಿ ರಸ್ತೆಗಳು ನಡೆದುಹೋಗಲು ಯೋಗ್ಯವಿಲ್ಲ ಎನ್ನುವ ಸ್ಥಿತಿಯಲ್ಲಿವೆ. ಈ ರಸ್ತೆಗಳಿಗೆ ಕಾಯಕಲ್ಪ ಯಾವಾಗ ಎನ್ನುವುದು ಜನರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.