ಚಿಕ್ಕಮಗಳೂರು: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 2024-25ನೇ ಶೈಕ್ಷಣಿಕ ಸಾಲಿನ 12ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಸೇಂಟ್ ಮೇರಿಸ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಪುಷ್ಕರಣಿ ಎಲ್. ಅಖಿಲ ಭಾರತ ಮಟ್ಟದಲ್ಲಿ 7ನೇ ಮೆರಿಟ್ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 98.25 ಅಂಕ ಗಳಿಸಿದ್ದಾರೆ. ಈಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ವೈದ್ಯ ಡಾ.ಇ. ಲಕ್ಷ್ಮೀಕಾಂತ್ ಮತ್ತು ಪ್ರಾಧ್ಯಾಪಕಿ ಟಿ.ಪಿ. ರೂಪಾ ಅವರ ಪುತ್ರಿ.
‘7ನೇ ಮೆರಿಟ್ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಹಗಲು– ರಾತ್ರಿ ನಿದ್ದೆಗೆಟ್ಟು ಓದಬೇಕೆಂದಿಲ್ಲ. ಪಾಠ ಮಾಡುವಾಗ ಮತ್ತು ನಾವು ಓದುವಾಗ ಗಮನ ಕೇಂದ್ರೀಕರಿಸಿಕೊಂಡಿದ್ದರೆ ಸಾಕು. ಮುಂದೆ ನರವಿಜ್ಞಾನದಲ್ಲಿ ಸಂಶೋಧನೆ ಮಾಡಬೇಕು ಎಂಬ ಬಯಕೆ ಇದೆ’ ಎಂದು ಪುಷ್ಕರಣಿ ಹೇಳಿದರು.
‘ಕೆನಡಾದ ಟೊರೆಂಟೊ ವಿಶ್ವವಿದ್ಯಾಲಯ ನೀಡುವ ₹2 ಕೋಟಿ ಮೊತ್ತದ ಶಿಷ್ಯ ವೇತನಕ್ಕೂ ಪುಷ್ಕರಣಿ ಆಯ್ಕೆಯಾಗಿದ್ದು, ನಾಲ್ಕು ವರ್ಷ ಅಲ್ಲಿ ಉಚಿತ ಶಿಕ್ಷಣ ದೊರೆಯಲಿದೆ. ಜಾಗತಿಕ ಮಟ್ಟದಲ್ಲಿ 36 ವಿದ್ಯಾರ್ಥಿಗಳಿಗೆ ಈ ವಿಶ್ವವಿದ್ಯಾಲಯ ಶಿಷ್ಯ ವೇತನ ನೀಡುತ್ತಿದ್ದು, ಪುಷ್ಕರಣಿ 36ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ’ ಎಂದು ಸೇಂಟ್ ಮೇರಿಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಜೆರಾಲ್ಡ್ ಲೋಬೊ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.