ADVERTISEMENT

1,028 ಜನರಿಗಿನ್ನೂ ಪರಿಹಾರ ಸಿಕ್ಕಿಲ್ಲ

ತೆಂಗು ಬೆಳೆಗೆ ರಾಜ್ಯ ಸರ್ಕಾರದ ಪರಿಹಾರಧನ: ಎದುರಾದ ತಾಂತ್ರಿಕ ತೊಂದರೆ

ಬಾಲು ಮಚ್ಚೇರಿ
Published 19 ಸೆಪ್ಟೆಂಬರ್ 2019, 10:10 IST
Last Updated 19 ಸೆಪ್ಟೆಂಬರ್ 2019, 10:10 IST
ವೈ.ಎಚ್.ನೀಲಕಂಠಪ್ಪ
ವೈ.ಎಚ್.ನೀಲಕಂಠಪ್ಪ   

ಕಡೂರು: ರಾಜ್ಯ ಸರ್ಕಾರ ತೆಂಗು ಬೆಳೆಗೆ ಪರಿಹಾರವಾಗಿ ಹಲವು ಫಲಾನುಭವಿಗಳ ಖಾತೆಗೆ ಹಣ ಬಂದಿದ್ದರೂ, ಇನ್ನೂ ಅನೇಕರು ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.

ಸತತ ಬರದಿಂದ ಕಂಗೆಟ್ಟ ಕಡೂರು ತಾಲ್ಲೂಕಿಗೆ ಉತ್ಪಾದನಾ ಸುಧಾರಣಾ ಕಾರ್ಯ ಯೋಜನೆಗಾಗಿ ಕಳೆದ ವರ್ಷ ರಾಜ್ಯ ಸರ್ಕಾರ ಅನುತ್ಪಾದಕ ಅಥವಾ ಒಣಗಿರುವ ತೆಂಗಿನ ಮರಗಳಿಗೆ ತಲಾ ₹400 ಪರಿಹಾರವನ್ನು ಪ್ರಕಟಿಸಿತ್ತು. ಇದರನ್ವಯ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ನಡೆಸಿದ್ದವು.

2016-17 ನೇ ಸಾಲಿನಲ್ಲಿ ನಡೆಸಿದ್ದ ಸಮೀಕ್ಷೆ ಆಧಾರದಲ್ಲಿ ಮತ್ತೆ 2017-18 ನೇ ಸಾಲಿನಲ್ಲಿ ಮರು ಸಮೀಕ್ಷೆ ನಡೆಸಿದ್ದು, 14,912 ಫಲಾನುಭವಿಗಳನ್ನು ಗುರುತಿಸಿ, ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಗೆ ಕಳುಹಿಸಲಾಗಿತ್ತು. ಒಣಗಿದ ತೆಂಗಿನ ಮರಗಳ ಸಂಖ್ಯೆ 3,33,221 ಎಂದು ಗುರುತಿಸಲಾಗಿತ್ತು.

ADVERTISEMENT

ತಾಂತ್ರಿಕ ಸಮಿತಿಯು, ಈ ಪಟ್ಟಿ ಪರಿಶೀಲಿಸಿ, 14,470 ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿದ್ದು, ಒಟ್ಟು 3,10,
550 ತೆ‍ಂಗಿನಮರಗಳು ಒಣಗಿದೆ ಎಂದು ಹೇಳಿತ್ತು. ಇದರ ಪ್ರಕಾರ ಒಟ್ಟು ಮೂರು ಕಂತಿನಲ್ಲಿ ಹಣ ಬಿಡುಗಡೆಯಾಗಿ, ನೇರ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿತ್ತು.

ಮೊದಲ ಹಂತದಲ್ಲಿ 11,668 ಫಲಾನುಭವಿಗಳಿಗೆ ₹10,89,39,200 ಎರಡನೇ ಹಂತದಲ್ಲಿ 932 ಜನರಿಗೆ ₹1,53,24,000 ಮತ್ತು ಮೂರನೇ ಹಂತದಲ್ಲಿ 400 ಜನರಿಗೆ ₹48,79,200 ಅನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಒಟ್ಟು 13 ಸಾವಿರ ಫಲಾನುಭವಿಗಳ ಖಾತೆಗೆ ₹12,91,42,400 ಪರಿಹಾರವಾಗಿ ನೀಡಲಾಗಿದೆ.

ಉಳಿದ 1,440 ಫಲಾನುಭವಿಗಳ ಪೈಕಿ 442 ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಅನುಮೋದನೆ ದೊರೆತಿಲ್ಲ. 1,028 ರೈತರಿಗೆ ಇನ್ನೂ ಪರಿಹಾರದ ಹಣ ದೊರೆತಿಲ್ಲ ಎ‍ಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೈತರು ಅಗತ್ಯ ದಾಖಲೆಗಳನ್ನು ನೀಡಿ ಎರಡು ತಿಂಗಳು ಕಳೆದಿವೆ. ಆದರೂ ಇನ್ನೂ ಪರಿಹಾರದ ಹಣ ಬಂದಿಲ್ಲ. ಪರಿಹಾರದ ಹಣ ದೊರೆತರೆ ಏನಾದರೂ ಒಂದಿಷ್ಟು ಪುನಶ್ಚೇತನ ಕೆಲಸ ಮಾಡಬಹುದು ಎಂಬ ನಿರೀಕ್ಷೆ ನಮ್ಮದಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ತಾಂತ್ರಿಕ ತೊಂದರೆಗಳು

ಫಲಾನುಭವಿಗಳ ಖಾತೆ ಹಣ ಜಮಾ ಮಾಡಲು ತಾಂತ್ರಿಕ ತೊಂದರೆಗಳು ಎದುರಾಗಿದ್ದು, ಇದರಿಂದ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಕಾರ್ಡ್ ಲಿಂಕ್ ಮಾಡದಿರುವುದು, ಆಧಾರ್ ಅಪ್‌ಡೇಟ್ ಮಾಡಿಸಿ ಬ್ಯಾಂಕ್‌ ಖಾತೆಗೆ ಜೋಡಣೆ ಮಾಡದೇ ಇರುವುದು, ಖಾತೆಯಲ್ಲಿ ಕನಿಷ್ಠ ಉಳಿತಾಯ ಇಲ್ಲದಿರುವುದು ಹಾಗೂ ಖಾತೆ ಚಾಲ್ತಿಯಲ್ಲಿ ಇಲ್ಲದಿರುವುದು ಪ್ರಮುಖ ತೊಂದರೆಗಳಾಗಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.